ವರನಟ ಡಾ.ರಾಜಕುಮಾರ್ ಅವರು ಕೇವಲ ಒಬ್ಬ ನಟರಾಗಿರದೆ, ಅದ್ಭುತ ಗಾಯಕರಾಗಿ, ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಸಂಗೀತ ಕ್ಷೇತ್ರದಲ್ಲಿನ ಅವರ ಮಾಡಿದ ಸಾಧನೆಗಾಗಿ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿವೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಹೇಳಿದರು.
ಶುಕ್ರವಾರ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಸಾಹಿತ್ಯ ಸಂಘ ಬೀದರ ಇವರ ಸಹಯೋಗದಲ್ಲಿ ಡಾ.ರಾಜಕುಮಾರ ರವರ 97ನೇ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ ʼರಾಜರಸʼ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼಕನ್ನಡ ಭಾಷೆಯ ಉಳಿವಿಗಾಗಿ ನಡೆದ ಐತಿಹಾಸಿಕ ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ಕುಮಾರ್ ಅವರ ಪಾತ್ರ ಅನನ್ಯವಾದುದು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನೀಡಿದ ಸಹಕಾರದಿಂದ ಚಳವಳಿಗೆ ದೊಡ್ಡ ಶಕ್ತಿ ಬಂದಿತ್ತು. ರಾಜ್ ಅವರ ಕಲಾ ಸೇವೆಗಾಗಿ ಅವರಿಗೆ ಅನೇಕ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿವೆ. ಅವರು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದಾರೆʼ ಎಂದರು.
ಹಿರಿಯ ಸಾಹಿತಿ ಡಾ.ಜಗನ್ನಾಥ ಹೆಬ್ಬಾಳೆ ವಿಶೇಷ ಉಪನ್ಯಾಸ ನೀಡಿದ ಅವರು, ʼಕನ್ನಡ ಚಿತ್ರರಂಗದ ಧ್ರುವತಾರೆ ಡಾ.ರಾಜ್ಕುಮಾರ್ ಅವರು ಸಮಾಜದ ಏಳಿಗೆಗಾಗಿ ಶ್ರಮಿಸಿದ ಮಹಾನ್ ಸುಧಾರಕರು. ಪೌರಾಣಿಕ ಮತ್ತು ಸಾಮಾಜಿಕ ಚಿತ್ರಗಳ ಮೂಲಕ ಜನಮನ ಗೆದ್ದಿದ್ದ ಅವರು, ನಟನೆಯ ಜೊತೆಗೆ ಸಂಗೀತ ಕ್ಷೇತ್ರದಲ್ಲಿಯೂ ರಾಷ್ಟ್ರಮಟ್ಟದ ಸಾಧನೆ ಮಾಡಿರುವುದು ಅವಿಸ್ಮರಣೀಯ. ನಾಡು-ನುಡಿಯ ರಕ್ಷಣೆಗಾಗಿ ಹೋರಾಡಿದ ಅವರ ನಾಯಕತ್ವದ ಗುಣ ಶ್ಲಾಘನೀಯವಾದದ್ದು. ಕಲೆ ಮತ್ತು ಸಮಾಜ ಸೇವೆಯನ್ನು ಸಮನಾಗಿ ತೂಗಿಸಿದ ಅಣ್ಣಾವ್ರ ಜೀವನ ಮೌಲ್ಯಗಳು ಇಂದಿನ ತಲೆಮಾರಿಗೆ ಸ್ಪೂರ್ತಿಯಾಗಿದೆʼ ಎಂದರು.
ಪ್ರಾಚಾರ್ಯ ಡಾ.ಬಸವರಾಜ್ ಬಲ್ಲೂರ್ ವಿಶೇಷ ಉಪನ್ಯಾಸ ನೀಡಿ, ʼರಾಜ್ಕುಮಾರ್ ಅವರು ತಮ್ಮ ನಟನೆಯ ಮೂಲಕ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಲ್ಲದೆ, ಗೋಕಾಕ್ ಚಳವಳಿಯಂತಹ ಸಾಂಸ್ಕೃತಿಕ ಹೋರಾಟಗಳ ಮೂಲಕ ನಾಡು-ನುಡಿಯ ರಕ್ಷಣೆಗೆ ಬದ್ಧರಾಗಿದ್ದರು. ಕಲಾವಿದರು ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರಬೇಕು ಎಂಬುವುದನ್ನು ಅಣ್ಣಾವ್ರು ತೋರಿಸಿಕೊಟ್ಟಿದ್ದರು. ಡಾ.ರಾಜ್ ಅವರ ಸರಳತೆ ಮತ್ತು ಮೌಲ್ಯಯುತ ಜೀವನ ಸಮಾಜಕ್ಕೆ ಆದರ್ಶಪ್ರಾಯವಾಗಿದೆʼ ಎಂದು ತಿಳಿಸಿದರು.
ಇದನ್ನೂ ಓದಿ : ಮತ್ತೆ ಬಿಎಸ್ವೈ ಮಂತ್ರ : ಲಿಂಗಾಯತ ಮತಗಳ ಕ್ರೋಢೀಕರಿಸಲು ಬಿಜೆಪಿ ಕಸರತ್ತು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸುಳ್ಳೊಳ್ಳಿ, ಹಿರಿಯ ಪತ್ರಕರ್ತ ಮಾಳಪ್ಪ ಅಡಸಾರೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗ್ರಂಥಪಾಲಕ ತನ್ವಿರ್ ಇಕ್ಬಾಲ್, ಸಿನಿ ಚಾಲಕ ವಿಜಯಕೃಷ್ಣ ಸೋಲಪುರ, ಆಶೀಶ್ ಹಜಾರೆ, ಗೀತಾಬಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.





