- ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆದ ಕ್ಯಾಂಡಲ್ ಲೈಟ್ ಪ್ರತಿಭಟನೆ
- ಉತ್ತರ ಪ್ರದೇಶದಲ್ಲಿ ಚಂದ್ರಶೇಖರ್ ಆಝಾದ್ ಮೇಲಿನ ದಾಳಿಗೆ ಖಂಡನೆ
ಜಾತಿ ದೌರ್ಜನ್ಯಗಳು ಕೊನೆಗೊಳ್ಳಬೇಕು, ಮರ್ಯಾದೆಗೇಡು ಹತ್ಯೆ ನಿಲ್ಲಬೇಕು ಹಾಗೂ ಉತ್ತರ ಪ್ರದೇಶದಲ್ಲಿ ದಲಿತ ನಾಯಕ ಚಂದ್ರಶೇಖರ್ ಆಝಾದ್ ಮೇಲಿನ ದಾಳಿಯನ್ನು ಖಂಡಿಸಿ ಬೆಂಗಳೂರಿನಲ್ಲಿ ನಾಗರಿಕರ ಒಕ್ಕೂಟವು ‘ಕ್ಯಾಂಡಲ್ ಲೈಟ್’ ಪ್ರತಿಭಟನೆ ನಡೆಸಿತು.
ಬೆಂಗಳೂರಿನ ಫ್ರೀಡಂ ಪಾರ್ಕಿನ ರಾಷ್ಟ್ರ ಕುವೆಂಪು ಪ್ರತಿಮೆ ಬಳಿ ನಡೆದ ಈ ಪ್ರತಿಭಟನೆಯನ್ನುದ್ದೇಶಿಸಿ, ಹಲವು ಸಾಮಾಜಿಕ ಮುಖಂಡರು ಮಾತನಾಡಿದರು.
ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ ಆಗಬೇಕೆಂದರೆ ಜಾತಿ ದೌರ್ಜನ್ಯ ನಿಲ್ಲಬೇಕು ಹಾಗೂ ಜಾತಿ ವಿನಾಶವಾಗಬೇಕು ಎಂದು ಆಗ್ರಹಿಸಿದರು.
ಉತ್ತರ ಪ್ರದೇಶದಲ್ಲಿ ದಲಿತ ನಾಯಕ ಚಂದ್ರಶೇಖರ್ ಆಝಾದ್ ಮೇಲೆ ನಡೆದ ದಾಳಿ, ರಾಜಕೀಯ ಪ್ರೇರಿತವಾದದ್ದು ಎಂದು ಖಂಡಿಸಿದರು.
ಹಿರಿಯ ವಕೀಲರಾದ ಬಿ.ಟಿ.ವೆಂಕಟೇಶ್, ಸಿ.ಎಸ್.ದ್ವಾರಕಾನಾಥ್, ಸಾಹಿತಿಗಳಾದ ಎಲ್.ಎನ್.ಮುಕುಂದ ರಾಜ್, ದಲಿತ ಮುಖಂಡ ಬಿ ಆರ್ ಭಾಸ್ಕರ್ ಪ್ರಸಾದ್, ಹಾ.ರ. ಮಹೇಶ್, ಮೈತ್ರೇಯಿ, ಹುಲಿಕುಂಟೆ ಮೂರ್ತಿ ಮತ್ತಿತರರು ಮಾತನಾಡಿದರು.
ದು.ಸರಸ್ವತಿ, ಗೀತಾ ಮೆನನ್; ಸ್ವರಾಜ್ ಅಭಿಯಾನದ ಖಿಝರ್ ಆಲಂ, ಬಹುತ್ವ ಕರ್ನಾಟಕದ ವಿನಯ್ ಶ್ರೀನಿವಾಸ್, ತನ್ವೀರ, ಮಹಿಳಾ ದೌರ್ಜನ್ಯವಿರೋಧಿ ಒಕ್ಕೂಟದ ಗೌರಿ ಹಾಗೂ ಮಲ್ಲಿಗೆ ಮತ್ತಿತತರರು ಭಾಗವಹಿಸಿದ್ದರು.
ಪ್ರತಿಭಟನೆಯನ್ನು ತಮಟೆ, ಬಹುತ್ವ ಕರ್ನಾಟಕ, ಕರ್ನಾಟಕ ಜನಶಕ್ತಿ, ಕ್ರಾಂತಿಕಾರಿ ಕುವೆಂಪು ಹೊರಾಟ ಸಮಿತಿ ಹಾಗು ಇತರೆ ಪ್ರಗತಿಪರ ಸಂಘಟನೆಗಳು ಸೇರಿ ಹಮ್ಮಿಕೊಂಡಿದ್ದವು.
ಬೇಡಿಕೆಗಳು
- ಜಾತಿ ಸಂಬಂಧಿತ ಹಿಂಸಾಚಾರವನ್ನು ಪರಿಹರಿಸುವುದು ಹೇಗೆ ಮತ್ತು ಎಲ್ಲ ರೀತಿಯ ಜಾತಿ ದೌರ್ಜನ್ಯಗಳನ್ನು ಕೊನೆಗೊಳಿಸಲು ಮುಂದಿನ ದಾರಿ ಬಗ್ಗೆ ಚರ್ಚಿಸಲು ಬಜೆಟ್ ಅಧಿವೇಶನದಲ್ಲಿ ಒಂದು ದಿನವನ್ನು ನಿಗದಿಪಡಿಸಬೇಕು.
- ಜಾತಿಯನ್ನು ವಿನಾಶ ಮಾಡುವ ಉದ್ದೇಶದಿಂದ ಬಜೆಟ್‌ನಲ್ಲಿ ಕಾರ್ಯಕ್ರಮವನ್ನು ಘೋಷಿಸಬೇಕು
- ಕೆಲಸದ ಸ್ಥಳಗಳಲ್ಲಿ ನಡೆಯುತ್ತಿರುವ ಜಾತಿ-ತಾರತಮ್ಯ ಬಗ್ಗೆ ಅಧ್ಯಯನವನ್ನು ಪ್ರಾರಂಭಿಸಿ ಮತ್ತು ಅದನ್ನು ಕೊನೆಗೊಳಿಸಲು ತೀರ್ಮಾನ ಕೈಗೊಳ್ಳಬೇಕು.
- ಸರ್ಕಾರದ ಮಂತ್ರಿಗಳು ಅಸ್ಪೃಶ್ಯತೆ ಮತ್ತು ಜಾತಿ ಆಧಾರಿತ ದೌರ್ಜನ್ಯಗಳನ್ನು ಸಾರ್ವಜನಿಕವಾಗಿ ಖಂಡಿಸಲು ಮತ್ತು ಜಾತಿ ವಿನಾಶಕ್ಕಾಗಿ ಕೆಲಸ ಮಾಡಬೇಕು.
- ಜಾತಿ ಮೇಲಿನ ದೌರ್ಜನ್ಯದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಘೋಷಿಸಿ ಮತ್ತು ಸರಿಯಾದ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳಬೇಕು.
- ಸಂಕಷ್ಟದಲ್ಲಿರುವ ಅಂತರ್ಜಾತಿ ದಂಪತಿಗಳಿಗೆ ರಕ್ಷಣೆ ಒದಗಿಸಲು ವಿಶೇಷ ಸಹಾಯವಾಣಿಯನ್ನು ಸ್ಥಾಪಿಸಬೇಕು.
- ಜಾತಿ ತಾರತಮ್ಯವು ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಜಾತಿಯು ವಿವಿಧ ರೀತಿಯಲ್ಲಿ ಹೇಗೆ ಪ್ರಕಟವಾಗುತ್ತದೆ ಎಂಬುದನ್ನು ಒಳಗೊಂಡ ಕಡ್ಡಾಯ ಜಾಗೃತಿ ಕಾರ್ಯಕ್ರಮಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನಡೆಸಬೇಕು ಎಂಬ ಬೇಡಿಕೆಗಳನ್ನು ಇಡಲಾಯಿತು.