ಬೀದರ್ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಪ್ರವಾದಿ ಮುಹಮ್ಮದ್ ಅವರ ಕುರಿತಾದ ಕವಿತೆಗಳು ಸಾಹಿತ್ಯಪ್ರೇಮಿಗಳ ಮನ ತಣಿಸಿದವು.
ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)’ ಸೀರತ್ ಅಭಿಯಾನದ ಅಂಗವಾಗಿ ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಇದರಾ-ಎ-ಅದಬ್-ಎ-ಇಸ್ಲಾಮೀ ಹಿಂದ್, ಬೀದರ್ ಘಟಕದ ಸಹಯೋಗದಲ್ಲಿ ಆಯೋಜಿಸಿದ ಬಹುಭಾಷಾ ಕವಿಗೋಷ್ಠಿಯಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ಉರ್ದು ಭಾಷೆಯ ಕವಿತೆಗಳು ಒಂದೇ ವೇದಿಕೆಯಲ್ಲಿ ಕೇಳುವ ಸದಾವಕಾಶ ಒದಗಿತ್ತು.
ಜಮಾಅತೆ ಇಸ್ಲಾಮೀ ಹಿಂದ್ನ ಸದಸ್ಯ ಮುಹಮ್ಮದ್ ನಿಜಾಮುದ್ದೀನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಪವಿತ್ರ ಕುರಾನ್ನ 33ನೇ ಅಧ್ಯಾಯದ 45ರಿಂದ 47ನೇ ಸೂಕ್ತಗಳ ಸಂದೇಶವನ್ನು ಉಲ್ಲೇಖಿಸಿ, ಪ್ರವಾದಿ ಮುಹಮ್ಮದ್(ಸ) ಅವರು ದೇವರಿಂದ ನಿಯುಕ್ತರಾದ ಸಂದೇಶವಾಹಕರಾಗಿ, ದೇವಸಂದೇಶದ ಸಾಕ್ಷಿದಾರರಾಗಿ, ಸುವಾರ್ತೆ ಹಾಗೂ ಎಚ್ಚರಿಕೆ ನೀಡುವವರಾಗಿ, ದೇವನ ಅನುಮತಿಯಿಂದ ಜನರನ್ನು ಅವನ ಕಡೆಗೆ ಕರೆ ನೀಡುವವರಾಗಿ ಮತ್ತು ಪ್ರಕಾಶಮಾನವಾದ ಜ್ಯೋತಿಯಾಗಿದ್ದರು” ಎಂದು ಹೇಳಿದರು.

ಸ್ಥಳೀಯ ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಮುಹಮ್ಮದ್ ಮೌಝಮಾ ಅಧ್ಯಕ್ಷತೆ ವಹಿಸಿ ಮಾತನಾಡಿ, “ಬೀದರ್ ಜಿಲ್ಲೆ ಬಹುಭಾಷಿಕರ ನೆಲವಾಗಿದ್ದು, ಇಲ್ಲಿ ಕನ್ನಡ, ಹಿಂದಿ, ಉರ್ದು, ತೆಲುಗು ಹಾಗೂ ಮರಾಠಿ ಭಾಷಿಕರು ವಾಸಿಸುತ್ತಿದ್ದಾರೆ. ಈ ಬಹುತ್ವದ ನೆಲದಲ್ಲಿ ಎಲ್ಲ ಭಾಷಿಕರಿಗೂ ಪ್ರವಾದಿ ಮುಹಮ್ಮದ್(ಸ) ಅವರ ಜೀವನ ಮತ್ತು ಸಂದೇಶವನ್ನು ಪರಿಚಯಿಸುವ ಉದ್ದೇಶದಿಂದ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ” ಎಂದರು.
“ಪ್ರವಾದಿ ಮುಹಮ್ಮದ್(ಸ) ಅವರ ಕ್ರಾಂತಿ ಮಾನವೀಯ ಕ್ರಾಂತಿಯಾಗಿದೆ. ಮಾನವಕುಲ ಒಂದೇ ಎಂಬ ಸಂದೇಶವನ್ನು ಸಾರುವ ಮೂಲಕ ಜನರ ಮನಸ್ಸುಗಳನ್ನು ಒಗ್ಗೂಡಿಸುವ ಕಾರ್ಯವನ್ನು ಅವರು ಮಾಡಿದರು. ನೈತಿಕತೆ ಹಾಗೂ ಚಾರಿತ್ರ್ಯವನ್ನು ಶುದ್ಧೀಕರಿಸುವ ಮೂಲಕ ಸಮಾಜದ ಬದಲಾವಣೆಯನ್ನು ಬಯಸಿದರು. ಇಂದಿನ ಸಮಾಜಕ್ಕೆ ಪ್ರವಾದಿ ಮುಹಮ್ಮದ್(ಸ) ಅವರ ಜೀವನ ಮತ್ತು ಸಂದೇಶ ದಾರಿದೀಪವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕವಿಗಳಾದ ಡಾ.ರಾಮಚಂದ್ರ ಗಣಾಪುರ, ಡಾ.ರಘುಶಂಖ ಭಾತಂಬ್ರಾ, ಡಾ.ಮಕ್ತುಂಬಿ ಎಂ., ಅಶ್ವಜೀತ್ ದಂಡಿನ್, ಡಾ.ಶ್ರೇಯಾ ಮಹೀಂದ್ರಕರ್, ಸಂಗಮೇಶ ಜವಾದಿ ಹಾಗೂ ವಿದ್ಯಾವತಿ ಅವರು ಕನ್ನಡದಲ್ಲಿ ಕವಿತೆ ವಾಚಿಸಿದರು. ಜಗದೀಶ್ವರ ಬಿರಾದರ್ ಮತ್ತು ಧನಲಕ್ಷ್ಮಿ ಪಾಟೀಲ್ ಅವರು ಇಂಗ್ಲಿಷ್ನಲ್ಲಿ ಕವಿತೆ ವಾಚಿಸಿದರು. ಉರ್ದು ಭಾಷೆಯಲ್ಲಿ ಸೈಯದ್ ಜಮೀಲ್ ಹಾಸ್ಮಿ, ಮುನವ್ವರ್ ಅಲಿ ಶಾಹಿದ್, ಸೈಯದ್ ಖಾಸಿಂ ಸಾಜಿದ್, ಖಾಜಿ ಇದ್ರಿಸ್ ಅಲಿ, ಹಾಮೆದ್ ಸಲೀಮ್ ಹಾಮೆದ್ ಹಾಗೂ ಹೈದರ್ ಅಲಿ ಸೌದಾಗರ್ ಹಾಗೂ ಹಿಂದಿ ಭಾಷೆಯಲ್ಲಿ ಅಜೀಮ್ ಬಾದಶಾ ಅವರು ವಾಚಿಸಿದ ಸ್ವರಚಿತ ಕವಿತೆ ಮುದಗೊಳಿಸಿದವು.

ಇದರಾ-ಎ-ಅದಬ್-ಎ-ಇಸ್ಲಾಮೀ ಹಿಂದ್ ಅಧ್ಯಕ್ಷ ರಫೀವುಝ್ಹಮಾ ಖಾದ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, “ಕ್ರಾಂತಿಯ ಜ್ಯೋತಿಯಾಗಿದ್ದ ಪ್ರವಾದಿ ಮುಹಮ್ಮದ್(ಸ) ಅವರು ಜಗತ್ತಿಗೆ ಸಾರಿದ ಸತ್ಯ, ನ್ಯಾಯ, ಕರುಣೆ, ಘನತೆ, ಏಕತೆ ಹಾಗೂ ಸಮಾನತೆಯ ಸಂದೇಶಗಳನ್ನು ಜನರಿಗೆ ಪರಿಚಯಿಸುವುದು ಮತ್ತು ಅವರ ಕುರಿತು ಜನರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಸೀರತ್ ಅಭಿಯಾನದ ಉದ್ದೇಶವಾಗಿದೆ” ಎಂದರು.
ಇದನ್ನೂ ಓದಿ : ವಚನ ಕಲ್ಯಾಣ | ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯಾ?
ಮಕ್ಸೂದ್ ಅಲಿ ಅವರು ದೇವರ ಪ್ರಶಂಸೆ ಹಾಗೂ ಪ್ರವಾದಿ ಮುಹಮ್ಮದ್(ಸ) ಅವರ ಗುಣಗಾನ ಗೀತೆಯನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಹಾಗೂ ಜಮಾಅತೆ ಇಸ್ಲಾಮೀ ಹಿಂದ್ನ ಪದಾಧಿಕಾರಿಗಳು ಭಾಗವಹಿಸಿದ್ದರು. ಇದರಾ-ಎ-ಅದಬ್-ಎ-ಇಸ್ಲಾಮೀ ಹಿಂದ್ ಕಾರ್ಯದರ್ಶಿ ಹಾಮೆದ್ ಸಲೀಮ್ ಹಾಮೆದ್ ವಂದಿಸಿದರು.




