ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳಲ್ಲಿ ಅನಧಿಕೃತವಾಗಿ ಪ್ರಯಾಣಿಸಿದ ಪ್ರಯಾಣಿಕರಿಂದ ಸೆಪ್ಟೆಂಬರ್‌ನಲ್ಲಿ ಒಟ್ಟು ₹6,10,880 ದಂಡ ವಸೂಲಿ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸ್ಥೆ, “ಸಂಸ್ಥೆಯ ಆದಾಯ ಸೋರಿಕೆ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಸ್ಥೆಯ ತನಿಖಾ ತಂಡ ಸೆಪ್ಟೆಂಬರ್ ತಿಂಗಳಿನಲ್ಲಿ ಕಾರ್ಯಾಚರಣೆ ನಡೆಸಿದೆ. ನಗರದಾದ್ಯಂತ ಸಂಚರಿಸುವ ವಾಹನಗಳನ್ನು ಸಂಸ್ಥೆಯ ತನಿಖಾ ತಂಡಗಳು ತಪಾಸಣೆ ನಡೆಸಿವೆ” ಎಂದು ಹೇಳಿದೆ.
“ಸೆಪ್ಟೆಂಬರ್‌ನಲ್ಲಿ ಒಟ್ಟು 14,930 ಟ್ರಿಪ್‌ಗಳನ್ನು ತಪಾಸಣೆ ನಡೆಸಿ, 3027 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಲಾಗಿದೆ. ಅವರಿಂದ ಒಟ್ಟು ₹6,10,880 ದಂಡ ವಸೂಲಿ ಮಾಡಲಾಗಿದೆ. ಸಂಸ್ಥೆಯ ನಿರ್ವಾಹಕರ ವಿರುದ್ಧ 906 ಪ್ರಕರಣಗಳನ್ನು ದಾಖಲಿಸಲಾಗಿದೆ” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವೈದ್ಯರ ನಿರ್ಲಕ್ಷದಿಂದಾಗಿ ಹತ್ತು ವರ್ಷದ ಬಾಲಕ ಸಾವು
“ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 387 ಪುರುಷ ಪ್ರಯಾಣಿಕರಿಂದ ಒಟ್ಟು ₹38,700 ಅನ್ನು ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿದೆ. ಒಟ್ಟಾರೆಯಾಗಿ, ಸೆಪ್ಟೆಂಬರ್ ತಿಂಗಳಿನಲ್ಲಿ 3414 ಪ್ರಯಾಣಿಕರಿಂದ ಒಟ್ಟು ₹6,49,580 ದಂಡವನ್ನು ವಸೂಲಿ ಮಾಡಲಾಗಿದೆ” ಎಂದು ಮಾಹಿತಿ ನೀಡಿದೆ.