ಬಿಜೆಪಿ ನಾಯಕರುಗಳು ಮಂಗಳೂರು ಎಸ್‌ಪಿಗೆ ಬಹಿರಂಗ ಬೆದರಿಕೆ ಹಾಕಿದ್ದಾರೆ. ದ್ವೇಷಭಾಷಣ ಮಾಡಿದರೂ, ಕಿಡಿಗೇಡಿ ಕೃತ್ಯದಲ್ಲಿ ಭಾಗಿಯಾದರೂ, ಹಿಂದು-ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ ತಂದರೂ ಕ್ರಮ ಕೈಗೊಳ್ಳದೆ ತೆಪ್ಪಗಿರಬೇಕಂತೆ... ಇದು ಬಿಜೆಪಿ ನಾಯಕರ ಧೋರಣೆ
ಕೋಮು ದ್ವೇಷ ಎಂದಾಗ ಕರ್ನಾಟದಲ್ಲಿ ಮೊದಲು ನೆನಪಿಗೆ ಬರುವುದು ದಕ್ಷಿಣ ಕನ್ನಡ ಜಿಲ್ಲೆ. ಇಲ್ಲಿ ಬಿಜೆಪಿ ತನ್ನ ಸಂಘಪರಿವಾರದ ನಾಯಕರುಗಳ ಮೂಲಕ ಬಹಳ ಸಲೀಸಾಗಿ ಹಿಂದೂ-ಮುಸ್ಲಿಮರನ್ನು ಎತ್ತಿಕಟ್ಟುವ ‘ಪೂರ್ವಯೋಜಿತ ಕಾರ್ಯ’ವನ್ನು ಶಿಸ್ತುಬದ್ಧವಾಗಿ ಮಾಡುತ್ತಿದೆ. ಈ ಕೆಟ್ಟ, ಹೀನಾಯ ಕೃತ್ಯ ಮಾಡಿ ಗಡಿಯಲ್ಲಿ ಹೋರಾಡಿ ಗೆದ್ದ ಯೋಧರಂತಹ ‘ಪೋಸ್’ ನೀಡುತ್ತಾರೆ. ದೇಶಪ್ರೇಮಿಗಳೆಂದು ಬೀಗುತ್ತಾರೆ. ಇವೆಲ್ಲವನ್ನು ಹಿಂದಕ್ಕೆ ಸರಿಸಿ ಈಗ ಪೊಲೀಸರಿಗೆ ಬಹಿರಂಗವಾಗಿ ಬೆದರಿಕೆ ಹಾಕುವ ಮಟ್ಟಕ್ಕೆ ಬಿಜೆಪಿ ನಾಯಕರುಗಳು ಬೆಳೆದುಬಿಟ್ಟಿದ್ದಾರೆ.
ರಾಜಕೀಯದಾಟ ವಿಭಿನ್ನ. ಎಲ್ಲರಿಗೂ ತಿಳಿಯದು ಎಂಬುದನ್ನು ಒಪ್ಪಲೇಬೇಕು. ಅಲ್ಲಿ ಪೊಲೀಸರನ್ನು ರಾಜಕಾರಣಿಗಳು ಬಗ್ಗಿಸುತ್ತಾರೆ, ದಂಡಿಸುತ್ತಾರೆ, ತಮ್ಮ ಕೈಯಾಳುಗಳಿಗೂ ಕಡೆಯಾಗಿ ನೋಡುತ್ತಾರೆ. ಆದರೆ ಇವೆಲ್ಲವೂ ಎಲ್ಲರ ಗಮನಕ್ಕೆ ಬಂದರೂ ನಾಲ್ಕು ಗೋಡೆಯ ನಡುವೆ ನಡೆಯುತ್ತಿತ್ತು. ಆದರೆ ಬಿಜೆಪಿ ನಾಯಕರು ಇವೆಲ್ಲವನ್ನೂ ಮೀರಿ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಹುಂಬ ಧೈರ್ಯಕ್ಕೆ ತಲುಪಿಯಾಗಿದೆ. ಅಧಿಕಾರಿಗಳಿಗೆ ಬಹಿರಂಗವಾಗಿ ಧಮ್ಕಿ ಹಾಕುವ ಮಟ್ಟ ಮುಟ್ಟಿದೆ.
ಇದನ್ನು ಓದಿದ್ದೀರಾ? ದಕ್ಷಿಣ ಕನ್ನಡ | ಬಂಟ ಬ್ರಿಗೇಡ್ ಹೆಸರಲ್ಲಿ ನಕಲಿ ಪತ್ರ: ಬಿಜೆಪಿ ದೂರು
ದಕ್ಷಿಣ ಕನ್ನಡದಲ್ಲಿ ಅಬ್ದುಲ್ ರೆಹ್ಮಾನ್, ಫಾಸಿಲ್, ಮಸೂದ್ ಕೊಲೆಗಳ ಮೇಲೆ ಬೀಳದ ಎನ್‌ಐಎ ಕಣ್ಣು ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಮೇಲೆ ಬಿದ್ದಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ನಾಯಕ ಅರುಣ್ ಪುತ್ತಿಲ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಆಗ್ರಹಿಸುತ್ತಿದ್ದ ನಡುವೆ ಎನ್‌ಐಎ ಈ ಪ್ರಕರಣದ ತನಿಖೆಗೆ ಮುಂದಾಗಿದೆ. ಭಯೋತ್ಪಾದನಾ ನಿಗ್ರಹ ಸಂಸ್ಥೆಯಾಗಿರುವ ಎನ್‌ಐಎ ಎರಡು ರೌಡಿ ಗುಂಪುಗಳ ನಡುವಿನ ಬೀದಿ ಬಡಿದಾಟ, ಕೊಲೆಗೆ ಬೇರೆಯೇ ಬಣ್ಣ ಹಚ್ಚಲು ಮುಂದಾಗಿದೆ.
ಎನ್ಐಎ ತನಿಖೆಗೆ ಮುಂದಾಗುತ್ತಿದ್ದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಪೊಲೀಸರಿಗೆ ಬಹಿರಂಗವಾಗಿ ಬೆದರಿಕೆ ಹಾಕುವುದು ಮುಂದುವರೆದಿದೆ. ತಮ್ಮ ಸರ್ಕಾರವಿದ್ದಾಗ ಪೊಲೀಸರನ್ನು ಮನಸೋ ಇಚ್ಛೆ ಬಳಸಿಕೊಳ್ಳುವ ಬಿಜೆಪಿ, ಸರ್ಕಾರವಿಲ್ಲದಿದ್ದಾಗ ತಾವು ಹೇಳಿದಂತೆ ಕೇಳದ ಅಥವಾ ಅಧಿಕಾರದಲ್ಲಿರುವವರು ಹೇಳಿದಂತೆ ಕೇಳುವ ಪೊಲೀಸ್ ಅಧಿಕಾರಿಗಳ ಮೇಲೆ ಅಕ್ಷರಶಃ ದಾಳಿ ಮಾಡತೊಡಗಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಒಂದಾದ ಬಳಿಕ ಒಂದು ಪ್ರತೀಕಾರದ ಕೊಲೆ, ದಾಳಿಗಳು ನಡೆಯುತ್ತಲೇ ಇವೆ. ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರವಾಗಿ ಬರೀ ಮುಸ್ಲಿಮ್ ಎಂಬ ಕಾರಣಕ್ಕೆ ಅಬ್ದುಲ್ ರೆಹ್ಮಾನ್ ಕೊಲೆಯಾಗಿದೆ. ಒಂದು ಪ್ರತೀಕಾರದ ದಾಳಿಗೆ ಕಾಯುತ್ತಾ ಕೂತಿದ್ದ ಸರ್ಕಾರ ಬಳಿಕ ಕೊಂಚ ಎಚ್ಚೆತ್ತುಕೊಂಡಂತಿದೆ. ಹಿಂದೂ ಮುಸ್ಲಿಮರು ಸೇರಿ ದ್ವೇಷ ಭಾಷಣ ಮಾಡುವ, ಗಲಾಟೆ ಎಬ್ಬಿಸುವ 36 ಜನರನ್ನು ಗಡಿಪಾರು ಮಾಡಲು ಮುಂದಾಗಿದೆ. ಇನ್ನೊಂದೆಡೆ ಆರ್‌ಎಸ್‌ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ದ್ವೇಷ ಭಾಷಣ ಮಾಡುವವರ ವಿರುದ್ಧ ಪ್ರಕರಣಗಳೂ ದಾಖಲಾಗುತ್ತಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರೌಡಿಶೀಟರ್ ಸುಹಾಸ್ ಹತ್ಯೆ ತನಿಖೆಗೆ ಎನ್‌ಐಎ ಪ್ರವೇಶ: ಸಮಾಜಕ್ಕೆ ಕೊಟ್ಟ ಸಂದೇಶವೇನು?
ಇವೆಲ್ಲವೂ ಬಿಜೆಪಿ ನಾಯಕರುಗಳಿಗೆ ತಲೆ ಬಿಸಿ ಉಂಟು ಮಾಡಿದ್ದು ಕೇಸುಗಳನ್ನು ದಾಖಲಿಸುತ್ತಿರುವ ದಕ್ಷಿಣ ಕನ್ನಡ ಎಸ್‌ಪಿ ಡಾ. ಅರುಣ್ ಕೆ ವಿರುದ್ಧ ವಾಕ್ ಪ್ರಹಾರ ಆರಂಭಿಸಿದ್ದಾರೆ. “ಮಂಗಳೂರು ಎಸ್‌ಪಿ ಮನಬಂದಂತೆ ವರ್ತಿಸುತ್ತಿದ್ದಾರೆ. ಮುಂದೆ ನಮ್ಮ ಸರ್ಕಾರ ಬರುತ್ತದೆ. ಹೊಸ ಎಸ್‌ಪಿ ಬಹಳ ಡ್ರಾಮ ಮಾಡ್ತಿದ್ದಾರೆ. ಎಷ್ಟು ಮಂದಿಗೆ ಕೇಸ್ ಹಾಕ್ತಿರೋ ಹಾಕಿ, ನಾನು ಬರ್ತೇನೆ ನೋಡುವ” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸವಾಲು ಹಾಕಿದ್ದಾರೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕೂಡಾ ಪೊಲೀಸರಿಗೆ, “ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಕಾನೂನು ಸುವ್ಯವಸ್ಥೆ ನಿರ್ವಹಣೆಯ ನೆಪದಲ್ಲಿ ಪೊಲೀಸ್ ಇಲಾಖೆ ಗೂಂಡಾ ವರ್ತನೆ ತೋರುತ್ತಿದೆ. ನಮ್ಮ ಕಾರ್ಯಕರ್ತರು ಸಮಾಧಾನದಲ್ಲಿದ್ದಾರೆ. ಇದನ್ನು ನಮ್ಮ ದೌರ್ಬಲ್ಯ ಎಂದು ಭಾವಿಸಬೇಡಿ. ಅದರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಇವೆಲ್ಲವುದರ ನಡುವೆ ರೌಡಿಶೀಟರ್ ಅನ್ನು ಹಿಂದೂ ಕಾರ್ಯಕರ್ತ ಎಂದು ಹೇಳಿಕೊಂಡು ಓಡಾಡುತ್ತಿರುವ ಬಿಜೆಪಿಗೆ ಸುಹಾಸ್ ಶೆಟ್ಟಿ ಪ್ರಕರಣವನ್ನು ಎನ್‌ಐಎ ನೀಡಿದರೆ ಏನು ಲಾಭ? ಇಲ್ಲಿ ಭಯೋತ್ಪಾದನೆ ಕಿಡಿ ಹಚ್ಚುವ ಹುನ್ನಾರವಿದೆಯೇ? ಅಷ್ಟಕ್ಕೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬೆದರಿಕೆ ಹಾಕುವಂತಹ ಭಂಡ ಧೈರ್ಯ ಈ ಬಿಜೆಪಿ ನಾಯಕರುಗಳಿಗೆ ಬಂದಿದ್ದು ಎಲ್ಲಿಂದ? -ಹೀಗೆ ಹಲವು ಪ್ರಶ್ನೆಗಳು ಹುಟ್ಟುತ್ತವೆ. ಅವೆಲ್ಲವಕ್ಕೂ ಉತ್ತರ ಪ್ರಾಯಶಃ ರಾಜಕಾರಣ, ಸರ್ವಾಧಿಕಾರದ ಮನಸ್ಥಿತಿ ಅಥವಾ ಈ ನಾಯಕರುಗಳ ಹಿಂದಿರುವ ಪ್ರಬಲವಾದ ಕೈಗಳು. ಜೊತೆಗೆ ಯಾವುದೇ ಪ್ರಕರಣವಾದರೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತಮ್ಮ ನೆರಳಾಗಿ ನಿಲ್ಲುತ್ತದೆ ಎಂಬ ಅತಿವಿಶ್ವಾಸವೂ ಇರಬಹುದು.
ಏನೇ ಆದರೂ ಬಿಜೆಪಿ ನಾಯಕರುಗಳ ಈ ವರ್ತನೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸುವಂಥದ್ದು. ಓರ್ವ ಪೊಲೀಸ್ ವರಿಷ್ಠಾಧಿಕಾರಿಗೆ ‘ಈಗ ನಾವು ಅಧಿಕಾರದಲ್ಲಿಲ್ಲ, ನಾವು ಅಧಿಕಾರಕ್ಕೆ ಬಂದಾಗ ನಿನಗೆ ಬುದ್ಧಿ ಕಲಿಸುತ್ತೇವೆ’ ಎಂಬರ್ಥದ ಎಚ್ಚರಿಕೆಯನ್ನು ಬಹಿರಂಗವಾಗಿ ನೀಡುತ್ತಾರೆಂದರೆ, ಬಿಜೆಪಿ ಆಡಳಿತ ವೈಖರಿ ಏನೆಂಬುದು ಸ್ಪಷ್ಟವಾಗುತ್ತದೆ. ಇಂತಹ ದುರಹಂಕಾರದ ಮಾತುಗಳಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಬೆನ್ನಿಗಿರುವುದು, ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದು… ಭಾರತೀಯರನ್ನು ಬಡಿದೆಚ್ಚರಿಸಬೇಕಾಗಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.