ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ವಾಹನ ನಿರ್ವಹಣೆ ದುಬಾರಿಯಾಗುತ್ತಿರುವ ನಡುವೆಯೇ, ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ಭೈರಪ್ಪ ಬೆಳ್ಳಂಕಿ ಕಡಿಮೆ ವೆಚ್ಚದಲ್ಲಿ ಗೂಡ್ಸ್ ಸಾಗಣೆ ವ್ಯವಸ್ಥೆ ರೂಪಿಸಿ ಗಮನ ಸೆಳೆದಿದ್ದಾರೆ. ತೈಲ ಇಂಧನ ಮತ್ತು ವಿದ್ಯುತ್ ಶಕ್ತಿ ಎರಡರ ಬಳಕೆಗೂ ಆಯ್ಕೆಯಿದ್ದು ಇಂಧನ ಬಿಕ್ಕಟ್ಟು ಸೃಷ್ಟಿಯಾಗಿರುವ ದಿನಗಳಲ್ಲಿ ಈ ವಿನೂತನ ಪ್ರಯೋಗ ಜನರ ಚಿತ್ತ ಸೆಳೆದಿದೆ.
ದುಬಾರಿ ಗೂಡ್ಸ್ ವಾಹನ ಖರೀದಿಸುವ ಬದಲು, ತಮ್ಮ ಬೈಕ್ನ ಹಿಂಭಾಗಕ್ಕೆ ಸುಮಾರು 16 ಸಾವಿರ ರೂಪಾಯಿ ವೆಚ್ಚದಲ್ಲಿ 500 ಕೆಜಿ ಸಾಮರ್ಥ್ಯದ ಗೂಡ್ಸ್ ಕ್ಯಾರಿಯರ್ ಅಳವಡಿಸಿಕೊಂಡು ಹಮಾಲಿ ಹಾಗೂ ಸಣ್ಣ ಪ್ರಮಾಣದ ಸರಕು ಸಾಗಣೆ ಕೆಲಸ ಮಾಡುತ್ತಿದ್ದಾರೆ. ಇವರ ಈ ವಿನೂತನ ಪ್ರಯೋಗ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
ತಮ್ಮ ನೂತನ ಪ್ರಯೋಗದ ಕುರಿತು ಈ ದಿನ.ಕಾಮ್ ಜತೆ ಮಾತನಾಡಿದ ಭೈರಪ್ಪ ಬೆಳ್ಳಂಕಿ “ಮಾರುಕಟ್ಟೆಯಲ್ಲಿ ಲಭ್ಯವಿರುವ ಮೂರು ಚಕ್ರದ ಎಲೆಕ್ಟಿಕ್ ಗೂಡ್ಸ್ ವಾಹನಗಳಿಗೆ ಸುಮಾರು 1.50 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಆದರೆ ಕಡಿಮೆ ಬಂಡವಾಳದಲ್ಲಿ ಪರ್ಯಾಯ ವ್ಯವಸ್ಥೆ ರೂಪಿಸಿಕೊಂಡಿದ್ದರಿಂದ ನಿತ್ಯ ಸುಮಾರು 400 ಕೆಜಿ ತೂಕದ ಸರಕುಗಳನ್ನು ಸಾಗಿಸುತ್ತಿದ್ದೇನೆ. ಕಡಿಮೆ ಇಂಧನ ವೆಚ್ಚದಲ್ಲಿ ಸುಮಾರು 130 ಕಿಲೋಮೀಟರ್ವರೆಗೆ ಸಂಚರಿಸುವ ಸಾಮರ್ಥ್ಯ ಈ ವಾಹನಕ್ಕಿದೆ” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
“ಇಂಧನ ಬೆಲೆ ಗಗನಕ್ಕೇರಿದೆ ಪೆಟ್ರೋಲ್ ಡೀಸೆಲ್ ಬಳಕೆಯ ಪರ್ಯಾಯವಾಗಿ ವಿದ್ಯುತ್ ಚಾಲಿತ ವಾಹನವನ್ನು ಬಳಸುತ್ತಿದ್ದೇನೆ, ಒಮ್ಮೆ ಚಾರ್ಜ್ ಮಾಡಿದರೆ 130 ಕಿ.ಮೀ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇಂಧನ ವೆಚ್ಚದಿಂದ ಬಚಾವಾಗಲೂ ಮತ್ತು ಮಲಿನ ಮುಕ್ತ ಪರಿಸರ ಸ್ನೇಹಿ ವಾತಾವರಣ ನಿರ್ಮಾಣಕ್ಕೂ ಸಹಾಯವಾಗಿದೆ” ಎನ್ನುತ್ತಾರೆ ಭೈರಪ್ಪ.
ಪ್ರತಿದಿನ ಹಮಾಲಿ ಹಾಗೂ ಸರಕು ಸಾಗಣೆ ಕೆಲಸದ ಮೂಲಕ ಸುಮಾರು 1,000 ರಿಂದ 1,200 ರೂಪಾಯಿ ಆದಾಯ ಗಳಿಸುತ್ತಿರುವ ಅವರು, ಗ್ರಾಮೀಣ ಭಾಗದಲ್ಲಿ ಸ್ವಯಂ ಉದ್ಯೋಗಕ್ಕೆ ಹೊಸ ಮಾದರಿಯೊಂದನ್ನು ಪರಿಚಯಿಸಿದ್ದಾರೆ. ಇಂಧನ ದರ ಏರಿಕೆ ಹಾಗೂ ಹೆಚ್ಚುತ್ತಿರುವ ಸಾರಿಗೆ ವೆಚ್ಚದ ನಡುವೆ ಭೈರಪ್ಪ ಬೆಳ್ಳಂಕಿ ಅವರ ಈ ಪ್ರಯೋಗ ಸಣ್ಣ ವ್ಯಾಪಾರಿಗಳು ಹಾಗೂ ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯುವ ಮಾರ್ಗವಾಗಿ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ> ಬೆಳಗಾವಿ | ನಾನು ಸಚಿವ ಸ್ಥಾನದ ಲಾಭಿ ಮಾಡಲ್ಲ: ಶಾಸಕ ವಿಶ್ವಾಸ ವೈದ್ಯ
“ಪೆಟ್ರೋಲ್ ಹಾಗೂ ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ದುಬಾರಿ ಗೂಡ್ಸ್ ವಾಹನ ಖರೀದಿಸುವುದು ನನಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಕಡಿಮೆ ವೆಚ್ಚದಲ್ಲಿ ಬೈಕ್ಗೆ ಗೂಡ್ಸ್ ಕ್ಯಾರಿಯರ್ ಅಳವಡಿಸಿಕೊಂಡು ಹಮಾಲಿ ಮತ್ತು ಸರಕು ಸಾಗಣೆ ಕೆಲಸ ಆರಂಭಿಸಿದ್ದೇನೆ. ಸುಮಾರು 16 ಸಾವಿರ ರೂಪಾಯಿ ವೆಚ್ಚದಲ್ಲಿ ಈ ವ್ಯವಸ್ಥೆ ಮಾಡಿಕೊಂಡಿದ್ದು, ದಿನಕ್ಕೆ 1,000 ರಿಂದ 1,200 ರೂಪಾಯಿ ಆದಾಯ ಸಿಗುತ್ತಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಉಪಯೋಗ ಪಡೆಯಬಹುದು ಎಂಬುದನ್ನು ಈ ಪ್ರಯೋಗದ ಮೂಲಕ ತೋರಿಸಿದ್ದೇನೆ. ಗ್ರಾಮೀಣ ಭಾಗದ ಯುವಕರು ಹಾಗೂ ಸಣ್ಣ ವ್ಯಾಪಾರಿಗಳು ಇಂತಹ ಪರ್ಯಾಯ ವ್ಯವಸ್ಥೆಗಳನ್ನು ಬಳಸಿಕೊಂಡು ಸ್ವಯಂ ಉದ್ಯೋಗ ಕಂಡುಕೊಳ್ಳಬಹುದು” ಎಂದು ಭೈರಪ್ಪ ಬೆಳ್ಳಂಕಿ ಅಭಿಪ್ರಾಯಿಸಿದ್ದಾರೆ.
ಇಂಧನ ದರ ಏರಿಕೆಯಿಂದ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಅಥಣಿಯ ಭೈರಪ್ಪ ಬೆಳ್ಳಂಕಿ ಅವರ ಈ ವಿನೂತನ ಪ್ರಯೋಗ ಗಮನಾರ್ಹವಾಗಿದೆ. ಕಡಿಮೆ ಬಂಡವಾಳದಲ್ಲಿ ರೂಪಿಸಿದ ಗೂಡ್ಸ್ ಸಾಗಣೆ ವ್ಯವಸ್ಥೆಯ ಮೂಲಕ ಸ್ವಯಂ ಉದ್ಯೋಗ ಕಂಡುಕೊಂಡಿರುವ ಅವರು, ಗ್ರಾಮೀಣ ಭಾಗದ ಯುವಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಮಾದರಿಯಾಗಿದ್ದಾರೆ. ಕಡಿಮೆ ಖರ್ಚು ಹೆಚ್ಚು ಆದಾಯ ಎಂಬ ಪರಿಕಲ್ಪನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ಭೈರಪ್ಪ ಅವರ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು



