ಉಡುಪಿಯ ಶ್ರೀಕೃಷ್ಣ ಜನ್ಮಾಷ್ಟಮಿ ಎಂದರೆ ಕೇವಲ ಧಾರ್ಮಿಕ ಆಚರಣೆಯಲ್ಲ. ಅದು ಕರಾವಳಿಯ ಜನಜೀವನದೊಂದಿಗೆ ಬೆಸೆದುಕೊಂಡಿರುವ ನಾಡಹಬ್ಬ. ಅಷ್ಟಮಿಯಂದು ಮತ್ತದರ ಮರುದಿನ ನಡೆಯುವ ವಿಟ್ಲಪಿಂಡಿ ಉತ್ಸವದ ಸಂದರ್ಭದಲ್ಲಿ ವಿವಿಧ ವೇಷಗಳು ಜನರನ್ನು ಆಕರ್ಷಿಸುತ್ತವೆ. ಆದರೆ ಇದೇ ವೇಷವನ್ನು ಮಾನವೀಯ ಸೇವೆಯ ಅಸ್ತ್ರವನ್ನಾಗಿ ಮಾಡಿಕೊಂಡು, ಕಳೆದ 14 ವರ್ಷಗಳಿಂದ ಅನಾರೋಗ್ಯಪೀಡಿತ ಪುಟಾಣಿ ಮಕ್ಕಳ ಚಿಕಿತ್ಸೆಗೆ ನೆರವಾಗುತ್ತಿರುವ ವ್ಯಕ್ತಿ ರವಿ ಕಟಪಾಡಿ.
ಸಾಮಾನ್ಯ ಕಟ್ಟಡ ನಿರ್ಮಾಣದ ಸೆಂಟ್ರಿಂಗ್ ಕಾರ್ಮಿಕನಾಗಿ ದುಡಿಯುತ್ತಿರುವ ರವಿ ಕಟಪಾಡಿ, ಪ್ರತಿವರ್ಷ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ವಿಶಿಷ್ಟ ವೇಷ ಧರಿಸಿ ಎರಡು ದಿನಗಳ ಕಾಲ ಉಡುಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿ ದೇಣಿಗೆ ಸಂಗ್ರಹಿಸುತ್ತಾರೆ. ಬಳಿಕ ಸಂಗ್ರಹವಾದ ಮೊತ್ತವನ್ನು ಅನಾರೋಗ್ಯಪೀಡಿತ ಬಡ ಮಕ್ಕಳ ಚಿಕಿತ್ಸೆಗೆ ವಿನಿಯೋಗಿಸುತ್ತಿದ್ದಾರೆ.
1.85 ಕೋಟಿ ರೂ. ಸಂಗ್ರಹ; 204 ಮಕ್ಕಳಿಗೆ ನೆರವು
ರವಿ ಕಟಪಾಡಿ ಹಾಗೂ ಅವರ ತಂಡದ ಈ ಸೇವಾ ಪಯಣಕ್ಕೆ ಇದೀಗ 14 ವರ್ಷಗಳು ಪೂರ್ಣಗೊಂಡಿವೆ. ಈ ಅವಧಿಯಲ್ಲಿ ಒಟ್ಟು 1.85 ಕೋಟಿ ರೂ. ಸಂಗ್ರಹಿಸಿ 204 ಅನಾರೋಗ್ಯಪೀಡಿತ ಪುಟಾಣಿ ಮಕ್ಕಳ ಚಿಕಿತ್ಸೆಗೆ ನೆರವು ನೀಡಲಾಗಿದೆ. ಕಟಪಾಡಿ, ಉಡುಪಿ, ಶಿರ್ವ, ಮಲ್ಪೆ, ಕಾಪು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವೇಷ ಧರಿಸಿ ಸಂಚರಿಸುವ ರವಿ, ಜನರಿಂದ ಸಂಗ್ರಹಿಸುವ ಪ್ರತಿಯೊಂದು ದೇಣಿಗೆಯನ್ನೂ ಮಕ್ಕಳ ಚಿಕಿತ್ಸೆಗೆ ಬಳಸುತ್ತಿದ್ದಾರೆ.
ಪ್ರತಿ ವರ್ಷ ಕಟಪಾಡಿಯ ಬಬ್ಬುಸ್ವಾಮಿ ದೇವಸ್ಥಾನದಲ್ಲಿ ಕಾರ್ಯಕ್ರಮ ಆಯೋಜಿಸಿ, ಸಹಾಯಧನದ ಫಲಾನುಭವಿ ಮಕ್ಕಳ ಪೋಷಕರಿಗೆ ಸಂಗ್ರಹವಾದ ಹಣವನ್ನು ಹಸ್ತಾಂತರಿಸುವ ಕಾರ್ಯವೂ ನಡೆಯುತ್ತಿದೆ. ರವಿ ಕಟಪಾಡಿಯ ಈ ಸಮಾಜಮುಖಿ ಸೇವೆಗೆ ‘ರವಿ ಕಟಪಾಡಿ ಫ್ರೆಂಡ್ಸ್’ ತಂಡವೂ ಕೈಜೋಡಿಸಿದೆ.
ರವಿ ಕಟಪಾಡಿ ಯಾವುದೇ ಉದ್ಯಮಿ ಅಥವಾ ಕೋಟ್ಯಾಧಿಪತಿಯಲ್ಲ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಸೆಂಟ್ರಿಂಗ್ ಕಾರ್ಮಿಕನಾಗಿ ದುಡಿಯುವ ಸಾಮಾನ್ಯ ಕುಟುಂಬದ ವ್ಯಕ್ತಿ. ಕಟಪಾಡಿ ಅವರ ಹುಟ್ಟೂರಿನಲ್ಲಿ ವಯಸ್ಸಾದ ತಾಯಿ ದೇಯಿ, ಅಣ್ಣ ಶಂಕರ-ಅತ್ತಿಗೆ ಹಾಗೂ ತಮ್ಮ ಚಂದ್ರಶೇಖರ ಅವರೊಂದಿಗೆ ವಾಸಿಸುತ್ತಿದ್ದಾರೆ. ಸಹೋದರರಿಬ್ಬರೂ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾರೆ. ತಂದೆ ಬಿ.ಗೋವಿಂದ ಅವರು ಕೆಲವು ವರ್ಷಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ದುಡಿಮೆಯ ಬದುಕಿನ ನಡುವೆಯೂ ಪ್ರತಿವರ್ಷ ಅಷ್ಟಮಿಯ ಎರಡು ದಿನಗಳನ್ನು ಮಕ್ಕಳಿಗಾಗಿ ಮೀಸಲಿಡುವ ರವಿ ಅವರ ಸೇವೆ, ದೇಣಿಗೆಯ ಮೊತ್ತಕ್ಕಿಂತಲೂ ಅದರ ಹಿಂದಿರುವ ಮನೋಭಾವದಿಂದಾಗಿ ಗಮನ ಸೆಳೆಯುತ್ತಿದೆ.

ಆರಂಭದ ವರ್ಷಗಳಲ್ಲಿ ಕೇವಲ ಮನರಂಜನೆಗಾಗಿ ರವಿ ಕಟಪಾಡಿ ವಿವಿಧ ವೇಷಗಳನ್ನು ಧರಿಸುತ್ತಿದ್ದರು. ಆದರೆ 2014ರಿಂದ ವೇಷ ಧರಿಸಿ ದೇಣಿಗೆ ಸಂಗ್ರಹಿಸಿ, ಅದನ್ನು ಅಗತ್ಯವಿರುವ ಮಕ್ಕಳ ಚಿಕಿತ್ಸೆಗೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿದರು. ಅಂದಿನಿಂದ ಪ್ರತಿವರ್ಷ ವಿಭಿನ್ನ ಹಾಗೂ ಜನರನ್ನು ಸೆಳೆಯುವ ವೇಷಗಳನ್ನು ಧರಿಸುತ್ತಾ ಬಂದಿದ್ದಾರೆ. ಒಮ್ಮೆ ಧರಿಸಿದ ವೇಷವನ್ನು ಅಷ್ಟಮಿ ಹಾಗೂ ಮರುದಿನ ನಡೆಯುವ ವಿಟ್ಲಪಿಂಡಿ ಉತ್ಸವದ ಸಂದರ್ಭದಲ್ಲಷ್ಟೇ ಬಳಸಲಾಗುತ್ತದೆ.
ಕೆಲವು ವರ್ಷಗಳಲ್ಲಿ ಹಾಲಿವುಡ್ ಸಿನೆಮಾಗಳಲ್ಲಿ ಕಂಡುಬರುವ ಅಪರೂಪದ ಪಾತ್ರಗಳನ್ನು ಹೋಲುವ ವೇಷಗಳನ್ನೂ ಧರಿಸಿ ಜನರ ಗಮನ ಸೆಳೆದಿದ್ದಾರೆ. ಈ ವೇಷಗಳನ್ನು ಧರಿಸುವುದೂ ಸುಲಭದ ಕೆಲಸವಲ್ಲ. ಗಂಟೆಗಟ್ಟಲೆ ವೇಷ ಧರಿಸಬೇಕಾಗುವುದರಿಂದ ದೈಹಿಕವಾಗಿ ಸಾಕಷ್ಟು ಶ್ರಮವಾಗುತ್ತದೆ. ಬಣ್ಣ ಹಾಗೂ ವಿವಿಧ ಪರಿಕರಗಳ ಬಳಕೆಯೂ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೂ ಮಕ್ಕಳ ನೋವಿನ ಮುಂದೆ ಈ ಕಷ್ಟಗಳು ಅವರಿಗೆ ದೊಡ್ಡದಾಗಿ ಕಾಣುವುದಿಲ್ಲ. ಈ ಬಾರಿ ಸಮುದ್ರ ಜೀವಿಯ ವೇಷ; ಗುರಿ ಕ್ಯಾನ್ಸರ್ ಪೀಡಿತ ಮಕ್ಕಳು ಈ ಬಾರಿಯ ಅಷ್ಟಮಿಯೂ ರವಿ ಕಟಪಾಡಿಯ ಸೇವಾ ಪಯಣದಲ್ಲಿ ವಿಶೇಷವಾಗಿದೆ.
ಸೆಪ್ಟೆಂಬರ್ 4 ಮತ್ತು 5ರಂದು ಸಮುದ್ರ ಜೀವಿಯೊಂದರ ವಿಶಿಷ್ಟ ವೇಷ ಧರಿಸಿ ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿ ದೇಣಿಗೆ ಸಂಗ್ರಹಿಸಲು ರವಿ ಹಾಗೂ ಅವರ ತಂಡ ನಿರ್ಧರಿಸಿದೆ. ಈ ಬಾರಿ ಸಂಗ್ರಹವಾಗುವ ಸಂಪೂರ್ಣ ಮೊತ್ತವನ್ನು ಕ್ಯಾನ್ಸರ್ನಿಂದ ಬಳಲುತ್ತಿರುವ ಪುಟಾಣಿ ಮಕ್ಕಳ ಚಿಕಿತ್ಸೆಗೆ ನೀಡಲು ನಿರ್ಧರಿಸಲಾಗಿದೆ.
ರವಿ ಕಟಪಾಡಿಯ ಸೇವಾ ಪಯಣದಲ್ಲಿ ಈ ವರ್ಷದ ಅಷ್ಟಮಿ ಮತ್ತೊಂದು ಕಾರಣಕ್ಕೂ ವಿಶೇಷವಾಗಿದೆ. 15ನೇ ವರ್ಷದ ಕೃಷ್ಣ ಜನ್ಮಾಷ್ಟಮಿ ವೇಷ ಧರಿಸಿದ ಬಳಿಕ ಇನ್ನು ಮುಂದೆ ಅಷ್ಟಮಿ ಸಂದರ್ಭದಲ್ಲಿ ವೇಷ ಧರಿಸದಿರಲು ರವಿ ಹಾಗೂ ಅವರ ತಂಡ ನಿರ್ಧರಿಸಿದೆ.
ಕಳೆದ ವರ್ಷ ಆರೋಗ್ಯ ಸಮಸ್ಯೆಯ ಕಾರಣದಿಂದ ವೇಷ ಧರಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ಮತ್ತೆ ವೇಷ ಧರಿಸಿ ಸೇವೆ ಮುಂದುವರಿಸಲಿರುವ ರವಿ, ಮುಂದಿನ ವರ್ಷದಿಂದ ವೇಷದ ಮೂಲಕ ದೇಣಿಗೆ ಸಂಗ್ರಹಿಸುವುದನ್ನು ನಿಲ್ಲಿಸಿ, ಬೇರೆ ರೀತಿಯಲ್ಲಿ ಮಕ್ಕಳಿಗೆ ನೆರವಾಗುವ ಉದ್ದೇಶ ಹೊಂದಿದ್ದಾರೆ.

ಈ ವರ್ಷ 15 ಲಕ್ಷ ಸಂಗ್ರಹವಾದರೆ 2 ಕೋಟಿ ಗುರಿ ತಲುಪುತ್ತದೆ
ಈದಿನ.ಕಾಮ್ ಜೊತೆ ಮಾತನಾಡಿದ ಸಮಾಜಸೇವಕ ರವಿ ಕಟಪಾಡಿ, “ಕಳೆದ 14 ವರ್ಷಗಳಲ್ಲಿ ನಮ್ಮ ತಂಡದಿಂದ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ವೇಷ ಧರಿಸಿ ದೇಣಿಗೆ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು 1.85 ಕೋಟಿ ರೂ. ಸಂಗ್ರಹಿಸಿ 204 ಅನಾರೋಗ್ಯಪೀಡಿತ ಪುಟಾಣಿ ಮಕ್ಕಳಿಗೆ ಹಸ್ತಾಂತರಿಸಿ ಅವರ ಚಿಕಿತ್ಸೆಗೆ ನೆರವು ನೀಡಿದ್ದೇವೆ” ಎಂದು ಹೇಳಿದರು.
“ಈ ಬಾರಿ 15ನೇ ವರ್ಷದ ವೇಷ ಧರಿಸುತ್ತಿದ್ದೇವೆ. ಇದೇ ನಮ್ಮ ತಂಡದ ಕೊನೆಯ ಕೃಷ್ಣ ಜನ್ಮಾಷ್ಟಮಿ ವೇಷವಾಗಲಿದೆ. ಇನ್ನು ಮುಂದೆ ಅಷ್ಟಮಿ ಸಂದರ್ಭದಲ್ಲಿ ವೇಷ ಧರಿಸುವುದಿಲ್ಲ. ಕಳೆದ ವರ್ಷ ಆರೋಗ್ಯದ ಸಮಸ್ಯೆಯಿಂದ ವೇಷ ಧರಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮತ್ತೆ ವೇಷ ಧರಿಸುತ್ತಿದ್ದೇನೆ” ಎಂದರು.

“ಸೆಪ್ಟೆಂಬರ್ 4 ಮತ್ತು 5ರಂದು ಸಮುದ್ರ ಜೀವಿಯೊಂದರ ವಿಶಿಷ್ಟ ವೇಷ ಧರಿಸಿ ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿ ಹಣ ಸಂಗ್ರಹ ಮಾಡುತ್ತೇವೆ. ಈ ವರ್ಷ ಸಂಗ್ರಹವಾಗುವ ಹಣವನ್ನು ಕ್ಯಾನ್ಸರ್ನಿಂದ ಬಳಲುತ್ತಿರುವ ಪುಟಾಣಿ ಮಕ್ಕಳ ಚಿಕಿತ್ಸೆಗೆ ನೀಡಲು ನಿರ್ಧರಿಸಿದ್ದೇವೆ” ಎಂದು ರವಿ ಕಟಪಾಡಿ ತಿಳಿಸಿದರು.
ಈ ಬಾರಿ ದಾನಿಗಳು ಹೆಚ್ಚು ನೆರವು ನೀಡಬೇಕು
“ಇದುವರೆಗೆ 1.85 ಕೋಟಿ ರೂ. ಸಂಗ್ರಹಿಸಿ ಮಕ್ಕಳ ಚಿಕಿತ್ಸೆಗೆ ನೀಡಿದ್ದೇವೆ. ಈ ವರ್ಷ ಕನಿಷ್ಠ 15 ಲಕ್ಷ ರೂ. ಸಂಗ್ರಹವಾದರೆ ಒಟ್ಟು 2 ಕೋಟಿ ರೂ. ದೇಣಿಗೆ ಸಂಗ್ರಹಿಸಿದಂತಾಗುತ್ತದೆ. ಇದೇ ನಮ್ಮ ಈ ವರ್ಷದ ಪ್ರಮುಖ ಗುರಿ” ಎಂದು ಅವರು ಹೇಳಿದರು.
“ನಾವು ವೇಷ ಧರಿಸುವುದು ಮನರಂಜನೆಗಾಗಿ ಮಾತ್ರವಲ್ಲ. ನಮ್ಮ ಮುಂದೆ ಅನಾರೋಗ್ಯದಿಂದ ಬಳಲುತ್ತಿರುವ ಪುಟಾಣಿ ಮಕ್ಕಳು ಇದ್ದಾರೆ. ಅವರ ಚಿಕಿತ್ಸೆಗೆ ಸಾಧ್ಯವಾದಷ್ಟು ನೆರವಾಗಬೇಕು ಎಂಬ ಉದ್ದೇಶದಿಂದ ಈ ಸೇವೆ ಮಾಡುತ್ತಿದ್ದೇವೆ. ಈ ಬಾರಿ ನಮ್ಮ ಕೊನೆಯ ವೇಷವಾಗಿರುವುದರಿಂದ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಾಯ ಮಾಡಬೇಕು. ಮಕ್ಕಳ ಚಿಕಿತ್ಸೆಗೆ ನೆರವಾಗುವ ಈ ಮಾನವೀಯ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು” ಎಂದು ರವಿ ಕಟಪಾಡಿ ಮನವಿ ಮಾಡಿದರು.
14 ವರ್ಷಗಳ ಕಾಲ ಜನರ ನಡುವೆ ವಿಭಿನ್ನ ವೇಷಗಳಲ್ಲಿ ಕಾಣಿಸಿಕೊಂಡ ರವಿ ಕಟಪಾಡಿ, ಈ ಬಾರಿ ಕೊನೆಯ ಬಾರಿಗೆ ಅಷ್ಟಮಿಯ ವೇಷ ಧರಿಸಲಿದ್ದಾರೆ. ವೇಷದ ರೂಪ ಬದಲಾಗಬಹುದು, ಅಷ್ಟಮಿಯ ಸಂಭ್ರಮದಲ್ಲಿ ಅವರ ಹೆಜ್ಜೆಗಳು ನಿಲ್ಲಬಹುದು; ಆದರೆ ಅನಾರೋಗ್ಯಪೀಡಿತ ಮಕ್ಕಳಿಗೆ ನೆರವಾಗಬೇಕೆಂಬ ಸಂಕಲ್ಪ ಮಾತ್ರ ಮುಂದುವರಿಯಲಿದೆ.
ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕ ತನ್ನ ದುಡಿಮೆಯ ಬದುಕಿನ ನಡುವೆ ವರ್ಷಕ್ಕೊಮ್ಮೆ ವೇಷ ಧರಿಸಿ ಜನರಿಂದ ಸಂಗ್ರಹಿಸಿದ ದೇಣಿಗೆಯನ್ನು ತನಗಾಗಿ ಬಳಸದೆ, ನೂರಾರು ಪುಟಾಣಿ ಮಕ್ಕಳ ಚಿಕಿತ್ಸೆಗೆ ನೀಡಿರುವುದು ಕರಾವಳಿಯ ಮಾನವೀಯತೆಯ ಮತ್ತೊಂದು ಮುಖವನ್ನು ತೆರೆದಿಡುತ್ತದೆ. ರವಿ ಕಟಪಾಡಿ ಹಾಗೂ ‘ರವಿ ಕಟಪಾಡಿ ಫ್ರೆಂಡ್ಸ್’ ತಂಡದ 15ನೇ ವರ್ಷದ ಈ ಸೇವಾ ಅಭಿಯಾನಕ್ಕೆ ದಾನಿಗಳ ನೆರವು ಎಷ್ಟರ ಮಟ್ಟಿಗೆ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




