ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್ ಕಳ್ಳತನ ಮಾಡಿರುವ ದುಷ್ಕರ್ಮಿಗಳು ಬೈಕನ್ನು ತೋಟದೊಳಗಿರುವ ಬಾವಿಯೊಳಗೆ ಹಾಕಿ ಪರಾರಿಯಾಗಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಈಶಾ ಫೌಂಡೇಶನ್ ಮಾರ್ಗದಲ್ಲಿರುವ ಹರಿಹರಪುರ ಗ್ರಾಮದ ರೈತ ಪಾಪಣ್ಣ ಎಂಬುವರಿಗೆ ಸೇರಿದ ತೋಟದಲ್ಲಿರುವ ಬಾವಿಯಲ್ಲಿ ಬುಲೆಟ್ ಬೈಕ್ ಇರುವುದು ಗುರುವಾರ ಪತ್ತೆಯಾಗಿದ್ದು, ನಾನಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರೈತ ಪಾಪಣ್ಣ ಅವರ ಪಕ್ಕದ ಜಮೀನಿನ ರೈತರು ಗುರುವಾರ ಬೆಳಗ್ಗೆ ಬಾವಿಯೊಳಗಿನ ನೀರನ್ನು ತೋಟಕ್ಕೆ ಹಾಯಿಸಲು ಮುಂದಾಗಿದ್ದು, ಈ ವೇಳೆ ಬಾವಿಯೊಳಗೆ ಬೈಕ್ ಇರುವುದು ಪತ್ತೆಯಾಗಿದೆ.
ಆಶ್ಚರ್ಯಗೊಂಡ ರೈತ ಬಾವಿಯಲ್ಲಿರುವ ನೀರನ್ನು ಖಾಲಿ ಮಾಡಿ ಬೈಕ್ ಮೇಲೆತ್ತಲು ಮುಂದಾಗಿದ್ದಾರೆ. ಅದು ಸಾಧ್ಯವಾಗದ ಹಿನ್ನೆಲೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಬೈಕ್ ಮೇಲೆತ್ತಲು ಹರಸಾಹಸಪಟ್ಟಿದ್ದು, ಬೈಕ್ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರೈತ ಪಾಪಣ್ಣ, ಈ ಬಾವಿಯಲ್ಲಿನ ನೀರನ್ನ ಕೃಷಿಗೆ ಬಳಸುತ್ತಿರಲಿಲ್ಲ. ಪಕ್ಕದ ಜಮೀನಿನವರ ಬಾವಿ ನೀರನ್ನು ಹಾಯಿಸಿಕೊಳ್ಳುತ್ತೇವೆ ಎಂದು ಕೇಳಿದ್ದರು. ಅವರು ಮೋಟಾರ್ ಅಳವಡಿಸುವಾಗ ಬೈಕ್ ಇರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ದುರಹಂಕಾರಿ ದೊಡ್ಡಣ್ಣನ ಎದುರು ಮಂಡಿಯೂರಿದ ಮೋದಿ
ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮಾಂತರ ಠಾಣೆ ಎಸ್ಐ, ಹರಿಹರಪುರ ಗ್ರಾಮದ ತೋಟದಲ್ಲಿರುವ ಬಾವಿಯಲ್ಲಿ ಬುಲೆಟ್ ಪತ್ತೆಯಾಗಿದೆ. ಬುಲೆಟ್ ಮುಷ್ಟೂರು ಗ್ರಾಮದ ಕಿರಣ್ ಕುಮಾರ್ ರೆಡ್ಡಿ ಎಂಬುವವರಿಗೆ ಸೇರಿದ್ದು, ಅವರ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಯಾರೋ ದುಷ್ಕರ್ಮಿಗಳು ಕಳ್ಳತನ ಮಾಡಿ ಬಾವಿಗೆ ಎಸೆದಿದ್ದಾರೆ. ಆರೋಪಿಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.