- ಬೆಂಗಳೂರಿನ ಸ್ಫೂರ್ತಿಧಾಮ ನೀಡುವ ಪ್ರಶಸ್ತಿಗಳು
- ಏ. 14ಕ್ಕೆ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಬೆಂಗಳೂರಿನ ಸ್ಫೂರ್ತಿಧಾಮ ನೀಡುವ 2023ನೇ ಸಾಲಿನ ‘ಬೋಧಿವೃಕ್ಷ’ ಮತ್ತು ‘ಬೋಧಿವರ್ಧನ’ ಪ್ರಶಸ್ತಿಗಳಿಗೆ ಆರು ಮಂದಿಯನ್ನು ಆಯ್ಕೆ ಮಾಡಲಾಗಿದೆ.
‘ಬೋಧಿವೃಕ್ಷ’ ಪ್ರಶಸ್ತಿಗೆ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ‘ಬೋಧಿವರ್ಧನ’ ಪ್ರಶಸ್ತಿಗೆ ದಲಿತ ಮುಖಂಡ ಎನ್ ಮುನಿಸ್ವಾಮಿ, ಪತ್ರಕರ್ತ ಜಿ ಮಹಾಂತೇಶ್, ಬೇಬಿಜಾನ್ ಹಳೇಮನಿ, ಡಾ. ನಾಗೇಶ್ ಕುಂದಾಪುರ, ಕೆ ಸಿ ಅಕ್ಷತಾ ಅವರು ಆಯ್ಕೆಯಾಗಿದ್ದಾರೆ ಎಂದು ಸ್ಫೂರ್ತಿಧಾಮದ ಅಧ್ಯಕ್ಷ ಎಸ್ ಮರಿಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೋಧಿವೃಕ್ಷ ಮತ್ತು ಬೋಧಿವರ್ಧನ ಪ್ರಶಸ್ತಿಗೆ ಆಯ್ಕೆಯಾದವರ ಕಿರುಪರಿಚಯ ಈ ಕೆಳಗಿನಂತಿದೆ.

ಪ್ರೊ. ರವಿವರ್ಮ ಕುಮಾರ್ (ಬೋಧಿವೃಕ್ಷ ಪ್ರಶಸ್ತಿ)
1975 ರಿಂದ ಪ್ರೊ. ರವಿವರ್ಮ ಕುಮಾರ್ ಅವರು ವಕೀಲಿ ವೃತ್ತಿಯಲ್ಲಿದ್ದಾರೆ. 2003ರಲ್ಲಿ ಅವರು ಹೈಕೋರ್ಟ್‌ನ ಹಿರಿಯ ವಕೀಲರಾದರು. 2013-15ರ ಮಧ್ಯೆ ಕರ್ನಾಟಕ ಸರ್ಕಾರದ ಅಡ್ವೋಕೇಟ್ ಜನರಲ್ ಸಹ ಆಗಿದ್ದರು. ಕರ್ನಾಟಕ ಹೈಕೋರ್ಟ್‌ನ ಖ್ಯಾತ ವಕೀಲರಾಗಿ ಪ್ರೊ. ಕುಮಾರ್ ಅವರು ಸಂವಿಧಾನಾತ್ಮಕ ಕಾನೂನು, ಮಾನವ ಹಕ್ಕುಗಳು, ಅಫರ್ಮೆಟಿವ್ ಆಕ್ಷನ್ ಮತ್ತು ಸಾಮಾಜಿಕ ನ್ಯಾಯ ಇವುಗಳಲ್ಲಿ ವಿಶೇಷ ಪರಿಣಿತಿ ಹೊಂದಿದ್ದಾರೆ.
ಜಾತಿವಾರು ಜನಗಣತಿ ಕೇಳುವ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿರುವುದನ್ನು ವಿರೋಧಿಸುವ ಕೇಸುಗಳು ಸೇರಿದಂತೆ ಅನೇಕ ಗಮನಾರ್ಹ ಮೊಕದ್ದಮೆಗಳನ್ನು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳಲ್ಲಿ ಪ್ರತಿನಿಧಿಸಿ ಯಶಸ್ವಿಯಾಗಿದ್ದಾರೆ.
ಅನೇಕ ಮೊಕದ್ದಮೆಗಳಲ್ಲಿ ಶೋಷಿತರ ಪರವಾಗಿ ಬಲವಾಗಿ ವಾದ ಮಂಡಿಸಿದ್ದಾರೆ. ಸುಮಾರು 45 ವರ್ಷಗಳ ಈವರೆಗಿನ ಅವರ ವೃತ್ತಿ ಜೀವನದಲ್ಲಿ ಅವರು 30 ಸಾವಿರಕ್ಕೂ ಹೆಚ್ಚು ಕೇಸುಗಳಲ್ಲಿ ವಾದ ಮಂಡಿಸಿದ್ದಾರೆ. ಅನೇಕ ಪ್ರತಿಷ್ಠಿತ ಸಮಿತಿಗಳ ಮತ್ತು ಆಯೋಗಗಳ ಸದಸ್ಯರಾಗಿದ್ದಾರೆ. 2001ರ ಮೊದಲನೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು.
ಆಮ್ನೆಸ್ಟಿ ಇಂಟರ್‌ನ್ಯಾಷನಲ್, ಚಿಲಿ, ಸ್ಯಾಂಟಿಯಾಗೋ ಇಲ್ಲಿ ನಡೆದ ಮಾನವ ಹಕ್ಕುಗಳ ಅಂತಾರಾಷ್ಟ್ರೀಯ ದುಂಡು ಮೇಜಿನ ಸಭೆಗೆ ಏಷ್ಯಾದಿಂದ ಆಹ್ವಾನಿಸಲ್ಪಟ್ಟ ಏಕೈಕ ಸದಸ್ಯರಾಗಿದ್ದರು.
2023ನೇ ಸಾಲಿನ ಬೋಧಿವೃಕ್ಷ ಪ್ರಶಸ್ತಿಯನ್ನು ಅವರು ತಮ್ಮ ವಕೀಲ ವೃತ್ತಿಗೆ ಮತ್ತು ಸಾಮಾಜಿಕ ನ್ಯಾಯಕ್ಕೆ ನೀಡಿರುವ ಅತ್ಯಮೂಲ್ಯ ಕೊಡುಗೆಗಾಗಿ ನೀಡಲಾಗುತ್ತಿದೆ.
‘ಬೋಧಿವರ್ಧನ’ ಪ್ರಶಸ್ತಿ ವಿಜೇತರು;

ಮುನಿಸ್ವಾಮಿ ಎನ್
ಕೋಲಾರ ಜಿಲ್ಲೆಯವರಾದ ಎನ್ ಮುನಿಸ್ವಾಮಿ ಅವರು ಬಾಲ್ಯದಿಂದಲೇ ಹಸಿವು, ಬಡತನ, ಅಸ್ಪೃಶ್ಯತೆ ಅನುಭವಿಸುತ್ತಾ ಬಂದವರು. ಇವರು ಪಿಯುಸಿಯಲ್ಲಿ ಓದುತ್ತಿದ್ದಾಗ ನಡೆದ ಮುನಿವೆಂಕಟಪ್ಪ ಎಂಬ ವಿದ್ಯಾರ್ಥಿಯ ಕೊಲೆ ಇವರನ್ನು ಹೆಚ್ಚು ಘಾಸಿಗೊಳಿಸಿತು. ಇವರು ಬಿ ಕೃಷ್ಣಪ್ಪ, ದೇವನೂರ ಮಹಾದೇವ, ಸಿದ್ದಲಿಂಗಯ್ಯ ಮುಂತಾದವರೊಡನೆ ಸೇರಿ ದಲಿತ ಸಂಘರ್ಷ ಸಮಿತಿಯನ್ನು ಕೋಲಾರದಲ್ಲಿ ಪ್ರಾರಂಭಿಸಲು ಪ್ರೇರೇಪಿಸಿತು. ನಂತರ ಸಮಿತಿಯ ಮೂಲಕ ಅನೇಕ ಹೋರಾಟಗಳನ್ನು ಕೈಗೆತ್ತಿಕೊಳ್ಳಲಾಯಿತು. ಮುನಿಸ್ವಾಮಿಯವರು ಅವುಗಳಲ್ಲಿ ತುಂಬು ಮನಸ್ಸಿನಿಂದ ಭಾಗವಹಿಸಿದರು.
1990ರ ದಶಕದಲ್ಲಿ ದಲಿತ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಇವರಿಗೆ ದಲಿತ ಸಂಘರ್ಷ ಸಮಿತಿಯ ರಾಜ್ಯ ನಾಯಕತ್ವವನ್ನು ವಹಿಸಿಕೊಳ್ಳುವ ಅವಕಾಶ ಸಿಕ್ಕಿತು. ಇವರ ನೇತೃತ್ವದಲ್ಲಿ ಹೆಂಡ ಬೇಡ ಭೂಮಿ ಬೇಕು, ಹೋಬಳಿಗೊಂದು ವಸತಿ ಶಾಲೆ, ಬಗರ್ ಹುಕುಂ ಸಾಗುವಳಿ ಮಂಜೂರು, ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬುವುದು, ವಿದ್ಯಾರ್ಥಿ ವೇತನ ಹೆಚ್ಚಳ ಮತ್ತು ದಲಿತರ ಮೇಲೆ ದೌರ್ಜನ್ಯಕ್ಕೆ ತಡೆ ಮುಂತಾಗಿ ಅನೇಕ ಚಳುವಳಿಗಳನ್ನು ಅವರು ಕೈಗೆತ್ತಿಕೊಂಡು ಯಶಸ್ವಿ ಹೋರಾಟಗಳನ್ನು ನಡೆಸಿದ್ದಾರೆ.
ದಲಿತರ ಸಂಘಟನೆ, ಅವರ ಬೌದ್ಧಿಕ ಬೆಳವಣಿಗೆಗಾಗಿ ಶಿಬಿರಗಳನ್ನು ನಡೆಸುವುದಕ್ಕೆ ಮುನಿಸ್ವಾಮಿ ಒತ್ತುಕೊಟ್ಟರು. 2022ರ ಡಿಸೆಂಬರ್ 06ರಂದು ಬೆಂಗಳೂರಿನಲ್ಲಿ ನಡೆದ ದಲಿತ ಐಕ್ಯತಾ ಸಮಾವೇಶದ ಯಶಸ್ಸಿನಲ್ಲಿಯೂ ಮುನಿಸ್ವಾಮಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಹೀಗೆ ದಲಿತ ಸಂಘಟನೆ, ಹೋರಾಟ ಮತ್ತು ಬೇಡಿಕೆಗಳನ್ನು ಸರ್ಕಾರವು ಒಪ್ಪುವಲ್ಲಿ ಮುನಿಸ್ವಾಮಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಜಿ ಮಹಾಂತೇಶ್
ಜಿ ಮಹಾಂತೇಶ್ ಒಬ್ಬ ಪ್ರಖ್ಯಾತ ತನಿಖಾ ವರದಿಗಾರರು. ಅಕ್ಟೋಬರ್ 2000ದಿಂದ ಅವರು ಜನವಾಹಿನಿ, ಕರುನಾಡ ಸಂಜೆ, ಸಂಯುಕ್ತ ಕರ್ನಾಟಕ, ಜನ ಸುದ್ದಿವಾಹಿನಿ, ಕನ್ನಡ ಪ್ರಭ ಮತ್ತು ದಿ ಸ್ಟೇಟ್ ಮುಂತಾದ ಅನೇಕ ಖ್ಯಾತ ಪತ್ರಿಕೆಗಳ ವರದಿಗಾರರಾಗಿ ಕೆಲಸ ಮಾಡಿದ್ದಾರೆ.
2020 ರಲ್ಲಿ ‘ದಿ ಫೈಲ್’ ಎಂಬ ಸ್ವತಂತ್ರ ಮಾಧ್ಯಮ ಪ್ರಾರಂಭಿಸಿರುತ್ತಾರೆ. ಅದರಲ್ಲಿ ಅವರು ಕೋವಿಡ್ ಸಮಯದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರ; ಅಪೆಕ್ಸ್ ಬ್ಯಾಂಕ್‌ನಲ್ಲಿ ನಡೆದಿರುವ ನಾನಾ ರೀತಿಯ ಅಕ್ರಮಗಳ ವರದಿ; ರಾಷ್ಟೋತ್ಥಾನ ಪರಿಷತ್‌ಗೆ ನಿಯಮ ಬಾಹಿರವಾಗಿ ಗೋಮಾಳ ಮಂಜೂರು ಮಾಡಿರುವ ಅಕ್ರಮದ ವರದಿ; ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ನಾರಾಯಣಪುರ ಎಡದಂಡೆ ಮತ್ತು ಬಲದಂಡೆ ನಾಲೆ ಆಧುನೀಕರಣ ಕಾಮಗಾರಿಯಲ್ಲಿ 425 ಕೋಟಿ ರೂಪಾಯಿಗೂ ಹೆಚ್ಚು ಅಕ್ರಮದ ಬಗ್ಗೆ ವರದಿ; 3,092 ಎಕರೆ ವಿಸ್ತೀರ್ಣದ ಅಮೃತ್ ಮಹಲ್ ಕಾವಲ್ ಡಿ ನೋಟಿಫಿಕೇಷನ್ ಮಾಡಿರುವ ಪ್ರಕರಣ ಕುರಿತು ದಾಖಲೆ ಸಹಿತ ವರದಿ; ಚಿತ್ರದುರ್ಗ ಮುರುಘಾ ಶರಣರ ಸೋದರನ ವಿರುದ್ಧ ಅತ್ಯಾಚಾರ ಆರೋಪ ಕುರಿತ ವರದಿ; ಶಿಕ್ಷಕರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತ ವರದಿಗಳನ್ನು ಪ್ರಕಟಿಸಿದ್ದಾರೆ.
ಅಂದಿನ ಮಂತ್ರಿ ನಾಗೇಶ್ ಮೇಲಿನ ಅವರ ವರದಿ ಮಂತ್ರಿಗಳ ರಾಜೀನಾಮೆಗೂ ಕಾರಣವಾಗಿರುತ್ತದೆ. ಅವರ ವರದಿಗಳು ಸರ್ಕಾರದಲ್ಲಿ ಮತ್ತು ಇತರೆ ಸಾರ್ವಜನಿಕ ಸಂಸ್ಥೆಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಜನರನ್ನು ಎಚ್ಚರಿಸುತ್ತಿವೆ. ಅಂತವುಗಳು ಮುಂದುವರಿಯದಂತೆ ತಡೆಯೊಡ್ಡಿವೆ. ಭ್ರಷ್ಟಾಚಾರಿಗಳು ಇಂತಹ ಅಕ್ರಮಗಳನ್ನು ಎಸಗುವ ಮೊದಲು ಮತ್ತೊಮ್ಮೆ ಯೋಚನೆ ಮಾಡುವಂತೆ ಮಾಡಿವೆ. ಮಾಧ್ಯಮಗಳು ತಮ್ಮ ಹಮ್ಮುಬಿಮ್ಮುಗಳನ್ನು ಮುಕ್ತವಾಗಿ ಪ್ರದರ್ಶಿಸುತ್ತಿರುವ ಈ ಕಾಲದಲ್ಲಿ ಯಾವ ಭಯಭೀತಿಗಳಿಲ್ಲದೆ ಸತ್ಯವನ್ನು ಎಲ್ಲರ ಮುಂದೆ ತೆರೆದಿಡುತ್ತಿರುವ ಮಹಾಂತೇಶ್ ನಿಜವಾಗಿಯೂ ಅಭಿನಂದನೀಯರು.

ಬೀಬಿ ಜಾನ್
ಬೀಬಿಜಾನ್ ಹಳೇಮನಿ ಅವರು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದವರು. 2018ರಲ್ಲಿ ಸಹಜಸಮೃದ್ಧಿ ಎಂಬ ಸಂಸ್ಥೆಯ ಸಲಹೆಯ ಮೇರೆಗೆ ಇತರೆ 14 ಮಂದಿ ಮಹಿಳೆಯರೊಂದಿಗೆ ಸೇರಿ ‘ಬೀಬಿಫಾತಿಮಾ ಸ್ವಸಹಾಯ ಸಂಘ’ ಸ್ಥಾಪಿಸಿದರು. ಪ್ರಾಕೃತಿಕ ಸಾಮಗ್ರಿಗಳಿಗೆ ಹೇಗೆ ಬೆಲೆ ತರಬಹುದು ಎಂಬುದನ್ನು ಕಲಿತ ಆ ಸಂಘ ಪ್ರಥಮವಾಗಿ ಸಾಬೂನುಗಳನ್ನು ತಯಾರಿಸಿ ಹಳ್ಳಿಗಳಲ್ಲಿ ಮಾರಾಟ ಮಾಡಿತು.
2020ರ ಕೋವಿಡ್ ಸಂದರ್ಭದಲ್ಲಿ ಅವರು ಮತ್ತು ಅವರ ಸಂಘ ಆರು ಹಳ್ಳಿಗಳಿಗೆ ಆಹಾರ ಧಾನ್ಯಗಳನ್ನು ಹಂಚಿತು. ಅಲ್ಲದೆ ಅವರು ಹಳ್ಳಿಗರಿಗೆ ಆಡು ಸಾಕಾಣೆ, ನಾಟಿ ಕೋಳಿ ಸಾಕಾಣೆ, ರೈತರಿಗೆ ಸಾವಯವ ಪದ್ಧತಿ ಬಗ್ಗೆ ತರಬೇತಿ ನೀಡಿದರು. ಅದೇ ವರ್ಷ ಅವರು ಒಂದು ಬೀಜಬ್ಯಾಂಕ್ ಸ್ಥಾಪನೆ ಮಾಡಿ, ನಾಲ್ಕು ತಾಲೂಕುಗಳಲ್ಲಿ ಸಾವಿರ ರೈತರಿಗೆ ಬೀಜಗಳನ್ನು ಹಂಚಿದ್ದಾರೆ.
2022 ರಲ್ಲಿ ಒಂದು ಸಿರಿಧಾನ್ಯ ಬ್ಯಾಂಕ್ ಸ್ಥಾಪಿಸಿ ಸಿರಿದಾನ್ಯಗಳನ್ನು ಬೆಳೆಯುವಂತೆ ರೈತರಿಗೆ ಪ್ರೋತ್ಸಾಹಿಸಿದರು. ಬೆಳೆದ ಸಿರಿಧಾನ್ಯಗಳನ್ನು ಉತ್ತಮ ಬೆಲೆಗೆ ಅವರಿಂದ ಖರೀದಿಸಿದರು. ಈ ಎಲ್ಲ ಚಟುವಟಿಕೆಗಳನ್ನೂ ಮಹಿಳೆಯರೆ ನಡೆಸುತ್ತಿದ್ದು ಇಂದು ಈ ಗುಂಪು 10 ಜನ ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಂಡಿದೆ.
2022ರಲ್ಲಿ ಬೀಬಿಜಾನ್ ಅವರು ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ನಂತರ ‘ದೇವಧಾನ್ಯ’ ಎಂಬ ರೈತ ಉತ್ಪಾದನಾಕಾರರ ಕಂಪನಿಯ ನಿರ್ದೇಶಕರೂ ಆದರು. ಅವರ ಸಾಧನೆಗೆಗಾಗಿ ಅವರನ್ನು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಿಂದ ಚೇಂಜ್ ಮೇಕರ್ ಎಂದು ಸನ್ಮಾನಿಸಿದೆ. 2003ರಲ್ಲಿ ದೆಹಲಿಯ “ಮಿಲಿಯನ್ ಮಿಲ್ಲೆಟ್” ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ.

ಡಾ. ನಾಗೇಶ್ ಕುಂದಾಪುರ
ಡಾ. ನಾಗೇಶ್ ಅವರು ಉಡುಪಿ ಜಿಲ್ಲೆಯ ಹಂಗಾರಕಟ್ಟೆಯವರು. ವೈದ್ಯರಾಗಿರುವ ಇವರು ಕಳೆದ 25 ವರ್ಷಗಳಿಂದ ಉಡುಪಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ನಾನಾ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕುಂದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬಡ ಜನರಿಗೆ ಸರಕಾರಿ ಆಸ್ಪತ್ರೆಗಳ ಸೌಲಭ್ಯದ ಪ್ರಾಮುಖ್ಯತೆಯನ್ನು ಮನಗಂಡಿರುವ ನಾಗೇಶ್, ತಾವು ಸೇವೆ ಸಲ್ಲಿಸುವ ಕಡೆಗಳಲ್ಲೆಲ್ಲಾ ಬಡವರ ಶುಶ್ರೂಷೆಗೆ ತಮ್ಮನ್ನು ಮುಡಿಪಾಗಿಟ್ಟಿರುವರು. ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ ಅವರ ಸೇವೆಯ ಪೂರ್ಣ ದರ್ಶನವು ಬಡ ರೋಗಿಗಳಿಗೆ ಆಯಿತು.
ಹಗಲಿರುಳೆನ್ನದೆ ರೋಗಿಗಳ ಸೇವೆಯಲ್ಲಿ ದುಡಿದ ನಾಗೇಶ್ ಜಾತಿ-ಮತ, ಬಡವ-ಸಿರಿವಂತರೆಂಬ ಭೇದ ಭಾವವಿಲ್ಲದೆ ಸಾಂಕ್ರಾಮಿಕಕ್ಕೆ ತುತ್ತಾದವರ ಚಿಕಿತ್ಸೆಗೆ ಅವಶ್ಯಕವಾದ ಜೀವ ರಕ್ಷಕ ಔಷಧ, ಶುಶ್ರೂಷೆ ನೀಡಿ ನೂರಾರು ಜೀವಗಳನ್ನು ಉಳಿಸಿದರು.
ಬಡವರನ್ನು ಘನತೆಗಳಿಂದ ನಡೆಸಿಕೊಂಡು, ಅವರ ಹಕ್ಕಾಗಿರುವ ಗುಣಮಟ್ಟದ ಸಾರ್ವಜನಿಕ ಚಿಕಿತ್ಸೆ ನೀಡಲು ಶಕ್ತಿಮೀರಿ ಶ್ರಮಿಸುತ್ತಿರುವ ಜನಾನುರಾಗಿ ವೈದ್ಯರಾಗಿದ್ದಾರೆ. ಡಾ. ನಾಗೇಶ್ ಅವರ ಸೇವೆ ಮೆಚ್ಚಿ ಹಲವು ಸ್ಥಳಿಯ ಸಂಘ ಸಂಸ್ಥೆಗಳು ಅವರಿಗೆ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.

ಅಕ್ಷತಾ ಕೆ ಸಿ
ಕೆ ಸಿ ಅಕ್ಷತಾ ಅವರು ಹಾವೇರಿಯ ರಾಣೆಬೆನ್ನೂರಿನವರು. ಅವರು ಲಿಂಗತ್ವ ಅಲ್ಪಸಂಖ್ಯಾತರಾಗಿದ್ದು ಚಿಕ್ಕ ವಯಸ್ಸಿನಿಂದಲೇ ತಿರಸ್ಕಾರ, ಅಪಮಾನಗಳನ್ನು ಅನುಭವಿಸಿರುತ್ತಾರೆ. ದೃಢಸಂಕಲ್ಪ ಮತ್ತು ಆತ್ಮವಿಶ್ವಾಸದಿಂದ ಅವರು ಇದೆಲ್ಲದರಿಂದ ಮೇಲೆದ್ದು ಪದವಿ ಪಡೆದಿರುತ್ತಾರೆ.
ಅಕ್ಷತಾ ಅವರು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಚಿಂತನೆಗಳಲ್ಲಿ ಸಂಪೂರ್ಣವಾಗಿ ನಂಬಿಕೆ ಇಟ್ಟವರಾಗಿದ್ದು, ತಮ್ಮಂತ ಹಾಗೂ ಎಲ್ಲ ತರದ ಶೋಷಣೆಗಳಿಂದ ನೊಂದವರ ಪರವಾಗಿ ಹೋರಾಡಲು, ಅವರಿಗೆ ಬೆಂಬಲ ನೀಡಲು ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.
ಸುತ್ತಮುತ್ತಲ ಹಳ್ಳಿ, ಪಟ್ಟಣಗಳಲ್ಲಿ ಶೋಷಣೆ ಮತ್ತು ತಾರತಮ್ಯದ ವಿರುದ್ಧ ಯಾವುದೇ ರೀತಿಯ ಹೋರಾಟವಿರಲಿ, ಪ್ರತಿಭಟನೆ ಇರಲಿ ಅದರ ಮುಂಚೂಣಿಯಲ್ಲಿ ಇರುತ್ತಾರೆ. ಅವರ ಉತ್ತಮ ಭಾಷಣಕಾರರಾಗಿದ್ದು, ನೂರಾರು ಸಭೆ ಸಮಾರಂಭಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರ ಸಾಧನೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು | ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಶಿಕ್ಷಕ ಅಮಾನತು
ಏಪ್ರಿಲ್ 14ಕ್ಕೆ ಪ್ರಶಸ್ತಿ ಪ್ರದಾನ
ಬೆಂಗಳೂರಿನಲ್ಲಿರುವ ಸ್ಫೂರ್ತಿಧಾಮದಲ್ಲಿ ಏಪ್ರಿಲ್ 14ರ ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಲೋಕಸಭೆ ಮಾಜಿ ಸದಸ್ಯ ಪಿ ಕೋದಂಡರಾಮಯ್ಯ ಪ್ರಶಸ್ತಿ ಪ್ರದಾನ ಮಾಡುವರು.
ಪ್ರಶಸ್ತಿಗಳ ಪರಿಚಯ
ಕಳೆದ ಹದಿನೈದು ವರ್ಷಗಳಿಂದ ಅಂಬೇಡ್ಕರ್ ಜಯಂತಿಯನ್ನು ಅಂಬೇಡ್ಕರ್ ಹಬ್ಬವಾಗಿ ಆಚರಿಸಿಕೊಂಡು ಬರುತ್ತಿರುವ ‘ಸ್ಫೂರ್ತಿಧಾಮ’, ತಳಸ್ತರದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ದುಡಿದವರನ್ನು ಗುರುತಿಸುವ, ಗೌರವಿಸುವ ಸಲುವಾಗಿ ‘ಬೋಧಿವೃಕ್ಷ’ ಹೆಸರಿನ ಒಂದು ರಾಷ್ಟ್ರ ಪ್ರಶಸ್ತಿ ಮತ್ತು ‘ಬೋಧಿವರ್ಧನ’ ಹೆಸರಿನ ಐದು ರಾಜ್ಯ ಪ್ರಶಸ್ತಿಗಳನ್ನು ನೀಡುತ್ತಿದೆ.
ತೀರಾ ನಿಕೃಷ್ಟರೆಂದು ಪರಿಗಣಿಸಲ್ಪಡುವ ತಳಸಮುದಾಯದವರ ಹಿತಕ್ಕೆ ತಮ್ಮನ್ನು ತೆತ್ತುಕೊಂಡು, ಅವರ ಬದುಕಿನಲ್ಲಿ ಗುಣಾತ್ಮಕವಾದ ಬದಲಾವಣೆಯನ್ನು ಉಂಟು ಮಾಡಿರುವವರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.