ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ನಲ್ಲಿ ಉದ್ಯೋಗ ಸೃಷ್ಟಿಯ ಕುರಿತು ಯಾವುದೇ ಯೋಜನೆಯಿಲ್ಲ. ಇದು ರಾಜ್ಯದ ಯುವಜನರಿಗೆ ತೀವ್ರ ನಿರಾಶೆಯನ್ನುಂಟು ಮಾಡಿದೆ. ದುಡಿಯಲು ತುದಿಗಾಲಲ್ಲಿ ನಿಂತಿರುವ ಯುವಜನತೆಗೆ ಉದ್ಯೋಗ ಖಾತ್ರಿಪಡಿಸದ ಈ ಬಜೆಟ್ಅನ್ನು ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಖಂಡಿಸುತ್ತದೆ ಎಂದು ಸಂಘಟನೆಯ ರಾಜ್ಯಾದ್ಯಂತ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ರಾಜ್ಯದಲ್ಲಿ ಎರಡೂವರೆ ಲಕ್ಷ ಹುದ್ದೆಗಳು ಖಾಲಿಯಿವೆ. ಅವುಗಳ ಭರ್ತಿ ಮಾಡಲು ಹಾಗೂ ಆದ್ಯತಾ ಕ್ಷೇತ್ರವಾರು ಉದ್ಯೋಗ ಸೃಷ್ಟಿ ಮಾಡುವ ದಿಸೆಯಲ್ಲಿ ಬಜೆಟ್ನಲ್ಲಿ ಯಾವುದೇ ಉಲ್ಲೇಖವಿಲ್ಲ. ಇದು ಯುವಜನರ ಕುರಿತು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ” ಎಂದು ಕಿಡಿಕಾರಿದ್ದಾರೆ.
“ಯುವನಿಧಿ ಯೋಜನೆ ಜಾರಿಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೂ, ಕೇವಲ ಹಿಂದಿನ ವರ್ಷ ಉತ್ತೀರ್ಣರಾದವರಿಗೆ ಈ ಯೋಜನೆಯನ್ನು ಅನ್ವಯಿಸಿರುವುದರಿಂದ, ಪದವಿ ಮುಗಿಸಿ ಐದು-ಹತ್ತು ವರ್ಷಗಳಿಂದ ಕೆಲಸ ಸಿಗದ ನಿರುದ್ಯೋಗಿಗಳಿಗೆ ಯಾವುದೇ ಆಸರೆ ಸಿಗುವುದಿಲ್ಲ. ಸರ್ಕಾರ ಇದನ್ನು ಪರಿಷ್ಕರಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ರಾಜ್ಯದಲ್ಲಿ ಶಾಲೆ, ಕಾಲೇಜು ಹಾಗೂ ವಿವಿಧ ಇಲಾಖೆಗಳಲ್ಲಿ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು, ಗುತ್ತಿಗೆ, ಹೊರಗುತ್ತಿಗೆ ಇತ್ಯಾದಿ ಹೆಸರಿನಲ್ಲಿ ನೌಕರರು ಸೇವೆಸಲ್ಲಿಸುತ್ತಿದ್ದು, ಅವರ ಖಾಯಮಾತಿಗೆ ಯಾವುದೇ ಕ್ರಮವನ್ನು ಕೈಗೊಳ್ಳದ ನಿರಾಶಾದಾಯಕ ಬಜೆಟ್” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ರದ್ದಗೊಳಿಸಿರುವುದು ಮತ್ತು ಕೇಂದ್ರ ಸರಕಾರ ರದ್ದುಪಡಿಸಿದ್ದ ಎಪಿಎಂಸಿ ಕಾಯ್ದೆಯನ್ನು ವಾಪಸ್ ಪಡೆದ ಕ್ರಮಗಳು ಸ್ವಾಗತಾರ್ಹವಾಗಿದೆ. ಸರ್ಕಾರ ತಾನು ಘೋಷಿಸಿದ ಐದು ಗ್ಯಾರಂಟಿಗಳಿಗೆ ಹಣ ಹೊಂದಿಸಲು ಮತ್ತು ರಾಜಸ್ವ ಸಂಗ್ರಹದಲ್ಲಿ ಹೆಚ್ಚಳ ಸಾಧಿಸುವ ತರಾತುರಿಯಲ್ಲಿ ಸ್ಟ್ಯಾಂಪಿಗ್, ದ್ವಿಚಕ್ರ ಮತ್ತು ಇತರ ವಾಣಿಜ್ಯ ವಾಹನಗಳ ಹಾಗೂ ಅಬಕಾರಿ ಮೇಲಿನ ತೆರಿಗೆ ಏರಿಕೆ ಮಾಡಿರುವುದು ಒಂದು ಕೈಯಲ್ಲಿ ನೀಡಿ ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ಕ್ರಮವಾಗಿದೆ” ಎಂದು ದೂರಿದ್ದಾರೆ.
“ಉದ್ಯೋಗಕ್ಕಾಗಿ ಹಾತೊರೆಯುತ್ತಿರುವ ರಾಜ್ಯದ ಯುವಜನರಿಗೆ ತೀವ್ರ ಹತಾಸೆಯನ್ನುಂಟು ಮಾಡಿದ ಈ ಬಜೆಟ್ ಅನ್ನು ಭಾರತ ಡಿವೈಎಫ್ಐ ತೀವ್ರವಾಗಿ ವಿರೋಧಿಸುತ್ತದೆ. ಹಾಗೂ ರಾಜ್ಯ ಸರಕಾರ ಕೂಡಲೇ ಖಾಲಿಯಿರುವ ಹುದ್ದೆಗಳನ್ನು ಭರ್ತಿಗೊಳಿಸಲು ಹಾಗೂ ಕೃಷಿ ಕ್ಷೇತ್ರ ಸೇರಿದಂತೆ ಇತರೆ ಆದ್ಯತಾ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತದೆ” ಎಂದು ಅವರು ಹೇಳಿದ್ದಾರೆ.