ಕಾರ್ಕಳ ವಿಧಾನಸಭಾ ಕ್ಷೇತ್ರದ ಬೈಲೂರ್‌ನ ಉಮ್ಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಮಾಡಿ, ಕಾರ್ಕಳವನ್ನು ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿ ಮಾಡಿದ್ದೇನೆಂದು ಹೇಳುತ್ತಿದ್ದ ಶಾಸಕ ಸುನೀಲ್ ಕುಮಾರ್ ಅವರ ಸಾಧನೆಗೆ ಪೂರಕವಾದ ದಾಖಲೆಗಳೇ ಇಲ್ಲ. ಥೀಂ ಪಾರ್ಕ್‌ನ ವಿಚಾರದಲ್ಲಿ ಸಾರ್ವಜನಿಕರ ಆಕ್ಷೇಪಗಳಿಗೆ ಕಾರಣವಾಗುತ್ತಿರುವ ಸತ್ಯಾಸತ್ಯತೆಗಳು ಬೆಳಕಿಗೆ ಬಂದಿವೆ ಎಂದು ಕಾಂಗ್ರೆಸ್ ವಕ್ತಾರ ಶುಭದರಾವ್ ಹೇಳಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಪರಶುರಾಮ ಥೀಂ ಪಾರ್ಕ್ ನಿರ್ಮಾಣಗೊಂಡಿರುವ ಜಮೀನು ಗೋಮಾಳ ಜಮೀನು ಎಂದಿದ್ದ ಬಿಜೆಪಿ ಸರ್ಕಾರ, ಪಾರ್ಕ್ ನಿರ್ಮಾಣ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಹಾಗಾದರೇ, ಪರಶುರಾಮ ಥೀಂ ಪಾರ್ಕ್ ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿದೆಯೇ? ಮುಂದೆ ಅದರ ನಿರ್ವಹಣೆಯ ಜವಾಬ್ದಾರಿ ಯಾರ ಹೊಣೆ” ಎಂದು ಅವರು ಪ್ರಶ್ನಿಸಿದ್ದಾರೆ.
“ಎರ್ಲಪಾಡಿ ಗ್ರಾಮದ ಸರ್ವೆ ನಂ.329/1ರಲ್ಲಿ 1.58 ಎಕರೆ ಜಮೀನು ಗೋಮಾಳ ಜಮೀನಾಗಿದೆ. ಅದರಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಂ ಪಾರ್ಕ್‌ಗೆ ಆ ಜಾಗವನ್ನು ಮಂಜೂರು ಮಾಡಲು ಅವಕಾಶವಿಲ್ಲ ಎಂದು ಎರ್ಲಪಾಡಿ ಗ್ರಾಮ ಪಂಚಾಯತಿಗೆ ಕಾರ್ಕಳ ತಹಶೀಲ್ದಾರ್ ಆದೇಶ ನೀಡಿದ್ದಾರೆ. ಆದರೂ, ಕೋಟ್ಯಾಂತರ ರೂಪಾಯಿ ಸರ್ಕಾರದ ಅನುದಾನ ಬಳಕೆ ಮಾಡಿ ನಿರ್ಮಾಣಗೊಂಡ ಥೀಂ ಪಾರ್ಕ್ ಕಾನೂನು ಬಾಹಿರ ಅಭಿವೃದ್ಧಿ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.
“2019ರ ನವಂಬರ್ 8ರಂದು ಎರ್ಲಪಾಡಿ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಈ ಜಮೀನನ್ನು ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಮಾಡುವ ಉದ್ದೇಶಕ್ಕೆ ಕಾಯ್ದಿರಿಸುವಂತೆ ನಿರ್ಣಯ ಮಾಡಿ ಪ್ರಸ್ತಾವನೆಯನ್ನು ತಹಶೀಲ್ದಾರ್‌ಗೆ ಸಲ್ಲಿಸಿತ್ತು. ಡೀಮ್ಡ್ ಫಾರೆಸ್ಟ್, ಗೋಮಾಳ ಎನ್ನುವ ಕಾರಣಗಳಿಂದ ಗ್ರಾಮ ಪಂಚಾಯತಿ, ತಹಸೀಲ್ದಾರ್ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಹಾಗೂ ಸರ್ಕಾರದ ಕಂದಾಯ ಅಧೀನ ಕಾರ್ಯದರ್ಶಿವರೆಗೂ ಪತ್ರ ವ್ಯವಹಾರ ನಡೆಯುತ್ತಲೇ ಇತ್ತು. ಆದರೆ, ಇನ್ನೊಂದೆಡೆ ಯಾವುದೇ ಅನುಮೋದನೆ ಇಲ್ಲದೆ ಸರ್ಕಾರದ ಗರಿಷ್ಠ ಪ್ರಮಾಣದ ಅನುದಾನ ಅನಧೀಕೃತವಾಗಿ ಈ ಉಮಿಕಲ್ಲ್ ಬೆಟ್ಟದ ಮೇಲೆ ಸುರಿಯಲಾಗಿದೆ. ತಮ್ಮ ಸರ್ಕಾರ, ತಾನು ಮಾಡಿದ್ದೇ ಸರಿ ಎನ್ನುವ ರೀತಿ ನಡೆದುಕೊಂಡ ಶಾಸಕರು ರಾಜ್ಯದ ಮುಖ್ಯ ಮಂತ್ರಿಯನ್ನೇ ಉದ್ಘಾಟನೆಗೆ ಕರೆಸಿ ಪ್ರಚಾರ ಗಿಟ್ಟಿಸಿಕೊಂಡರು” ಎಂದು ಕಿಡಿಕಾರಿದ್ದಾರೆ.
“2023ರ ಮಾರ್ಚ್ 15ರಂದು ಸರ್ಕಾರದ ಆಧೀನ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗೆ ಪತ್ರ ಬರೆದು ಥೀಂ ಪಾರ್ಕ್ ನಿರ್ಮಾಣಕ್ಕಾಗಿ ಎರ್ಲಪಾಡಿ ಗ್ರಾಮ ಪಂಚಾಯತಿ ಕಾಯ್ದಿರಿಸಿದ ಜಮೀನು ಗೋಮಾಳ ಜಮೀನಾಗಿದೆ. ಆ ಜಮೀನನ್ನು ಪ್ರಸ್ತಾವಿತ ಉದ್ದೇಶಕ್ಕೆ ಮಂಜೂರು ಮಾಡಲು ಅವಕಾಶವಿಲ್ಲವೆಂದು ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ಅದೇ ಆದೇಶವನ್ನು 2023ರ ಮೇ 22ರಂದು ಉಡುಪಿ ಜಿಲ್ಲಾಧಿಕಾರಿಗಳು ಕಾರ್ಕಳ ತಹಶೀಲ್ದಾರ್‌ಗೆ ಕಳುಹಿಸಿದ್ದರು. ತಹಶೀಲ್ದಾರರು 2023ರ ಜುಲೈ 05ರಂದು ಎರ್ಲಪಾಡಿ ಗ್ರಾಮ ಪಂಚಾಯತಿಗೆ ತಿರಸ್ಕಾರದ ಆದೇಶ ಕಳುಹಿಸಿದ್ದರು. ಬಿಜೆಪಿ ಸರ್ಕಾರವೇ ಥೀಂ ಪಾರ್ಕ್ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂಬುದು ಜಗಜ್ಜಾಹೀರಾಗಿದೆ” ಎಂದಿದ್ದಾರೆ.
“ಸುನೀಲ್ ಕುಮಾರ್ ಅವರು ಸಚಿವರಾಗಿದ್ದರೂ ಪಾರ್ಕ್ ನಿರ್ಮಾಣಕ್ಕೆ ಜಮೀನು ಕೊಡಿಸಲು ಸಾದ್ಯವಾಗದೆ, ಕಾನೂನು ಬಾಹಿರ ಕಾಮಗಾರಿ ನಡೆಸಿದ್ದರ ಉದ್ದೇಶವೇನು? ಜಮೀನು ಮಂಜೂರಾಗಲಿಲ್ಲ ಎಂದಾದರೂ ಅಷ್ಟು ದೊಡ್ಡ ಮೊತ್ತದ ಅನುದಾನ ಬಿಡುಗಡೆ ಹೇಗೆ ಸಾಧ್ಯವಾಯಿತು? ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಗಳಿಂದ ಒಟ್ಟು 6,71,92,943 ಕೋಟಿ ರೂ. ಬಿಡುಗಡೆಯಾಗಿದೆ. ಅನುಮೋದನೆ ಇಲ್ಲದ ಕಾಮಗಾರಿಗೆ ಸರ್ಕಾರ ಕಾರ್ಯಾದೇಶವನ್ನು ನೀಡಲು ಸಾದ್ಯವಿದೆಯೇ? ಸರ್ಕಾರದ ಯಾವುದೇ ಕಾರ್ಯದೇಶವಿಲ್ಲದೆ ನಿರ್ಮಿತಿ ಕೇಂದ್ರ ಇಷ್ಟೇಲ್ಲಾ ಕಾಮಗಾರಿಗಳನ್ನು ಯಾವ ಆಧಾರದ ಮೇಲೆ ಮಾಡಿದೆ? ಮತ್ತು ಗುತ್ತಿಗೆದಾರರಿಗೆ ಹಣ ಪಾವತಿ ಹೇಗೆ ಸಾದ್ಯವಾಯಿತು” ಎಂದು ಅವರು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ‘ಊಟಕ್ಕಿಲ್ಲದ ಉಪ್ಪಿನಕಾಯಿ’ ರೀತಿಯಲ್ಲಿವೆ ‘ಪಶು ಸಂಜೀವಿನಿ’ ಆ್ಯಂಬುಲೆನ್ಸ್‌ಗಳು
“ಆ ಜಮೀನು ಗೋಮಾಳಕ್ಕೆ ಸೇರಿದ್ದಾಗಿದ್ದು, ಮೊದಲಿನಿಂದಲೂ ಅಕ್ಷೇಪ ವ್ಯಕ್ತಪಡಿಸುತ್ತಿದ್ದ ಅರಣ್ಯ ಇಲಾಖೆಯ ಮುಂದಿನ ನಡೆ ಏನಿರಬಹುದು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ? ಪರಶುರಾಮ ಥೀಂ ಪಾರ್ಕ್ ನಿರ್ಮಾಣಕ್ಕೆ ನಮ್ಮ ವಿರೋದವಾಗಲಿ, ಆಕ್ಷೇಪವಾಗಲಿ ಇಲ್ಲ. ಆದರೆ ಮುಚ್ಚಿಟ್ಟಿರುವ ಸತ್ಯವನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ಅದನ್ನು ಮಾಡಿದ್ದೇವೆ. ಶಾಸಕರು ಕೂಡ ಈ ಬಗ್ಗೆ ಸತ್ಯಾಸತ್ಯತೆಯನ್ನು ಜನತೆಗೆ ತಿಳಿಸುವಂತೆ ಆಗ್ರಹಿಸುತೇನೆ” ಎಂದು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಜಿತ್ ಹೆಗ್ಡೆ, ಕಾರ್ಯದರ್ಶಿ ವಿವೇಕಾನಂದ ಶೆಣೈ ಉಪಸ್ಥಿತರಿದ್ದರು.