ನಾಗರ ಪಂಚಮಿಯ ದಿನ ಬಹುತೇಕ ಜನರು ಹುತ್ತಕ್ಕೆ ಅಥವಾ ನಾಗ ಪ್ರತಿಮೆಗಳಿಗೆ ಹಾಲೆರದು ತಮ್ಮ ಮೌಢ್ಯತೆಯನ್ನು ಮೆರೆಯುತ್ತಿದ್ದಾರೆ. ಆದರೆ, ಹಾವು ಮಾಂಸಾಹಾರಿ, ಸರಿಸೃಪ ಪ್ರಾಣಿ, ಹಾಲು ಅದರ ಆಹಾರವಲ್ಲ. ನಾಗರ ಹಾವಿನ ಹುತ್ತಕ್ಕೆ ಹಾಲೆರೆಯುವದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚೆಂದು ಸಾಬೀತಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಅಧ್ಯಕ್ಷ ಶ್ರೀಶೈಲ ಆಂಟಿ ಹೇಳಿದರು.
ಬಾಗಲಕೋಟೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ವೈಚಾರಿಕ ರಾಜಕಾರಣಿ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಇದೇ ಆಗಸ್ಟ್ 21ರಂದು ನಾಗರ ಪಂಚಮಿ ಹಬ್ಬವನ್ನು ʼಬಸವ ಪಂಚಮಿ’ಯನ್ನಾಗಿ ರಾಜ್ಯಾದ್ಯಂತ ಆಚರಿಸಬೇಕು” ಎಂದು ಹೇಳಿದರು.
“ವೈಜ್ಞಾನಿಕವಾಗಿ ಕರ್ನಾಟಕದಲ್ಲಿ ಪ್ರತಿವರ್ಷ ನಲವತ್ತು ಸಾವಿರಕ್ಕಿಂತ ಹೆಚ್ಚು ಮಕ್ಕಳು ಅಪೌಷ್ಠಿಕತೆಯಿಂದ ಮರಣ ಹೊಂದುತ್ತಿದ್ದಾರೆ. ಅಲ್ಲದೆ ಲಕ್ಷಾಂತರ ಮಕ್ಕಳು ಅಪೌಷ್ಠಿಕತೆ ಸೇರಿದಂತೆ ಬೇರೆ ಬೇರೆ ರೋಗಗಳಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ನಾಗರ ಪಂಚಮಿ ಹಬ್ಬದ ನಿಮಿತ್ತ ಲಕ್ಷಾಂತರ ಲೀಟರ್ ಹಾಲನ್ನು ಪೋಲು ಮಾಡದೇ ಬಡ ಮಕ್ಕಳಿಗೆ, ರೋಗಿಗಳಿಗೆ ನೀಡುವುದರ ಮುಖಾಂತರ ವ್ಯರ್ಥವಾಗುತ್ತಿರುವ ಪೌಷ್ಠಿಕ ಆಹಾರವು ಪೋಲಾಗುವುದನ್ನು ತಪ್ಪಿಸಬೇಕಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಯೋಜನೆಗೆ ಚಾಲನೆ ನೀಡಿದ ಸಚಿವರು
“ತಮ್ಮ ಮುಖಾಂತರ ಜಿಲ್ಲೆಯ ಜನತೆಗೆ ನಾಗರ ಪಂಚಮಿಯ ಬದಲಾಗಿ ಬಸವ ಪಂಚಮಿಯನ್ನು ಆಚರಿಸಿಕೊಳ್ಳಲು ವಿನಂತಿಸಿಕೊಳ್ಳುತ್ತೇವೆ. ಜಿಲ್ಲೆಯ ಹಲವು ಪ್ರಗತಿಪರ ಸಂಘದ ಮುಖಂಡರು, ಪ್ರಗತಿಪರ ಸ್ವಾಮೀಜಿಗಳು, ಬುದ್ಧಿಜೀವಿಗಳು, ಪ್ರಜ್ಞಾವಂತ ಜನರು ತಾವಿರುವ ಸ್ಥಳಗಳಲ್ಲಿ ನಾಗರ ಪಂಚಮಿಯನ್ನು ‘ಬಸವ ಪಂಚಮಿ’ಯನ್ನಾಗಿ ಆಚರಿಸಬೇಕು” ಎಂದು ಕರೆ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್ ಕಲಾದಗಿ, ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಮುಖಂಡರುಗಳಾದ ಈರಪ್ಪ ಸುತಾರ್, ಜಯರಾಜ್ ಹಾದಿಕಾರ ಹಾಗೂ ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು, ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಇದ್ದರು.