ರಾಜ್ಯ ಸಚಿವ ಸಂಪುಟ ವಿಸ್ತರಣೆ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯ ಯಾವುದೇ ಶಾಸಕರು ಅಥವಾ ನಾಯಕರಿಗೆ ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಅಸಮಾಧಾನದ ವಾತಾವರಣ ನಿರ್ಮಾಣವಾಗಿದೆ ಹಾಗೂ ಮೊದಲನೇ ಪಟ್ಟಿಯಲ್ಲಿ ಹಿನ್ನಡೆಯಾಗಿದೆ ಎಂಬ ಮಾತು ಸಾರ್ವಜನಿಕ ವಲಯಗಳಲ್ಲಿ ಜೋರಾಗಿದೆ.
ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ಎ. ವಸಂತ್ ಕುಮಾರ್ ಹಾಗೂ ಎನ್ ಎಸ್ ಬೋಸರಾಜು ಅವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿದ್ದವು. ಇದರ ಜತೆಗೆ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಹಾಗೂ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಕೂಡ ಸಚಿವ ಸ್ಥಾನದ ರೇಸ್‌ನಲ್ಲಿದ್ದರು ಎಂದು ಪಕ್ಷದ ಆಪ್ತ ಮೂಲಗಳಿಂದ ಕೇಳಿಬಂದಿತ್ತು.
ಆದರೆ ಅಂತಿಮವಾಗಿ ಪ್ರಕಟವಾದ ಸಚಿವ ಸಂಪುಟ ಪಟ್ಟಿಯಲ್ಲಿ ಜಿಲ್ಲೆಯ ಯಾವುದೇ ನಾಯಕರಿಗೆ ಅವಕಾಶ ಸಿಗದಿರುವುದು ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ. ಜಿಲ್ಲೆಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಈ ಬೆಳವಣಿಗೆಯಿಂದ ಬೇಸರ ವ್ಯಕ್ತಪಡಿಸಿದ್ದಾರೆ.
ಮೊದಲನೇ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಿಯಾಂಕ ಖರ್ಗೆ, ಈಶ್ವರ ಖಂಡ್ರೆ ಹಾಗೂ ಶರಣ ಪ್ರಕಾಶ್ ಪಾಟೀಲ್ ಅವರಿಗೆ ಸಚಿವ ಸ್ಥಾನ ಮುಂದುವರೆದಿದೆ. ಕಲಬುರಗಿ ಹೈಕಮಾಂಡ್ ರಾಜಕೀಯ ಇರುವುದರಿಂದ ಸಚಿವ ಸ್ಥಾನ ಭದ್ರವಾಗಿದೆ. ಆದರೆ ರಾಯಚೂರು ಜಿಲ್ಲೆಗೆ ನಿರಾಸೆಯಾಗಿದೆ. ಎರಡನೇ ಪಟ್ಟಿಯಲ್ಲಿಯಾದರೂ ಜಿಲ್ಲೆಗೆ ಸಚಿವ ಸ್ಥಾನ ಸಿಗಬಹುದೇ? ಜಿಲ್ಲೆಯಲ್ಲಿ ಹೊಸ ಸಂಚಲನ ಉಂಟಾಗುವುದೇ ಎಂದು ಕಾದು ನೋಡೋಣ.
ಇದನ್ನೂ ಓದಿದ್ದೀರಾ? ಪರಮೇಶ್ವರಗೆ ಎರಡನೇ ಬಾರಿ ಡಿಸಿಎಂ ಹುದ್ದೆ: ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಪರೀಕ್ಷೆ
ಜಾತಿ ಲೆಕ್ಕಚಾರದಲ್ಲಿಯೇ ಸಚಿವ ಸ್ಥಾನ ಹಂಚಿಕೆ ಮಾಡುವ ಪರಿಣಾಮ ಜಿಲ್ಲಾವಾರು ಸಚಿವ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆಯಾಗಿತ್ತು. ಲಿಂಗಾಯತ ಸಮುದಾಯದಲ್ಲಿ ಶರಣ ಪ್ರಕಾಶ ಪಾಟೀಲ್ ಅವರನ್ನು ಕಳೆದ ಬಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ನೀಡಲಾಗಿತ್ತು. ಈ ಬಾರಿಯಾದರೂ ಹಿರಿಯ ವ್ಯಕ್ತಿ ಹಂಪನಗೌಡ ಬಾದರ್ಲಿ ಅವರಿಗೆ ನೀಡಬೇಕಿತ್ತು ಎಂಬುದು ಜಿಲ್ಲೆಯ ಜನರ ಆಶಯವಾಗಿದೆ.
ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿರುವ ಮಾಹಿತಿಯಂತೆ, ಜಿಲ್ಲೆಯಲ್ಲಿ ಬಣಗಳ ನಡುವಿನ ಒಳಗುದ್ದಾಟದಿಂದ ಹಿನ್ನಡೆಯಾಗಿರಬಹುದು ಎಂಬುದು ಜಿಲ್ಲಾ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್




