ರಾಜ್ಯದಲ್ಲಿ ಡಿ.ಕೆ.ಶಿವಕುಮಾರ ಅವರ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ದಲಿತ ನಾಯಕ ಡಾ.ಎಚ್.ಸಿ. ಮಹಾದೇವಪ್ಪ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಹಾಗೂ ದಲಿತ ಹಿರಿಯ ಮುಖಂಡ ಬಾಬು ಟೈಗರ್, ʼಡಾ. ಎಚ್.ಸಿ. ಮಹಾದೇವಪ್ಪ ಅವರು ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದು, ವಿವಿಧ ಇಲಾಖೆಗಳ ಸಚಿವರಾಗಿ ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತ ನೀಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆʼ ಎಂದು ಹೇಳಿದರು.
ಜಿಲ್ಲಾ ಸಂಚಾಲಕ ಅರುಣ ಪಟೇಲ್ ಅವರು ಮಾತನಾಡಿ, “ಅಂತರರಾಷ್ಟ್ರೀಯ ಮಟ್ಟದಲ್ಲಿ ಬೀದರ ಜಿಲ್ಲೆಯ ಬಸವಕಲ್ಯಾಣದಿಂದ ಚಾಮರಾಜನಗರವರೆಗೆ ಗಮನ ಸೆಳೆದ ಏಕಕಾಲಕ್ಕೆ ಮಾನವ ಸರಪಳಿ ನಿರ್ಮಿಸಿ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದ ಕೀರ್ತಿಯೂ ಮಹಾದೇವಪ್ಪ ಅವರಿಗೆ ಸಲ್ಲುತ್ತದೆ. ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಹೋರಾಟ ನಡೆಸಿರುವ ಅವರ ಅನುಭವ ಮತ್ತು ಸೇವೆಯನ್ನು ಪರಿಗಣಿಸಿ ನೂತನ ಸಚಿವ ಸಂಪುಟದಲ್ಲಿ ಅವರಿಗೆ ಸ್ಥಾನ ನೀಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ಇಂಗ್ಲಿಷ್ನಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ವಿಮಾನಯಾನ ಮಾಡಿಸಿದ ಶಿಕ್ಷಕ
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ಬಸವರಾಜ ಅಲಿಯಂಬರ್, ಶಿರೋಮಣಿ ಹಲಗೆ, ಶಿವಕುಮಾರ ಗೂನಳ್ಳಿ, ರಾಹುಲ ಹಾಲಹಿಪ್ಪರಗಾ, ಗೌತಮ ಮುತ್ತಂಗಿಕರ, ಮುಕೇಶ ರಾಯ್, ರಾಜಕುಮಾರ ವಾಘಮಾರೆ, ಸುರೇಶ ಸಾಗರ ಹಾಗೂ ವಿಜಯಕುಮಾರ ಭಾವಿಕಟ್ಟಿ , ಸಚಿನ್ ಲಕ್ಕಿ ಸೇರಿದಂತೆ ಹಲವರು ಭಾಗವಹಿಸಿದ್ದರು.





