ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಸೇರಿದಂತೆ ಜೀವನಾವಶ್ಯಕ ವಸ್ತುಗಳ ದರ ಏರಿಕೆ ಮಾಡಿದ್ದು, ರಾಜ್ಯ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿಗಳಿಂದ ಜನ ಆ ದರ ಏರಿಕೆಯ ಹೊರೆ ತಡೆದುಕೊಂಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಭಾಲ್ಕಿ ತಾಲೂಕಿನ ಮೆಹಕರ್ ಗ್ರಾಮದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಉದ್ಘಾಟಿಸಿ ಮಾತನಾಡಿದ ಅವರು, “ಗ್ಯಾರಂಟಿ ಜಾರಿಗೆ ತಂದರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಪ್ರತಿಪಕ್ಷಗಳು ಕೂಗುತ್ತಿದ್ದವು. ಆದರೆ ನಮ್ಮ ಸರ್ಕಾರ ಗ್ಯಾರಂಟಿಯನ್ನೂ ಜಾರಿ ಮಾಡಿದೆ, ರಾಜ್ಯದ ಅಭಿವೃದ್ಧಿಯನ್ನೂ ಮಾಡುತ್ತಿದೆ. ಅದಕ್ಕೆ ಇಂದು ಉದ್ಘಾಟನೆಯಾದ 4.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೆಹಕರ್ ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಭವ್ಯ ಕಟ್ಟಡವೇ ಸಾಕ್ಷಿ” ಎಂದರು.
“ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ನಮ್ಮ ಗ್ಯಾರಂಟಿ ಜನಪ್ರಿಯತೆಯಿಂದ ಪ್ರತಿಪಕ್ಷಗಳು ಕಂಗೆಟ್ಟು ಹೋಗಿವೆ. ಬೀದರ್ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ 3,64,287 ಫಲಾನುಭವಿಗಳಿದ್ದು, ಆಗಸ್ಟ್ 2023ರಿಂದ ಜೂನ್ 2026ರವರೆಗೆ 2092.92 ಕೋಟಿ ಪಾವತಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 13,13,205 ಫಲಾನುಭವಿಗಳಿಗೆ, ಜುಲೈ 2023ರಿಂದ ಡಿಸೆಂಬರ್ 2024ರವರೆಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಾಗಿ 333.28 ಕೋಟಿ ಪಾವತಿಸಲಾಗಿದೆ” ಎಂದರು.
“ಗೃಹಜ್ಯೋತಿ ಯೋಜನೆಯಡಿ ಆಗಸ್ಟ್ 2023ರಿಂದ ಜುಲೈ 2026ರವರೆಗೆ 3,59,120 ಫಲಾನುಭವಿಗಳಿಗೆ 589.23 ಕೋಟಿ ಪಾವತಿಸಿದ್ದರೆ, ಶಕ್ತಿ ಯೋಜನೆ ಅಡಿ 13.89 ಕೋಟಿ ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ,ಇನ್ನು ನಿರುದ್ಯೋಗಿ ಯುವಜನರಿಗೆ ಜಿಲ್ಲೆಯಲ್ಲಿ 57.12 ಕೋಟಿ ಪಾವತಿಸಲಾಗಿದೆ” ಎಂದರು.
“ಸಾಯಗಾಂವ್ ಮಾರ್ಗವಾಗಿ ಭಾಲ್ಕಿ ಮೆಹಕರ್ ರಸ್ತೆಯ ಅಭಿವೃದ್ಧಿಗೆ 5 ಕೋಟಿ ಮಂಜೂರು ಮಾಡಲಾಗಿದ್ದು, ಈ ಕಾಮಗಾರಿಗೂ ಇಂದು ಚಾಲನೆ ನೀಡಿದ್ದೇನೆ. ಮೆಹಕರ್ ಜನರು ಊರಿನಲ್ಲಿ ಆಗುತ್ತಿರುವ ಪ್ರಗತಿಯನ್ನು ನೋಡಿ, ತಮ್ಮ ಊರು ಮಹಾರಾಷ್ಟ್ರಕ್ಕೆ ಸೇರದಿರುವುದು ಉತ್ತಮವಾಯಿತು. ಕರ್ನಾಟಕದಲ್ಲಿ ಉಳಿದಿದ್ದೆ ಒಳ್ಳೆಯದಾಯಿತು. ಈಗ ಪ್ರಗತಿ ಆಗುತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ” ಎಂದರು.

ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಜನಸ್ಪಂದನ ನಡೆಸುತ್ತಿದ್ದೆವು. ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಜಾಸೇವೆಯನ್ನು ಜಾರಿಗೆ ತಂದಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳು ನಿಮ್ಮ ಊರಿಗೆ ಬಂದಿದ್ದು, ಪಿಂಚಣಿ, ವಿಧವ ವೇತನ, ಸಂಧ್ಯಾ ಸುರಕ್ಷಾ, ಪೋಡಿ, ವಸತಿ, ನಿವೇಶನ ಹಂಚಿಕೆ, ಅಂಗನವಾಡಿ, ಶಾಲಾ ಕಟ್ಟಡ ಅಭಿವೃದ್ಧಿ, ದೇವಾಲಯಗಳ ಜೀರ್ಣೋದ್ಧಾರ, ಖಾಸಗಿ ಉದ್ಯೋಗ, ಪೊಲೀಸ್ ಸೇವೆ ಸೇರಿದಂತೆ ವಿವಿಧ ಇಲಾಖೆಗಳ ಸೇವೆಯಲ್ಲಿನ ಲೋಪದ ಬಗ್ಗೆ ದೂರು ನೀಡಲು ಅವಕಾಶವಿದ್ದು, ಇದಕ್ಕೆ ಖಚಿತ ಪರಿಹಾರ ಲಭಿಸುತ್ತದೆ ಎಂದರು.
ತಾವು ಪ್ರತಿ ತಿಂಗಳೂ 2 ಶನಿವಾರ ಬೀದರ್ ಜಿಲ್ಲೆಯಲ್ಲಿ ಪ್ರಜಾಸೇವೆ ಆಂದೋಲನದಲ್ಲಿ ಭಾಗಿಯಾಗಿ ಜನರ ಅಹವಾಲಿಗೆ ಸ್ಪಂದಿಸಿ, ಯಾವುದೇ ದಲ್ಲಾಳಿ, ಮಧ್ಯವರ್ತಿ ಇಲ್ಲದೆ, ಭ್ರಷ್ಟಾಚಾರ ಮುಕ್ತವಾಗಿ ಸಾರ್ವಜನಿಕ ಸೇವೆ ಲಭಿಸುವಂತೆ ಮಾಡಲಾಗುವುದು. ಚುನಾವಣೆ ಪೂರ್ವದಲ್ಲಿ ಮೆಹಕರ್ ಅಭಿವೃದ್ಧಿಯ ಭರವಸೆ ನೀಡಿದ್ದ ತಾವು ಆ ಎಲ್ಲ ಭರವಸೆ ಈಡೇರಿಸುತ್ತಿದ್ದು, ಉತ್ತಮ ರಸ್ತೆ, ಆರೋಗ್ಯ ಕೇಂದ್ರ, ಶಾಲಾ ಕಟ್ಟಡ ಅಭಿವೃದ್ಧಿ ಆಗುತ್ತಿದೆ ಎಂದರು.
ರಾಜ್ಯದಲ್ಲಿ ಈ ಬಾರಿ ಎಲ್ ನಿನೋ ಪ್ರಭಾವದಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ರಾಜ್ಯ ಸರ್ಕಾರ ಈಗಾಗಲೇ 101 ಜಿಲ್ಲೆಗಳನ್ನು ಕೇಂದ್ರ ಸರ್ಕಾರದ ನಿಯಮಗಳ ರೀತ್ಯ ಬರ ಪೀಡಿತ ಎಂದು ಘೋಷಿಸಿದ್ದು, ಶೀಘ್ರವೇ ಭಾಲ್ಕಿ ಜಿಲ್ಲೆಯೂ ಬರ ಪೀಡಿತ ಎಂದು ಘೋಷಣೆಯಾಗಲಿದೆ. ಮೆಹಕರ್ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಮೆಹಕರ್ ಸರ್ಕಾರಿ ಆಸ್ಪತ್ರೆಗೆ ಪ್ರಸೂತಿ ತಜ್ಞರು ಮತ್ತು ಮಕ್ಕಳ ತಜ್ಞ ವೈದ್ಯರ ನೇಮಕ ಆಗಿದೆ. ಭಾಲ್ಕಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ತಾವು ಸತತವಾಗಿ ಶ್ರಮಿಸುತ್ತಿರುವುದಾಗಿ ಸಚಿವರು ಭರವಸೆ ನೀಡಿದರು.
ಮಾಸಾಶನ, ಪಿಂಚಣಿ ಅರ್ಜಿಗಳು ಸ್ಥಳದಲ್ಲೇ ಇತ್ಯರ್ಥ
ಈ ಹಿಂದೆ ಜನರು ತಮ್ಮೂರಲ್ಲಿ ಸಮಸ್ಯೆ ಇದ್ದರೆ ದೊರೆತನಕ ದೂರು ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಪ್ರಜಾಸೇವೆಯಲ್ಲಿ ಜನರ ಬಳಿಗೆ ಸರ್ಕಾರ ಬಂದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.
ಭಾಲ್ಕಿ ತಾಲೂಕು ಮೆಹಕರ್ ನಲ್ಲಿಂದು ನಡೆದ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನದ ಸಮಾರೋಪದಲ್ಲಿ ಮಾತನಾಡಿದ ಅವರು, ನಾನು ಪ್ರಜಾ ಸೇವಕನಾಗಿ ನಿಮ್ಮ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಇಂದಿನ ಸಭೆಯಲ್ಲಿ ಸುಮಾರು 500 ಅರ್ಜಿಗಳು ಬಂದಿದ್ದು, ಇದರಲ್ಲಿ ಬಹುತೇಕ ಪಿಂಚಣಿ, ವಸತಿ, ಪಡಿತರ ಚೀಟಿ, ರಸ್ತೆ, ಚರಂಡಿ, ಕಂದಾಯ ಇಲಾಖೆಯ ಸರ್ವೇಗೆ ಸಂಬಂಧಿಸಿದ್ದಾಗಿದ್ದು, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ. ಹತ್ತು ವರ್ಷಗಳ ಹಿಂದೆ ಮೆಹಕರ್ ನೋಡಿದವರು, ಇಂದಿನ ಮೆಹಕರ್ ನೋಡಿದರೆ ಮೂಲಸೌಕರ್ಯದಲ್ಲಿ ಎಷ್ಟು ಸುಧಾರಣೆ ಆಗಿದೆ ಎಂಬುದು ತಿಳಿಯುತ್ತದೆ. ತಾವು ಶಾಸಕರಾಗಿ, ಸಚಿವರಾಗಿ ತಮ್ಮ ಕ್ಷೇತ್ರ ವ್ಯಾಪ್ತಿಯ ಮೆಹಕರ್ ಅಭಿವೃದ್ಧಿಗೆ ಶ್ರಮಿಸಿದ್ದಾಗಿ ತಿಳಿಸಿದರು.

ಇಂದು ಸ್ವೀಕಾರವಾಗಿರುವ ಅರ್ಜಿಗಳಿಗೆ ಆದಷ್ಟು ಶೀಘ್ರ ಪರಿಹಾರ ಒದಗಿಸಲಾಗುವುದು. ಆದರೆ ವ್ಯಾಜ್ಯ, ಕೋರ್ಟ್ ತೀರ್ಪು, ನ್ಯಾಯಾಲಯದಲ್ಲಿ ಬಾಕಿ ಪ್ರಕರಣ, ಇತ್ಯಾದಿಗಳನ್ನು ಇತ್ಯರ್ಥಪಡಿಸಲು ಸಾಧ್ಯವಿಲ್ಲ ಎಂದರು.
“ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿಲ್ಲದಂತೆ, ದಲ್ಲಾಳಿಗಳು ಸುಳಿಯದಂತೆ, ಸರ್ಕಾರದ ಸೇವೆಗಳು ಸಾರ್ವಜನಿಕರಿಗೆ ನೇರವಾಗಿ ದೊರಕುವಂತೆ ಮಾಡುವುದು ಪ್ರಜಾಸೇವೆಯ ಉದ್ದೇಶವಾಗಿದ್ದು, ನಿಯಮಿತವಾಗಿ ಈ ಕಾರ್ಯಕ್ರಮ ನಡೆಸಲು ವೇಳಾಪಟ್ಟಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಜನರು ಸಹ ಭ್ರಷ್ಟ ಅಧಿಕಾರಿಗಳಿಗೆ ಪ್ರಚೋದನೆ ನೀಡದೆ, ಸರ್ಕಾರದೊಂದಿಗೆ ಕೈಜೊಡಿಸಿದರೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯ. ಪ್ರಜಾಸೇವೆಯ ಮೂಲಕ ಜನರಿಗೆ ಸರ್ಕಾರದ ಸೇವೆ ಸುಗಮವಾಗಿ ದೊರಕುವಂತೆ ಮಾಡಲಾಗುವುದು” ಎಂದರು.
ಇದನ್ನೂ ಓದಿ : ವಚನ ಕಲ್ಯಾಣ | ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ.ರಂದೀಪ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಹನುಮಂತರಾವ್ ಚವ್ಹಾಣ್ ಮತ್ತಿತರರು ಪಾಲ್ಗೊಂಡಿದ್ದರು.





