ಈ ಬಾರಿಯ ‘ಮೈಸೂರು ದಸರಾ’ ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಭಾನು ಮುಸ್ತಾಕ್ ಅವರಿಗೆ ಗೌರವದಿಂದ ಜಿಲ್ಲಾಡಳಿತ ಆಹ್ವಾನ ನೀಡಲಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, “ಕರ್ನಾಟಕದ ಓರ್ವ ಮಹಿಳೆಗೆ ಬೂಕರ್ ಪ್ರಶಸ್ತಿ ಸಿಕ್ಕಿರುವುದು ಬಹಳ ಸಂತೋಷದ ವಿಷಯ. ಅವರು ಹೋರಾಟದ ಹಿನ್ನೆಲೆಯಿಂದ ಬಂದವರು. ಬೂಕರ್ ಪ್ರಶಸ್ತಿ ಪಡೆದವರೇ ಈ ಬಾರಿ ದಸರಾ ಉದ್ಘಾಟನೆ ಮಾಡಲಿದ್ದಾರೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬಾನು ಮುಷ್ತಾಕ್ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ
ಈ ಬಾರಿ ಸೆಪ್ಟೆಂಬರ್ 22ರಿಂದ ದಸರಾ ಆರಂಭವಾಗಲಿದ್ದು, 11 ದಿನ ಉತ್ಸವ ನಡೆಯಲಿದೆ. ಬಾನು ಮುಷ್ತಾಕ್ ಅವರನ್ನು ಗೌರವದಿಂದ ಜಿಲ್ಲಾಡಳಿತ ಆಹ್ವಾನಿಸಲಿದೆ ಎಂದು ಸಿಎಂ ತಿಳಿಸಿದ್ದಾರೆ.
ಮೈಸೂರು ದಸರಾ ವೇಳೆ ವೈಮಾನಿಕ ಪ್ರದರ್ಶನಕ್ಕೆ ಅನುಮತಿ ದೊರೆತಿದ್ದು, ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ದಸರಾ ವೀಕ್ಷಣೆಗೆ ಆಗಮಿಸಬೇಕೆಂದು ಈಗಾಗಲೇ ಪತ್ರ ಬರೆದಿದ್ದೇನೆ ಎಂದೂ ಈ ವೇಳೆ ಹೇಳಿದರು.
ಕನ್ನಡದ ಪ್ರಮುಖ ಲೇಖಕಿ ಎಸ್.ಕೆ. ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ (ಎದೆಯ ಹಣತೆ) ಕೃತಿಗೆ ವಿಶ್ವದ ಮೇರು ಸಾಹಿತ್ಯ ಪ್ರಶಸ್ತಿ 2025ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ದೊರೆತಿದೆ. ಬಾನು ಅವರ ಎದೆಯ ಹಣತೆ ಕೃತಿಯನ್ನು ಲೇಖಕಿ ದೀಪಾ ಭಸ್ತಿ ಅವರು ‘ಹಾರ್ಟ್ ಲ್ಯಾಂಪ್’ ಹೆಸರಿನಲ್ಲಿ ಅನುವಾದಿಸಿದ್ದಾರೆ.
