ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಲ್ಕಿ ಮೂಲದ ಬಿಜೆಪಿ ಮುಖಂಡ, ತುಮಕೂರ ವಿಶ್ವವಿದ್ಯಾಲಯದ ಸಿಂಡೆಕೇಟ್ ಸದಸ್ಯ ಬಸವರಾಜ್ ಕನ್ನಾಳೆಗೆ ಸಿಐಡಿ ಪೊಲೀಸರು ದೆಹಲಿಯಲ್ಲಿ ಭಾನುವಾರ ವಶಕ್ಕೆ ಪಡೆದಿದ್ದಾರೆ.
ಪಶುವೈದ್ಯರ ನೇಮಕಾತಿಯಲ್ಲಿ ಆಯ್ಕೆಯಾದ ಕೆಲವು ಅಭ್ಯರ್ಥಿಗಳೊಂದಿಗೆ ಬಸವರಾಜ್ ಕನ್ನಾಳೆ ಮಧ್ಯವರ್ತಿಯಾಗಿ ಸಂಪರ್ಕ ಹೊಂದಿರುವ ಬಗ್ಗೆ ಸಿಐಡಿಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ಬಸವರಾಜ್ ಕನ್ನಾಳೆ ಅವರನ್ನು ದೆಹಲಿಯಿಂದ ಬೆಂಗಳೂರಿಗೆ ಕರೆತಂದು, ವಿಚಾರಣೆ ನಡೆಸಿದ ಬಳಿಕ ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದು, ಅಭ್ಯರ್ಥಿಗಳೊಂದಿಗೆ ಆರೋಪಿಯ ಸಂಪರ್ಕ ಹಾಗೂ ಪ್ರಕರಣದಲ್ಲಿನ ಅವರ ಪಾತ್ರದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಬಸವರಾಜ ಕನ್ನಾಳೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡೋಣಗಾಪುರ ಗ್ರಾಮದವರಾಗಿದ್ದು, ಪೊಲೀಸರು ಅವರ ಸ್ವಗ್ರಾಮಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಬೀದರ್ | ಬಹುಭಾಷಾ ಕವಿಗೋಷ್ಠಿ : ಕಾವ್ಯದಲ್ಲಿ ಮೊಳಗಿದ ಪ್ರವಾದಿ ಮುಹಮ್ಮದ್ ಸಂದೇಶ




