ಮಾಂಸಾಹಾರ ಜಾರಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಬೈಕ್ ರ್‍ಯಾಲಿ ಮಾಡಿದ್ದೇವೆ. 86 ವರ್ಷಗಳಿಂದ ಇದುವರೆಗೂ ನಡೆದಿರುವ ಸಮ್ಮೇಳನಗಳಲ್ಲಿ ಸಸ್ಯಾಹಾರವನ್ನು ಮಾತ್ರ ಕೊಟ್ಟು ನಾಡಿನ ಬಹುಸಂಖ್ಯಾತರ ಮಾಂಸಾಹಾರಕ್ಕೆ ಅಘೋಷಿತ ನಿಷೇಧ ಹೇರಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮಂಡ್ಯ ಜಿಲ್ಲಾಧ್ಯಕ್ಷರಾದ ಎಚ್.ಡಿ. ಜಯರಾಮು ಆಕ್ರೋಶ ವ್ಯಕ್ತಪಡಿಸಿದರು.

ಅವರು ಮಂಡ್ಯ ನಗರದ ವಿ.ವಿ.ರಸ್ತೆಯಿಂದ ಜಿಲ್ಲಾಧಿಕಾರಗಳ ಕಚೇರಿವರೆಗೆ ಆಯೋಜಿಸಲಾಗಿದ್ದ ಬೈಕ್ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಬಾರಿ ನಮ್ಮ ಮಂಡ್ಯದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವನ್ನೂ ಕೊಡಲೇಬೇಕು. ಇಲ್ಲವಾದರೆ ನಮ್ಮ ಸಂಘಟನೆ ಸಮ್ಮೇಳನ ನಡೆಯುವ ಜಾಗದಲ್ಲಿ ಉಗ್ರ ಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಸಿದರು.
ಸಂವಿಧಾನದ ಆರ್ಟಿಕಲ್ 51A(H) ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ಅಸಮಾನತೆಯ ಸುಧಾರಣೆಗಾಗಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡು ಬಗೆಯ ಆಹಾರವನ್ನು ಸೇವಿಸಲು ಅವಕಾಶ ನೀಡಬೇಕು ಎಂದು ಹೇಳಲಾಗಿದೆ. ಜನರ ತೆರಿಗೆ ಹಣದಲ್ಲಿ ನಡೆಯುವ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧಿಸಿರುವುದು ಸಂವಿಧಾನ ವಿರೋಧಿ ನಡೆಯಾಗುತ್ತದೆ. ಶುದ್ಧ ಸಸ್ಯಾಹಾರಿ ಸಮ್ಮೇಳನ ನಡೆಸುವುದು ಬಹು ಸಂಖ್ಯಾತರಿಗೆ ಮಾಡುವ ಅಪಮಾನ ಆಗಿದೆ ಎಂದರು.
ಇದನ್ನು ಓದಿದ್ದೀರಾ? ಮಂಡ್ಯ | ಡಿಸಿ ಕಚೇರಿ ಮುಂದೆ ಗಾರೆಪರ ಮಾಡಿ ಪ್ರತಿಭಟಿಸಿದ ಪ್ರಗತಿಪರ ಸಂಘಟನೆಗಳು
ಈ ವಿಚಾರವಾಗಿ ಈಗಾಗಲೇ ಕಸಾಪ ಅಧ್ಯಕ್ಷರು ನಮಗು ಆಹಾರದ ವಿಚಾರಕ್ಕೂ ಸಂಬಂಧವಿಲ್ಲ. ಅದು ಸ್ವಾಗತ ಸಮಿತಿಗೆ ಬಿಟ್ಟ ವಿಚಾರ’ ಎಂದು ಹೇಳಿದ್ದಾರೆ. ಸಮ್ಮೇಳನಾಧ್ಯಕ್ಷರು ಕೂಡ ‘ಆಹಾರದ ವಿಚಾರದಲ್ಲಿ ಇರುವ ತಾರತಮ್ಯವನ್ನು ಸ್ವಾಗತ ಸಮಿತಿ ಕೊನೆಗಾಣಿಸಲಿ’ ಎಂದಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷರಾದ ಎನ್.ಚಲುವರಾಯಸ್ವಾಮಿ ಮತ್ತು ಜಿಲ್ಲಾಧಿಕಾರಿಗಳು ಎರಡೂ ಬಗೆಯ ಆಹಾರ ನೀಡದಿದ್ದರೆ ನಮ್ಮ ಸಂಘಟನೆ ಸಮ್ಮೇಳನದ ಆವರಣದಲ್ಲಿ ಮಾಂಸಾಹಾರ ಹಂಚಲಿದೆ ಎಚ್ಚರಿಕೆ ನೀಡಿದರು.
ಈ ಬೈಕ್ ರ್‍ಯಾಲಿಯ ಸಂದರ್ಭದಲ್ಲಿ ನ್ಯಾಯವಾದಿ ಬಿ.ಟಿ.ವಿಶ್ವನಾಥ್, ಕರುನಾಡ ಸೇವಕರು ಸಂಘಟನೆಯ ನಾಗಣ್ಣಗೌಡ, ನೆಲದನಿ ಬಳಗದ ಲಂಕೇಶ್, ದಸಂಸ ಎಂ.ವಿ.ಕೃಷ್ಣ, ಕರವೇ ಮುಖಂಡ ಹೆಚ್.ಡಿ. ಜಯರಾಂ, ಚಿತ್ರಕೂಟದ ಅರವಿಂದ ಪ್ರಭು ಸಮಾನ ಮನಸ್ಕರ ವೇದಿಕೆ ನರಸಿಂಹಮೂರ್ತಿ, ಪ್ರೊ.ಹುಲ್ಕೆರೆ ಮಹದೇವ, ಟಿ.ಡಿ.ನಾಗರಾಜು, ವಕೀಲ ಚೀರನಹಳ್ಳಿ ಲಕ್ಷ್ಮಣ್, ಜಾಗೃತ ಕರ್ನಾಟಕದ ನಗರಕೆರೆ ಜಗದೀಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.