ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ, ಪರಿಸರವಾದಿ ಸೋನಂ ವಾಂಗ್ಚೂಕ್ ಅವರನ್ನು ಬೆಂಬಲಿಸಿ ಬೀದರ್‌ನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ವಿವಿಧ ಸಂಘಟನೆಗಳ ಪ್ರಮುಖರು, ಪ್ರಗತಿಪರ ಹೋರಾಟಗಾರರು ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬುದ್ಧ, ಬಸವ, ಅಂಬೇಡ್ಕರ್ ಜೊತೆಗೆ ಹೋರಾಟಗಾರರಾದ ಸೋನಂ ವಾಂಗ್ಚೂಕ್, ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಭಾವಚಿತ್ರಗಳನ್ನು ಕೈಯಲ್ಲಿ ಹಿಡಿದ ಪ್ರತಿಭಟನಾಕಾರರು ದಾರಿ ಉದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಸಿಪಿಐ ಮುಖಂಡ ಬಾಬುರಾವ್ ಹೊನ್ನಾ ಮಾತನಾಡಿ, “ಕೇಂದ್ರದ ಬಲಪಂಥಿಯ ಸರ್ಕಾರದ ಪ್ರಧಾನಿ ಮೋದಿ ಅವರು ದೇಶದಲ್ಲಿ ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಿದ್ದು, ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಪ್ರಧಾನಿ ಮೋದಿಯವರು ಇದರ ಬಗ್ಗೆ ಮಾತನಾಡುವುದಿಲ್ಲ. ಈ ಹಿಂದೆ ಪ್ರಧಾನಿ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಮೌನಿ ಎಂದು ಟೀಕಿಸುತ್ತಿದ್ದರು. ಆದರೆ, ಇಂದಿನ ಪ್ರಧಾನಿ ಮೋದಿಯವರು ದೇಶದಲ್ಲಿ ಏನೇ ದುರ್ಘಟನೆಗಳು ನಡೆದರೂ ಮಾತನಾಡದೆ ದೊಡ್ಡಮೌನಿಯಾಗಿದ್ದಾರೆ” ಎಂದು ಹೇಳಿದರು.

ಚಿಂತಕ ವಿಠಲದಾಸ ಪ್ಯಾಗೆ ಮಾತನಾಡಿ, “ಕೇಂದ್ರದ ಮನುವಾದಿ ಸರ್ಕಾರ ಕುಸ್ತಿಪಟಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಪ್ರತಿಭಟನೆ ನಡೆಸಿದ ವೇಳೆ ಕೇಂದ್ರ ಸರ್ಕಾರ ನಡೆದಕೊಂಡ ರೀತಿ ಅಂತೆಯೇ ಇಂದು ಸೋನಂ ವಾಂಗ್ಚೂಕ್ ಅವರ ಸತ್ಯಾಗ್ರಹವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಹಗರಣ, ಅನಾಚಾರಗಳ ವಿರುದ್ಧ ಚಕಾರವೆತ್ತದ ನರೇಂದ್ರ ಮೋದಿ ಮಹಾಮೌನಿಯಾಗಿದ್ದಾರೆ. ದೇಶದಲ್ಲಿ ಎಲ್ಲಿಯವರೆಗೆ ಪ್ರಧಾನ ಮಂತ್ರಿ ಸ್ಥಾನದಲ್ಲಿ ಇರುವವರೊ ಅಲ್ಲಿಯವರೆಗೆ ದೇಶದ ರೈತರ, ಬಡವರ, ದೀನ ದಲಿತರ ಸಮಸ್ಯೆಗಳಿಗೆ ಸ್ಪಂದನೆ ಸಿಗುವುದಿಲ್ಲ. ಅವರು ನೀತಾಪತಿ ಅಂಬಾನಿ ಅವರ ಪರ ಕೆಲಸ ನಿರ್ವಹಿಸುತ್ತಾರೆ. ನರೇಂದ್ರ ಮೋದಿ ನೇತ್ರತ್ವದ ನಿರ್ದಯಿ ಸರ್ಕಾರವನ್ನು ಕಿತ್ತೊಗೆಯುವುದೇ ಇಂತಹ ಹೋರಾಟಗಳ ಮುಖ್ಯ ಉದ್ದೇಶವಾಗಿದೆ” ಎಂದು ಹೇಳಿದರು.
ಮುಖಂಡ ಶ್ರೀಕಾಂತ ಸ್ವಾಮಿ ಮಾತನಾಡಿ, “ಈ ಹಿಂದೆ ದೆಹಲಿಯನ್ನು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲ ರೈತರು ನಡೆಸಿದ ಧರಣಿಯನ್ನು ಹತ್ತಿಕ್ಕುವ ಕೆಲಸ ಕೇಂದ್ರದ ಮೋದಿ ಸರ್ಕಾರ ಮಾಡಿತು. ಹಿಂದೂ ಬಗ್ಗೆ ಮಾತನಾಡುವ ಬಿಜೆಪಿಯವರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಹಿಂದೂಗಳು ಅಲ್ಲವೆ ಎಂದು ಪ್ರಶ್ನಿಸಿದ ಅವರು ಸೋನಂ ವಾಂಗ್ಚೂಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಹೊತ್ತೊಯ್ದಿರುವುದು ಖಂಡನೀಯವಾಗಿದೆ” ಎಂದರು.
ಯುವ ಮುಖಂಡ ಸಿದ್ರಾಮ ಶೆಟಕಾರ್ ಮಾತನಾಡಿ, “ಕೇಂದ್ರ ಸರ್ಕಾರ ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತ ಸುಳ್ಳು ಇತಿಹಾಸ ಸೃಷ್ಟಿಸುತ್ತಿದೆ. ನೀಟ್ ಹಗರಣ ವಿರುದ್ಧ ಧ್ವನಿಯೆತ್ತಿರುವ ಹೋರಾಟಗಾರರನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸುತ್ತಿರುವುದು ಖಂಡನೀಯವಾಗಿದೆ. ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಯುವ ಸಮೂಹ ಜಾಗೃತರಾಗಿ ಹೋರಾಟ ರೂಪಿಸಬೇಕಿದೆ” ಎಂದರು.
ಶಿಕ್ಷಣವು ರಾಜ್ಯಗಳ ವಿಷಯವಾಗಿದ್ದರೂ ಕೇಂದ್ರ ಸರ್ಕಾರ ನೀಟ್ ಮೂಲಕ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದ ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಕೇಂದ್ರ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ. ಸಿಜೆಪಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರವಾದಿ ಸೋನಂ ವಾಂಗ್ಚೂಕ್ ಅವರನ್ನು ಪೊಲೀಸ್ ಬಲದಿಂದ ಒತ್ತಾಯದಿಂದ ಆಸ್ಪತ್ರೆಗೆ ದಾಖಲಿಸಿರುವುದು, ಸೋಮವಾರ ಸಂಸತ್ ಚಲೋ ವೇಳೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಲಾಠಿ ಪ್ರಹಾರ, ಆಶ್ರುವಾಯು ಪ್ರಹಾರ ನಡೆಸಿ ಚಳವಳಿ ಹತ್ತಿಕ್ಕುವ ಕೇಂದ್ರ ನಡೆಯನ್ನು ಎಂದು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಮೌನ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಶಿಕ್ಷಣಕ್ಕೆ ಸಂಬಂಧಿಸಿದ ಅರ್ಹತಾ ಪರೀಕ್ಷೆಗಳನ್ನು ನಡೆಸುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ಮರಳಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ : ಸಂಸತ್ ಚಲೋ | ವಾಂಗ್ಚುಕ್ ಜೊತೆ ಹೋರಾಟದಲ್ಲಿದ್ದ ಮೂವರು ವಿದ್ಯಾರ್ಥಿಗಳ 23 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ
ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಜಗದೀಶ್ವರ ಬಿರಾದಾರ, ಮುಬಶೀರ್ ಸಿಂಧೆ, ಮಲ್ಲಿಕಾರ್ಜುನ ಸ್ವಾಮಿ, ರಾಜಕುಮಾರ ಮೂಲಭಾರತಿ, ಸತೀಶ ಬಿರಾದಾರ ಎಂ.ನೆಲವಾಡ, ವೈಜಿನಾಥ ಅಲ್ಲಾಪೂರೆ, ಶಫಾಯತ್ ಅಲಿ, ಮಹೇಶ ಗೋರನಾಳಕರ್, ಕೊಂಡಿಬಾರಾವ ವಿನಯಕುಮಾರ ಮಾಳಗೆ, ಶ್ರೀಧರ ಸೋಮನೋರ್, ಕಪೀಲ್ ಗೋಡಬೊಲೆ, ಪ್ರಕಾಶ ರಾವಣ, ಗಣೇಶ ಬಿರಾದಾರ, ಯೋಗೇಶ್ ಪಾಟೀಲ್, ವಿನೋದ ಶಾಕ್ಯಪಾಲ್, ಓಂಪ್ರಕಾಶ್ ರೊಟ್ಟೆ, ಅಮನ್ ಸಂತಪೂರೆ, ವೀರಶೆಟ್ಟಿ ವಟಂಬೆ, ಜೈಶೀಲಕುಮಾರ, ಸಿದ್ದಪ್ಪ ಫುಲಾರಿ, ಮೊಹಮ್ಮದ್ ಶಫೀಯೋದ್ದೀನ್, ಮಂಜುಳಾ, ಪ್ರತೀಕ ಖಾನಾಪುರಕರ್, ನಿಜಾಮೋದ್ದೀನ್, ಪ್ರಭು ತಗಣಿಕರ, ರಾಮಣ್ಣ ಅಲಮಾಸಪೂರ, ಸೈಯದ್ ಮಸೂದ್, ಸಿದ್ಧಾರ್ಥ, ಪ್ರಕಾಶ ಸುಕಾಳೆ, ಪ್ರತೀಕ್ ಖಾನಾಪೂರಕರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.





