ಲೋಕಸಭಾ ಚುನಾವಣೆಯಲ್ಲಿ ಬೈಂದೂರು ಮತದಾರರು ನನ್ನ ಕೈ ಬಲಪಡಿಸಿದರೆ, ಸಮಾಜದ ಎಲ್ಲ ಧರ್ಮ, ವರ್ಗದವರ ಹಿತ ಕಾಪಾಡುವ ಜತೆಗೆ ನೈತಿಕ ನ್ಯಾಯ ಒದಗಿಸಲು ಶ್ರಮಿಸುತ್ತೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಭರವಸೆ ನೀಡಿದರು.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹಟ್ಟಿಯಂಗಡಿ ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಪರ ಮತಯಾಚನೆ ಹಾಗೂ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ’ದಲ್ಲಿ ಪಾಲ್ಗೊಂಡು ಮಾತನಾಡಿದರು.
“ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯ ಯಜಮಾನಿಗೆ ಮಾಸಿಕ ₹2,000 ಆರ್ಥಿಕ ಭತ್ಯೆ, ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ ಉಚಿತ ಅಕ್ಕಿ, ಪದವೀಧರರಿಗೆ ಮತ್ತು ಡಿಪ್ಲೊಮಾದಾರರರಿಗೆ ಪ್ರತಿ ತಿಂಗಳು ಕ್ರಮವಾಗಿ ₹3,000 ಮತ್ತು ₹1,500 ಭತ್ಯೆ, ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಕಾಂಗ್ರೆಸ್ ಸರ್ಕಾರ ಅವಕಾಶ ಕಲ್ಪಿಸಿದೆ” ಎಂದರು.
“ಈ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರು ಹತ್ತು ಹಲವು ಕಾರ್ಯಕ್ರಮಗಳನ್ನು ನೀಡಿದ್ದರು. ಅದೇ ರೀತಿ, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರು ಮಾಡದೆ ಹೋದ ಅನೇಕ ಕಾರ್ಯಗಳನ್ನು ಮುಂದಿನ ನನ್ನ ರಾಜಕೀಯ ಪರ್ವದಲ್ಲಿ ಮಾಡಲು ಉತ್ಸುಕಳಾಗಿದ್ದೇನೆ” ಎಂದರು.
ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಮಾತನಾಡಿ, “ಬಿಜೆಪಿಯವರು ಈ ಹಿಂದೆ ಕೀಳುಮಟ್ಟದ ಆಪಾದನೆ ಮಾಡಿ ನನ್ನ ಸೋಲಿಗೆ ಕಾರಣರಾದರು. 2014ರಲ್ಲಿ ₹15 ಲಕ್ಷ ಹಣವನ್ನು ಬಡವರ ಖಾತೆಗೆ ಜಮಾ ಮಾಡುವುದಾಗಿ ಸುಳ್ಳು ಭರವಸೆ ನೀಡಿದ ಬಿಜೆಪಿಯವರು ಕೇಂದ್ರದಲ್ಲಿ ಅಧಿಕಾರ ಹಿಡಿದರು. ಆದರೆ, ಈ ಕಹಿ ಸತ್ಯ ಜನರಿಗೆ ತಡವಾಗಿ ಮನವರಿಕೆಯಾಯಿತು. ಇದನ್ನು ಮರೆಮಾಚಲು ಯಶಸ್ವಿಯಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಮತದಾರರು ಇದಕ್ಕೆ ಕಿವಿಕೊಡಬಾರದು” ಎಂದರು.
“ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ, ಜನಸಾಮಾನ್ಯರು ಉಸಿರಾಡಬಹುದು. ಇದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಮತ ನೀಡಿ ಆಶೀರ್ವದಿಸಬೇಕು” ಎಂದು ಕೋರಿದರು.
ಮಾಜಿ ಶಾಸಕ ಬಿ ಎಂ ಸುಕುಮಾರ್ ಶೆಟ್ಟಿ ಮಾತನಾಡಿ, “ದೇಶದ ಜನರು ಬಹಳ ಹುರುಪಿನಿಂದ ಬದಲಾವಣೆ ಎದುರು ನೋಡುತ್ತಿದ್ದಾರೆ. ಈ ಹಿಂದೆ ಬೈಂದೂರು ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೆ. ಇಲ್ಲಿ ಜನಸಮಾನ್ಯರು ನನ್ನನ್ನು ಸಂಪೂರ್ಣವಾಗಿ ನಂಬಿದ್ದರು. ಆದರೆ, ಬಿಜೆಪಿಯವರು ನನಗೆ ಅನ್ಯಾಯ ಮಾಡಿದ್ದರು. ಮುಂದಿನ ದಿನಗಳಲ್ಲಿ ಅದು ಆಗಕೂಡದು. ಆದ್ದರಿಂದ, ಇಲ್ಲಿ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರನ್ನು ಸೋಲಿಸಿ, ಕ್ಷೇತ್ರಕ್ಕೆ ನ್ಯಾಯ ಒದಗಿಸಬೇಕಿದೆ” ಎಂದರು.
“ದೇಶದಲ್ಲಿ ಬಿಜೆಪಿ ಡೂಪ್ಲಿಕೇಟ್ ಪಕ್ಷವಾಗಿದೆ. ಆದ್ದರಿಂದ, ಇಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಹೋದ ಎಲ್ಲ ಕಾರ್ಯಕರ್ತರನ್ನು ಮರಳಿ ಕಾಂಗ್ರೆಸ್‌ಗೆ ಕರೆತರುತ್ತೇನೆ. ಪ್ರಸ್ತುತ ನನ್ನನ್ನು ನಾನು ಕಾಂಗ್ರೆಸ್‌ಗೆ ಸಂಪೂರ್ಣವಾಗಿ ತ್ಯಾಗ ಮಾಡಿಕೊಂಡಿದ್ದೇನೆ. ಅದೇ ರೀತಿ, ನೀವೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಮತ ನೀಡುವ ಮೂಲಕ ಮತ ತ್ಯಾಗ ಮಾಡಲು ಮುಂದಾಗಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಜನಸಾಮಾನ್ಯರ ತಲೆಯ ಮೇಲೆ ಬಿಜೆಪಿ ‘ಚೊಂಬು’ ಹೊರಿಸಲಿದೆ. ಇದಕ್ಕೆ ಮತದಾರರು ಆಸ್ಪದ ಕೊಡಕೂಡದು” ಎಂದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ₹400 ಕೋಟಿ ನಕಲಿ ನೋಟು ಹಂಚಿಕೆಗೆ ಸಕಲ ತಯಾರಿ: ಪಕ್ಷೇತರ ಅಭ್ಯರ್ಥಿ ಆರೋಪ
ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ನಟ ಶಿವರಾಜಕುಮಾರ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕೆ ಶೆಟ್ಟಿ, ಪ್ರಮುಖರಾದ ಆನಂದ ಬಿಲ್ಲವ, ಗೋವಿಂದ ರಾಜ್ ಶೆಟ್ಟಿ, ಚಂದ್ರ ದೇವಾಡಿಗ, ಬಿ ಆರ್ ರಾಜು, ಉದಯ್ ಕುಮಾರ್ ಶೆಟ್ಟಿ, ಭುಜಂಗ ಶೆಟ್ಟಿ, ಶ್ರೀಕಾಂತ್ ಪೂಜಾರಿ, ಪ್ರಶಾಂತ್, ತಲ್ಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಮತಿ ಹೆಗಡೆ ಸೇರಿದಂತೆ ಕಾರ್ಯಕರ್ತರು ಇದ್ದರು.
