ಈ ದಿನ ಸಂಪಾದಕೀಯ | ಮೋದಿ ಇದ್ದಾರೆ, ಆದರೆ ಮೋದಿ ಅಲೆ ಇಲ್ಲ

Date:

ಹತ್ತು ವರ್ಷಗಳ ಅಪೂರ್ವ ಅವಕಾಶವನ್ನು ಮೋದಿ ಮೆರೆದಾಟಕ್ಕೆ ಮೀಸಲಿಡಲಾಯಿತು. ಮೋದಿ ಎಂಬ ಬಲೂನಿಗೆ ಗಾಳಿ ತುಂಬಿ, ಪ್ರಚಾರದಲ್ಲಿ, ಪ್ರಣಾಳಿಕೆಯಲ್ಲಿ, ಗುಹೆಯಲ್ಲಿ, ಗ್ಯಾರಂಟಿಯಲ್ಲಿ ಮೋದಿ ಮೆರವಣಿಗೆ ಮಾಡಲಾಯಿತು. ಈಗ 2047ರ ಅಮೃತ ಕಾಲದ ಕತೆ ಹೇಳುತ್ತಿದ್ದಾರೆ. ಕೊಟ್ಟ ಕುದುರೆಯನೇರದ ಈ ಶೂರನಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಡುವುದು, ದೇಶದ ಒಳಿತಿನ ದೃಷ್ಟಿಯಿಂದ ಒಳ್ಳೆಯದಲ್ಲ.

ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿಯವರು ದೇಶದ ಜನರ ಧ್ವನಿಯಾದ ಸುದ್ದಿ ಮಾಧ್ಯಮಗಳನ್ನು ಖರೀದಿಸಿ, ಬಿಜೆಪಿಯ ಆಡಳಿತವನ್ನು ಕೃಷ್ಣದೇವರಾಯನ ಕಾಲದ ಸುವರ್ಣಯುಗ ಎಂದು ಬಣ್ಣಿಸುವಂತೆ ನೋಡಿಕೊಂಡಿದ್ದರು. ಅದರಲ್ಲೂ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸುವ ದೃಶ್ಯ ಮಾಧ್ಯಮಗಳು, ಮೋದಿ ಭಜನೆಯಲ್ಲಿ ನಿರತವಾಗಿದ್ದವು.

ಇವುಗಳ ಜೊತೆಗೆ ಹೊಸಗಾಲದ ಸೋಷಿಯಲ್‌ ಮೀಡಿಯಾಗಳು, ಕೇಂದ್ರ ಸರ್ಕಾರದ ಮರ್ಜಿಗೆ ಒಳಗಾಗಿ, ಮೋದಿ ವಿರೋಧಿಗಳ ಪೋಸ್ಟ್‌ಗಳನ್ನು ನಿಯಂತ್ರಿಸಿ, ಮೋದಿಯನ್ನಷ್ಟೇ ಮೆರೆಸಲಾಯಿತು. ಇವುಗಳ ಜೊತೆಗೆ ಬಿಜೆಪಿಯ ಐಟಿ ಸೆಲ್‌ ಎಂಬ ಆರೆಸ್ಸೆಸ್ಸಿನ ಅಕ್ಷೋಹಿಣಿ ಸೈನ್ಯದ ಸುಳ್ಳಿನ ಫ್ಯಾಕ್ಟರಿಯಿಂದ ಉತ್ಪತ್ತಿಯಾಗುವ, ದೇಶದಾದ್ಯಂತ ಹಂಚುವ, ಅದನ್ನೇ ನಂಬುವ ಭಕ್ತರಿಂದಾಗಿ ಮೋದಿ ಎಂದರೆ, ಅತಿಮಾನುಷ ಎಂಬಂತೆ ಬಿಂಬಿಸಲಾಯಿತು. ಗಾಳಿಯಲ್ಲಿ ಗೋಪುರ ಕಟ್ಟಿದಂತೆ, ಮೋದಿ ಎಂಬ ಬಲೂನಿಗೆ ಗಾಳಿ ತುಂಬಿದರು. ಆಹಾ, ಓಹೋ ಎನ್ನುವಂತೆ ಮಾಡಿದರು.

ಹಾಗಾದರೆ, ಮೋದಿ ನಾಯಕರಲ್ಲವೇ, ಜನರನ್ನು ಪ್ರಭಾವಿಸುವ ವರ್ಚಸ್ವಿ ಗುಣವಿಲ್ಲವೇ, ವ್ಯಕ್ತಿತ್ವವಿಲ್ಲವೇ ಎಂಬ ಪ್ರಶ್ನೆ ಎದುರಾಗಬಹುದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದೆ, ಮೋದಿಗೂ ವರ್ಚಸ್ವಿ ವ್ಯಕ್ತಿತ್ವವಿದೆ. ದೇಶವನ್ನಾಳಿದ ಇತರ ನಾಯಕರಿಗಿದ್ದಂತೆ ಅವರಿಗೂ ನಾಯಕತ್ವದ ಗುಣವಿದೆಯೇ ಹೊರತು, ಅತಿಮಾನುಷರಲ್ಲ. ಮೋದಿ ಅಂದ್ರೆ ಇಂಡ್ಯ ಅನ್ನುವುದಲ್ಲ. ಅದು ಮೋದಿ ಎಂಬ ಮನುಷ್ಯನಿಗೂ ಒಳ್ಳೆಯದಲ್ಲ.

ಮೋದಿ ಮೋದಿ ಎನ್ನುವ ಭೋಪರಾಕ್‌ನಿಂದ ಸೃಷ್ಟಿಸಲ್ಪಟ್ಟ ಮೋದಿ ಭ್ರಮೆ, ಸ್ಯಾಚುರೇಷನ್ ಪಾಯಿಂಟ್ ಮುಟ್ಟಿದೆ. ಇನ್ನೇನಿದ್ದರೂ ಕೆಳಗಿಳಿಯುವುದಷ್ಟೆ. ಭಕ್ತರ ಭೋಪರಾಕಿನ ಗಾಳಿಗೆ ಊದಿಕೊಂಡು, ಬೃಹದಾಕಾರವಾಗಿ ಕಾಣುತ್ತಿದ್ದ ಬಲೂನಿಗೆ ಈಗ ಸೂಜಿ ಮೊನೆ ತಾಕಿದೆ. ನಾನೊಬ್ಬ ಸಾಮಾನ್ಯ ಮನುಷ್ಯ, ಜನರಿಂದ ನಾಯಕನಾದ, ಪ್ರಧಾನಿಯಾದ ವ್ಯಕ್ತಿ ಎಂಬುದನ್ನು ಮೋದಿಯವರಿಗೆ ಅರ್ಥ ಮಾಡಿಸಬೇಕಿದೆ.

ಒಂದು ರಾಜಕೀಯ ಪಕ್ಷವೆಂದರೆ, ಅದು ಒಬ್ಬನಿಂದ ಆದದ್ದಲ್ಲ. ದೇಶದ ಜನರಿಂದ ಆದದ್ದು. ಆದರೆ ಬಿಜೆಪಿ ಅಧಿಕಾರಕ್ಕೇರುತ್ತಿದ್ದಂತೆ, ಮೋದಿ ಪ್ರಧಾನಿಯಾಗುತ್ತಿದ್ದಂತೆ ಇತರ ನಾಯಕರು ನಗಣ್ಯರಾದರು. ಮೋದಿ ಮಾತ್ರ ಮೆರೆಯತೊಡಗಿದರು. ಪ್ರಚಾರದಲ್ಲಿ, ಪ್ರಣಾಳಿಕೆಯಲ್ಲಿ, ಆಳ ನೀರಿನಲ್ಲಿ, ಸಂಸತ್ ಉದ್ಘಾಟನೆಯಲ್ಲಿ, ಶ್ರೀರಾಮನ ಪ್ರತಿಷ್ಠಾಪನೆಯಲ್ಲಿ, ಗುಹೆಯಲ್ಲಿ, ಗ್ಯಾರಂಟಿಯಲ್ಲಿ- ಮೋದಿಯ ಮೆರವಣಿಗೆ ಸಾಗುತ್ತಲೇ ಇದೆ.

ಇದು ಬಿಜೆಪಿಯಲ್ಲಿರುವ ಇತರ ನಾಯಕರಿಗೆ ಅಸಹ್ಯ ಹುಟ್ಟಿಸಿದ್ದರೆ ಆಶ್ಚರ್ಯವಿಲ್ಲ. ಆದರೆ ಅದನ್ನು ಅವರು ಬಹಿರಂಗವಾಗಿ ಹೇಳುತ್ತಿಲ್ಲ. ಏಕೆಂದರೆ, ಮೋದಿ ಎಂಬ ಅಲೆಯಲ್ಲಿ ಅವರು ಕೂಡ ತೇಲಿಹೋಗಬೇಕಿದೆ. ಆದರೆ ಆ ಅಲೆ ಇಂದು ಇಲ್ಲವಾಗಿದೆ. ಮೋದಿಯ ಸ್ವಾರ್ಥಕೇಂದ್ರಿತ ಕೋಟೆ ಸಡಿಲವಾಗುತ್ತಿದೆ. ಮೋದಿಯ ಮಾತನ್ನು ಅಮಿತ್ ಶಾ ಕೇಳಬಹುದು, ಅಮಿತ್ ಶಾ ಮಾತನ್ನು ಮೋದಿ ಕೇಳಬಹುದು. ಆದರೆ ಬಿಜೆಪಿಯಲ್ಲಿರುವ ಎಲ್ಲರೂ ಕೇಳುತ್ತಾರೆ ಎನ್ನುವ ಗ್ಯಾರಂಟಿ ಇಲ್ಲವಾಗಿದೆ. ಅದು ಮೋದಿಗೂ ಮನವರಿಕೆಯಾಗಿದೆ. ಮೊದಲ ಹಂತದ ಮತದಾನದ ನಂತರ, ಅದು ಇನ್ನಷ್ಟು ನಿಚ್ಚಳವಾಗಿದೆ.

ಈ ಮೊದಲು ಮೋದಿ ಕರ್ನಾಟಕಕ್ಕೆ ಬಂದರೆ ಮೋದಿಯೇ ಮುಖ್ಯವಾಗಿ ಅಭ್ಯರ್ಥಿ ಪಕ್ಕದಲ್ಲಿ ಕೈ ಮುಗಿದು ನಿಂತ ಗೊಂಬೆಯಂತೆ ಗೋಚರಿಸುತ್ತಿದ್ದರು. ಆದರೆ, ಈ ಬಾರಿ ಚುನಾವಣಾ ಪ್ರಚಾರಕ್ಕೆಂದು ಕರ್ನಾಟಕಕ್ಕೆ ಬಂದಿದ್ದ ಪ್ರಧಾನಿ ಮೋದಿಯವರು, ತಮ್ಮ ಜನಪ್ರಿಯತೆ ಬಗ್ಗೆ ತಾವೇ ಅನುಮಾನಕ್ಕೆ ಬಿದ್ದು, ಸ್ಥಳೀಯ ನಾಯಕರನ್ನು ಅವಲಂಬಿಸಿದ್ದಾರೆ. ಮೈಸೂರಿನಲ್ಲಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಪಕ್ಕದಲ್ಲಿ ಕೂರಿಸಿಕೊಂಡು, ವಿರೋಧಿಗಳನ್ನು ಹಣಿಯಲು ಹವಣಿಸಿದ್ದರು. ಸಿಕ್ಕ ಅವಕಾಶವನ್ನು ‘ಬಾಚಿ ಬಾಚಿ’ ಬಳಸಿಕೊಂಡ ದೇವೇಗೌಡರು, ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೇಲೆ ತಮಗಿರುವ ವೈಯಕ್ತಿಕ ಸಿಟ್ಟನ್ನು ಕಾರಿಕೊಂಡು, ಮಣ್ಣಿನಮಗನ ಮುತ್ಸದ್ದಿತನ ಮಣ್ಣುಪಾಲು ಆಗುವಂತೆ ನೋಡಿಕೊಂಡರು.

2023ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್‌ ರೂಪಿಸಿದ್ದ ಪೇ ಸಿಎಂ ಮತ್ತು ಫಾರ್ಟಿ ಪರ್ಸೆಂಟ್‌ ಕಮಿಷನ್‌ ಜಾಹೀರಾತು ಜನರಲ್ಲಿ ಜಾಗೃತಿ ಉಂಟು ಮಾಡಿತ್ತು. ಚಿಂತನೆಗೆ ಹಚ್ಚಿತ್ತು. ಬಿಜೆಪಿಯನ್ನು ಗುಡಿಸಿ ಹಾಕಿತ್ತು.

ಈಗ, ತೆರಿಗೆ ಹಂಚಿಕೆ, ಬರ ಪರಿಹಾರ ಅಥವಾ ಅನುದಾನ ನೀಡುವುದರಲ್ಲಾಗಿರಬಹುದು- ಕೇಂದ್ರ ಸರ್ಕಾರ ಮಾಡಿರುವ ಮೋಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಜಾಹೀರಾತಿನ ಮೂಲಕ ಜನರಿಗೆ ಗಮನಕ್ಕೆ ತರುತ್ತಿರುವ ರೀತಿ ವಿಭಿನ್ನವಾಗಿದೆ, ಪರಿಣಾಮಕಾರಿಯಾಗಿದೆ. ಮೋದಿಯ ಮೋಸ ಜನರಿಗೆ ಅರ್ಥವಾಗುತ್ತಿದೆ. ಸಾಮಾನ್ಯ ಜನರೂ ಮೋದಿಯ ಸುಳ್ಳುಗಳನ್ನು ಕುರಿತು ಮಾತನಾಡುವಂತಾಗಿದೆ.

ಬೆಚ್ಚಿ ಬಿದ್ದಿರುವ ಬಿಜೆಪಿ, ತಾನು ಕೂಡ ಜಾಹೀರಾತಿನ ಮೊರೆ ಹೋಗಿದೆ. ಕಾಂಗ್ರೆಸ್ ಡೇಂಜರ್ ಎಂದು ಜಾಹೀರಾತು ನೀಡಿದೆ. ಬಿಜೆಪಿಯ ಈ ಜಾಹೀರಾತು ಅದರ ಬಣ್ಣವನ್ನು ಬಯಲು ಮಾಡುತ್ತಿದೆಯೇ ಹೊರತು, ರಾಜ್ಯದ ಜನರಿಗೆ ಬೇಕಾದ ಮೂಲಭೂತ ಅಗತ್ಯಗಳತ್ತ ಗಮನ ಹರಿಸದಾಗಿದೆ. ಅನಗತ್ಯವಾಗಿ ನೇಹಾಳನ್ನು ಎಳೆದು ತರುತ್ತಿದೆ. ನೇಹಾಳಿಗೆ ನ್ಯಾಯ ಸಿಗುತ್ತದೋ ಇಲ್ಲವೋ, ಬಿಜೆಪಿ ನಾಯಕರಿಗಂತೂ ಆಹಾರ ಸಿಕ್ಕಿದೆ. ನಡ್ಡಾ ಓಡೋಡಿ ಬಂದು ಸಿಬಿಐ ಎಂದು ತೊದಲುತ್ತಿದ್ದಾರೆ. ಅತ್ತ ಮೋದಿ ಮುಸ್ಲಿಮರ ಬಗ್ಗೆ ಕಾರಿಕೊಳ್ಳುತ್ತಿದ್ದಾರೆ. ರಾಮಮಂದಿರ ಚುನಾವಣೆಗಾಗಿ ಮಾಡಿದ್ದಲ್ಲ ಎಂದು ಬಡಬಡಿಸುತ್ತಿದ್ದಾರೆ.

ಹತ್ತು ವರ್ಷಗಳ ಅಪೂರ್ವ ಅವಕಾಶವನ್ನು ‘ಮೋದಿ ಮೆರೆದಾಟ’ಕ್ಕೆ ಮೀಸಲಿಟ್ಟ ಮೋದಿ, ಈಗ 2047ರ ಅಮೃತ ಕಾಲದ ಕತೆ ಹೇಳುತ್ತಿದ್ದಾರೆ. ಕೊಟ್ಟ ಕುದುರೆಯನೇರದ ಈ ಶೂರನಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಡುವುದು, ದೇಶದ ಒಳಿತಿನ ದೃಷ್ಟಿಯಿಂದ ಒಳ್ಳೆಯದಲ್ಲ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಮೋದಿ ಇದ್ದಕ್ಕೆ ಸುಮಾರು ಅಭಿವೃದ್ಧಿ ಆಗಿದೆ ಭಯೋತ್ಪಾದಕ ಚಟುವಟಿಕೆಗಳು ಕಡಿಮೆ ಆಗಿವೆ ಇನ್ನು ನಮಗೇ ಮೋದಿ ಬೇಕು Nimma editor mundina yochane illa modige finger maadidare Bharat nation uddaar aaguttaa ಸುಮ್ಮನೆ ಯಾರೋ ಹೇಳಿದ್ರೂ ಅಂತ ಬರೆದದ್ದು ಇನ್ನು ಬರೆಯಲು ಸಾಧ್ಯ ಇದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಕೋಮುದ್ವೇಷ ಜಾಹೀರಾತು ನೀಡಿ ವಿಕೃತಿ ಮೆರೆದ ಬಿಜೆಪಿ

ಕೊಲೆಯನ್ನು ಕೊಲೆಯಾಗಿ ನೋಡದೆ ಇವಿಎಂ ಮಷೀನ್‌ ಥರ ಭಾವಿಸುತ್ತಿರುವುದಾದರೂ ಏತಕ್ಕೆ? ನಿಜಕ್ಕೂ...

ಈ ದಿನ ಸಂಪಾದಕೀಯ | ದ್ವೇಷ -ವಿರಸ- ವೈಷಮ್ಯಗಳ ಮೇಲೆ ಮತಯಾಚನೆ ಪರಮವಿಕೃತಿ

ನೈಜ ಯದುವಂಶಿಗಳಾಗಿದ್ದರೆ ಭಗವಾನ್ ಕೃಷ್ಣನನ್ನು ಅವಮಾನಿಸಿದವರನ್ನು ಶಿಕ್ಷಿಸಿ ಎನ್ನುತ್ತಾರೆ ಮೋದಿ. ಒಂದು...

ಈ ದಿನ ಸಂಪಾದಕೀಯ | ಮುಸ್ಲಿಮರು, ಮಹಿಳೆಯರ ಮಂಗಳಸೂತ್ರಕ್ಕೆ ಕೈ ಹಾಕಿದ ಮೋದಿ

ಹತ್ತು ವರ್ಷಗಳಲ್ಲಿ ಅಚ್ಚೇ ದಿನ್ ತರಲಾಗದ ಮೋದಿಯವರು, ತಪ್ಪನ್ನು ಮುಚ್ಚಿಕೊಳ್ಳಲು ಸುಳ್ಳಿನ...

ಈ ದಿನ ಸಂಪಾದಕೀಯ | ಇಡಿ ಎಂಬ ತನಿಖಾ ಸಂಸ್ಥೆಯ ಘನತೆಯನ್ನು ಮಣ್ಣುಪಾಲು ಮಾಡಿದ್ದೇ ಮೋದಿಯ ‘ಮಹಾನ್’ ಸಾಧನೆ

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಇಡಿ ಕೈಗೊಂಡ ಕ್ರಮಗಳು- ವಿರೋಧಿಗಳನ್ನು ಹತ್ತಿಕ್ಕಲು,...