ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿ ಹಾಗೂ ನಗರವನ್ನು ಜಾಗತಿಕ ಆಕರ್ಷಣೆಯ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ‘ಬ್ರ್ಯಾಂಡ್ ಬೆಂಗಳೂರು ಅಭಿಯಾನ’ ಹಮ್ಮಿಕೊಂಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶನಿವಾರ ‘ಬ್ರ್ಯಾಂಡ್ ಬೆಂಗಳೂರು’ ಲೋಗೋವನ್ನು ಬಿಡುಗಡೆ ಮಾಡಿದೆ.
ಎಂಟು ನಾನಾ ಆಯಾಮಗಳಲ್ಲಿ ಬೆಂಗಳೂರನ್ನು ಜಾಗತಿಕ ಮನ್ನಣೆಯ ಕೇಂದ್ರವನ್ನಾಗಿಸುವ ಉದ್ದೇಶದಿಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ‘ಬ್ರ್ಯಾಂಡ್ ಬೆಂಗಳೂರು ಸಮ್ಮೇಳನ’ ವನ್ನು ಅ.9 ರಂದು (ಸೋಮವಾರ) ಬೆಳಿಗ್ಗೆ 10 ಗಂಟೆಗೆ ಜ್ಞಾನ ಜ್ಯೋತಿ ಸಭಾಂಗಣ (ಸೆಂಟ್ರಲ್ ಕಾಲೇಜು ಆವರಣ)ದಲ್ಲಿ ಏರ್ಪಡಿಸಲಾಗಿದೆ.
ಪ್ರವಾಸೋದ್ಯಮ, ಆರೋಗ್ಯ, ಹೂಡಿಕೆ, ಶಿಕ್ಷಣ ಮತ್ತು ಸಂಶೋಧನೆ, ಉದ್ಯಮ ಶೀಲತೆ, ಮೂಲಭೂತ ಸೌಕರ್ಯ, ನವನವೀನ ಆವಿಷ್ಕಾರಗಳು, ಉದ್ಯೋಗ ಸೃಷ್ಠಿ, ಆರ್ಥಿಕ ಕ್ರೋಢಿಕರಣ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಈ ಸಮ್ಮೇಳನಕ್ಕೆ ಆಗಮಿಸುವ ಗಣ್ಯರಿಂದ ಸಲಹೆ ನಿರೀಕ್ಷಿಸಲಾಗಿದೆ.
ಬ್ರ್ಯಾಂಡ್ ಬೆಂಗಳೂರು ಸಮ್ಮೇಳನದಲ್ಲಿ ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್/ರಾಜ್ಯಸಭಾ ಸದಸ್ಯರು, ಸರ್ಕಾರದ ನಾನಾ ಇಲಾಖೆಯ ಹಿರಿಯ ಅಧಿಕಾರಿಗಳು, ನಿವೃತ್ತ ಹಿರಿಯ ಅಧಿಕಾರಿಗಳು, 8 ವಿಚಾರಗಳ ತಜ್ಞರು, ಗಣ್ಯ ವ್ಯಕ್ತಿಗಳು ಭಾಗವಹಿಸಿ, ಹೊಸ ಬೆಂಗಳೂರಿನ ನೀಲನಕ್ಷೆಯನ್ನು ತಯಾರಿಸಲು ಚಿಂತನೆ ನಡೆಸುತ್ತಾರೆ ಎನ್ನಲಾಗಿದೆ.
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯು ಪರಿಣಾಮಕಾರಿ ನಗರ ಯೋಜನೆ, ಸುಸ್ಥಿರ ಒಳಚರಂಡಿ ವ್ಯವಸ್ಥೆಗಳು, ದಕ್ಷ ಸಾರಿಗೆ ವ್ಯವಸ್ಥೆ ಮತ್ತು ಸ್ಮಾರ್ಟ್ ಟ್ರಾಫಿಕ್ ನಿರ್ವಹಣೆ, ಪಾದಚಾರಿ ಸ್ನೇಹಿ ರಸ್ತೆಗಳು, ನಾಗರಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಆದ್ಯತೆ ನೀಡಲಾಗುತ್ತದೆ. ಮಾಲಿನ್ಯ ರಹಿತ ಮತ್ತು ಹಸಿರು ನಗರವನ್ನಾಗಿ ಮಾಡಲು ಉತ್ತಮ ಯೋಜಿತ ಪಾದಚಾರಿ ಮಾರ್ಗಗಳು, ಮೀಸಲಾದ ಸೈಕ್ಲಿಂಗ್ ಮಾರ್ಗಗಳು, ಹಸಿರು ಸ್ಥಳಗಳು, ಸಕ್ರಿಯ ಸಾರಿಗೆಯನ್ನು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರಚಿಸಲು ಬ್ಯಾಂಡ್ ಬೆಂಗಳೂರು ಬದ್ಧವಾಗಿದೆ.
ಬ್ರಾಂಡ್ ಬೆಂಗಳೂರು ಪರಿಕಲ್ಪನೆಯ ಅಡಿಯಲ್ಲಿ ಎಂಟು ವಿಷಯಗಳು
- ಸಂಚಾರಯುಕ್ತ ಬೆಂಗಳೂರು
- ಹಸಿರು ಬೆಂಗಳೂರು
- ಸ್ವಚ್ಛ ಬೆಂಗಳೂರು
- ಜನಹಿತ ಬೆಂಗಳೂರು
- ಆರೋಗ್ಯಕರ ಬೆಂಗಳೂರು
- ಟೆಕ್ ಬೆಂಗಳೂರು
- ಜಲಸುರಕ್ಷಾ ಬೆಂಗಳೂರು
- ಶೈಕ್ಷಣಿಕ ಬೆಂಗಳೂರು