ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಕೇವಲ ಒಂದಂಕಿ ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸುತ್ತದೆ. ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಈ ಹಿಂದೆ ಬಿಜೆಪಿ ನಾಯಕರು ರಾಜ್ಯದಲ್ಲಿ 28ಕ್ಕೆ 28 ಸ್ಥಾನ ಗೆಲ್ಲುತ್ತೇವೆ ಎಂದು ಎಲ್ಲ ಕಡೆ ಹೇಳುತ್ತಿದ್ದರು. ಈಗ ಅವರಿಗೆ ಎಂಟು ಕ್ಷೇತ್ರಗಳಲ್ಲಿಯೂ ಗೆಲ್ಲುವ ಭರವಸೆ ಉಳಿದಿಲ್ಲ” ಎಂದು ಹೇಳಿದರು.
“ಬಿಜೆಪಿ ಸುಳ್ಳು ಹೇಳಿ ಅಧಿಕಾರ ನಡೆಸುತ್ತದೆ. ಆದರೆ ಕಾಂಗ್ರೆಸ್ ಕೆಲಸದಿಂದ ಅಧಿಕಾರಕ್ಕೆ ಬರುತ್ತದೆ. ರಾಜ್ಯದಲ್ಲಿ 223 ತಾಲೂಕು ಬರಪೀಡಿತ ಎಂದು ಘೋಷಿಸಿದರೂ ರಾಜ್ಯದ 26 ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಿಲ್ಲ. ಇದು ಅಕ್ಷಮ್ಯ ಅಪರಾಧ. ಹತ್ತು ವರ್ಷಗಳಲ್ಲಿ ಬಿಜೆಪಿ ಆಶ್ವಾಸನೆ ಕೊಟ್ಟ ಯಾವುದೇ ಭರವಸೆ ಈಡೇರಿಸಿಲ್ಲ. ಮೋದಿ ಸುಳ್ಳು ಹೇಳುವುದು, ದೇಶಕ್ಕೆ ಸಾಲ ಮಾಡಿದ್ದು ಬಿಟ್ಟರೆ ಅವರ ಸಾಧನೆ ಶೂನ್ಯ” ಎಂದು ಟೀಕಿಸಿದರು.
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯುವಕರಿಗೆ, ಮಹಿಳೆಯರಿಗೆ ಟಿಕೆಟ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ ಶಾ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜ್ಯಕ್ಕೆ ಬರುತ್ತಾರೆ. ಇವರಿಗೆ ರಾಜ್ಯದ ರೈತರ ಹಿತ ಬೇಕಾಗಿಲ್ಲ. ಕೇಂದ್ರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ. ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸುವರು” ಎಂದು ಹೇಳಿದರು.
ಈ ಹಿಂದಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಒಂದೇ ಒಂದು ಬಸ್ ಖರೀದಿಸಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಒಟ್ಟು 5,800 ಬಸ್‌ಗಳ ಖರೀದಿಗೆ ಚಾಲನೆ ನೀಡಲಾಗಿದೆ. ಈಗಾಗಲೇ ಮೂರು ಸಾವಿರ ಬಸ್ ಬಂದಿವೆ. ಪ್ರತಿ ವರ್ಷ ಹತ್ತು ಸಾವಿರ ನೌಕರರು ಸಾರಿಗೆ ಇಲಾಖೆಯಲ್ಲಿ ನಿವೃತ್ತರಾಗುತ್ತಾರೆ. ಕಾಲಕಾಲಕ್ಕೆ ನೇಮಕಾತಿ ಮಾಡಬೇಕು. ಆದರೆ ಬಿಜೆಪಿ ಆಡಳಿತ ಅವಧಿಯಲ್ಲಿ ನೇಮಕಾತಿ ಮಾಡಲಿಲ್ಲ. ಪುನಃ ಈಗ ಖಾಲಿ ಹುದ್ದೆ ಭರ್ತಿ ಮಾಡಲಾಗುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ಅಪಹರಣ | ಮೇ 8ರವರೆಗೆ ಎಸ್‌ಐಟಿ ಕಸ್ಟಡಿಗೆ ಎಚ್ ಡಿ ರೇವಣ್ಣ
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮುಖಂಡರಾದ ಅಬ್ದುಲ್ ಮನ್ನಾನ್ ಸೇಠ್, ಮುರುಳಿಧರ್, ಗುರಮ್ಮಾ ಸಿದ್ದಾರೆಡ್ಡಿ, ಜಾರ್ಜ್ ಫರ್ನಾಂಡಿಸ್ ಇದ್ದರು.