ಶಿವಮೊಗ್ಗದ ರಂಗಾಯಣವು ಕುವೆಂಪು ರಂಗಮಂದಿರದಲ್ಲಿ 2026, ಏಪ್ರಿಲ್ 25 ಮತ್ತು 26ರಂದು ಸಂಜೆ 6.30ಕ್ಕೆ ನಟರಾಜ್ ಹೊನ್ನವಳ್ಳಿ ನಿರ್ದೇಶನದ ಬೊಳುವಾರು ಮಹಮ್ಮದ್ ಕುಂಞ ಅವರ ಕಾದಂಬರಿ ಆಧಾರಿತ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ರಂಗಾಯಣದ ನಿರ್ದೇಶಕ ಪ್ರಸನ್ನ ಡಿ ಸಾಗರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಶಿವಮೊಗ್ಗ ರಂಗಾಯಣವು ನಾಟಕವನ್ನು ಪ್ರಸ್ತುತಪಡಿಸಲಿದ್ದು ರಂಗಪಠ್ಯ ವಿನ್ಯಾಸವನ್ನು ನಿರ್ದೇಶಕ ನಟರಾಜ್ ಹೊನ್ನವಳ್ಳಿ ನಿರ್ವಹಿಸಿದ್ದು, ನಾಟಕದ ರೂಪಾಂತರವನ್ನು ಮಂಜುನಾಥ್ ಗೋಮಾರದಹಳ್ಳಿ ರಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸಹ ನಿರ್ದೇಶನ ನಿರ್ವಹಣೆ ಸಲ್ಮಾದಂಡಿನ್, ರಾಘವ ಕಮ್ಮಾರ ಸಂಗೀತ ಆಯೋಜನೆ ಇರಲಿದೆ. ಮಧುಸೂದನ್ ಬಿ.ಆರ್, ರಮೇಶ್ ಎಸ್ ಮೈಸೂರು, ಶಂಕರ್ ಕೆ ಬೆಳಲಕಟ್ಟೆ ರಂಗಸಜ್ಜಿಕೆ ನಿರ್ಮಾಣವನ್ನು ಕೈಗೊಂಡಿದ್ದು, ಬೆಳಕಿನ ನಿರ್ವಹಣೆ ಮಂಜು ನಾರಾಯಣ್, ಡಾ. ಸಹನಾ ಪಿಂಜರ್ ವಸ್ತ್ರ ವಿನ್ಯಾಸವಿರಲಿದೆ.
ಈ ಸುದ್ದಿ ಓದಿದ್ದೀರಾ? http://ದಾವಣಗೆರೆ ಮಾದರಿ ರಾಜಕಾರಣ; ಎಚ್ಚರಿಕೆ ಕಾಂಗ್ರೆಸಿಗೋ, ಮುಸ್ಲಿಂರಿಗೋ? ಮುಸ್ಲಿಂರ ಮುಂದಿನ ನಡೆಯೇನು?
“ಸ್ವಾತಂತ್ರ್ಯದ ಓಟ” ನಾಟಕವು ಬೊಳುವಾರು ಮಹಮ್ಮದ್ ಕುಂಞ ಅವರ ಕಾದಂಬರಿ ಆಧಾರಿತವಾಗಿದೆ. ಇದು ನಮ್ಮ ಸಮಕಾಲೀನ ಸಂದರ್ಭದ ಧಾರ್ಮಿಕ, ರಾಜಕೀಯ ಸಂರ್ಘಷಗಳಿಗೆ ಕನ್ನಡಿ ಹಿಡಿದ ನಾಟಕ.
ನಾಟಕದ ಕಥಾ ಹಂದರದಲ್ಲಿ ;
ಸಿಖ್ ಹೆಣ್ಣುಮಕ್ಕಳಿಬ್ಬರಿಗೆ ಸಹಾಯ ಮಾಡಲೆಂದು ಪಾಕಿಸ್ತಾನದ ಗಡಿದಾಟಿ ಭಾರತಕ್ಕೆ ಬಂದ ಮುಸ್ಲಿಂ ಹುಡುಗ ಚಾಂದ್ ಅಲೀ ತನ್ನ ಮಾತೃಭೂಮಿಗೆ ಹಿಂದಿರುಗಿ ಹೋಗಲಾರದ ಇಕ್ಕಟ್ಟಿಗೆ ಸಿಕ್ಕಿಕೊಂಡು ಭಾರತದಲ್ಲಿ ಉಳಿದು, ಐವತ್ತು ವರ್ಷಗಳ ಕಾಲ ನಿರಂತರವಾಗಿ ಅನುಭವಿಸುವ ಸಂತೋಷ, ನೋವು, ಹತಾಶೆ, ಸಂಕಟಗಳ ಅಭಿವ್ಯಕ್ತಿ ಈ ನಾಟಕದಲ್ಲಿ ಹರಡಿಕೊಂಡಿದೆ. ಇಡೀ ನಾಟಕದ ಬೆಳವಣಿಗೆಯಲ್ಲಿ ಚಾಂದ್ ಆಲೀಯ ಪಾತ್ರ ಮಹತ್ವದ್ದಾಗಿದ್ದು, ದೇಶದಲ್ಲಿ ಘಟಿಸುತ್ತಿರುವ ಎಲ್ಲಾ ರಾಜಕೀಯ, ಸಾಮಾಜಿಕ, ಘಟನೆಗಳಿಗೂ ಸಾಕ್ಷಿ ಪ್ರಜ್ಞೆಯಂತಿದೆ. ‘ಸ್ವಾತಂತ್ರ್ಯದ ಓಟ” ಅವನೊಬ್ಬನ ಓಟವಲ್ಲ. ಬದಲಿಗೆ ಅವನ ಭಯ, ನರಳುವಿಕೆ, ಆತಂಕ ಈ ಓಟದ ಆಂತರ್ಯದಲ್ಲಿನ ಜೀವದ್ರವ್ಯವಾಗಿದೆ. ಅವನ ಮಾತೃಭೂಮಿಯ ನಿಗೂಢತೆ, ಹುಟ್ಟಿನ ಮೂಲದ ಬಗ್ಗೆ ಬಾಯಿ ಬಿಡಲಾಗದ ಮೌನ, ಅವನ ಬದುಕಿನುದ್ದಕ್ಕೂ ಭೂತವಾಗಿ ಬೆಳೆದ ಅಭದ್ರತೆಯ ಪರಿಣಾಮವಾಗಿದೆ.
ಇಲ್ಲಿದ್ದೂ ಇಲ್ಲಿಯವನಾಗದ, ಅಲ್ಲಿಗೆ ಹೋಗಲಾರದ ಆತಂತ್ರ ಸ್ಥಿತಿಯನ್ನು ಸಾರುತ್ತಿದೆ. ಯಾದವೀ ಕಲಹವು ಹಿಂಸಾಕಾಂಡಕ್ಕೆ ತಿರುಗಿದಾಗ ಆಗಿ ಹೋದ ಅನಾಹುತ ಅಗಣಿತ, ದೇಶ ವಿಭಜನೆ ಎನ್ನುವುದು ರಾಷ್ಟ್ರ ನಾಯಕರಿಗೆ ಕತ್ತರಿಯಲ್ಲಿ ಭೂಪಟವನ್ನು ಕತ್ತರಿಸಿದಷ್ಟು ಸುಲಭ. ಆದರೆ ಅನುಭವಿಸುವ ಜನಕ್ಕೆ ಅದೊಂದು ಮಹಾನರಕ. ದೇಶ ಒಂದಾಗಿದ್ದಾಗ ಜನಸಾಮಾನ್ಯರು ಬಂಧು ಬಳಗದ ಪ್ರಜ್ಞೆಯಲ್ಲಿ ಬಾಳು ಕಟ್ಟಿಕೊಂಡಿದ್ದರು. ದೇಶ ವಿಭಜನೆಯಾದ ತಕ್ಷಣವೇ ಮಾನವೀಯತೆ ಎಂಬುದು ಮರೆತು ಹೋಗಿ ದ್ವೇಷದ ಕಿಚ್ಚಿನಲಿ ಎರಡು ದೇಶಗಳು ಹೊತ್ತಿ ಉರಿಯುತ್ತವೆ. ಜನರು ತಮ್ಮ ಸ್ವಂತ ನೆರಳನ್ನು ನೋಡಿಯೇ ಬೆಚ್ಚಿ ಬೀಳುತ್ತಿದ್ದ ದಿನಗಳು. ಎಲ್ಲಿಗೆ ಹೋಗುತ್ತಿದ್ದೇವೆ? ಎಷ್ಟು ದೂರ? ಯಾರಿಗೂ ಗೊತ್ತಿಲ್ಲ. ಏನು ಮಾಡಲು ಸಾಧ್ಯವಿಲ್ಲದೆ ಮನೆ, ಜಮೀನು, ಅಂಗಡಿ, ಗೆಳೆಯ ಗೆಳತಿಯರನ್ನು ಕರೆದುಕೊಂಡು ಓಡುತ್ತಿರುವವರಿಗೆ ಒಂದೇ ಗುರಿ: ಓಡುವುದು ಮತ್ತು ಓಡುವುದು. ಸ್ವಾತಂತ್ರ್ಯ ಸಿಕ್ಕಿತು. ಬ್ರಿಟಿಷರನ್ನು ಓಡಿಸಿ ಆಗಿತ್ತು, ಈಗ ಓಡುವುದು ಭಾರತೀಯರ ಸರದಿ. ಭಯವೆಂಬುದು ಪೀಳಿಗೆಯ ಭಯವಾಗಿ, ಮಕ್ಕಳಲ್ಲಿ ವಿಸ್ತರಿಸಿಕೊಂಡಿದೆ. ಇಂತಹ ಸನ್ನಿವೇಶಗಳನ್ನು ಬರಿಯುವಾಗ ಬೊಳುವಾರರ ಮಾನವೀಯ ಆರ್ದ್ರತೆಯ ಶೋಧದ ಪಾತಾಳಿಯನ್ನು ಮುಟ್ಟುತ್ತದೆ. ಇಲ್ಲಿಯೇ ಬೆಳೆದ ಚಾಂದ್ ಅಲಿಗೆ ಪಾಕಿಸ್ತಾನ ಜನ್ಮಭೂಮಿಯಾದರೆ, ಹಿಂದೂಸ್ತಾನ ಅವನ ಕರ್ಮಭೂಮಿಯಾಗಿ ಮಾರ್ಪಡುತ್ತದೆ.








