ಪ್ರಬಲ ಜಾತಿಯ ಯುವತಿ ಮತ್ತು ದಲಿತ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಅವರ ಪ್ರೀತಿಯ ಬಗ್ಗೆ ತಿಳಿದ ಯುವತಿಯ ಕುಟುಂಬಸ್ಥರು ದಲಿತ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಹತ್ಯೆಗೈದಿರುವ ಜಾತಿ ಕ್ರೌರ್ಯದ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಕುಶನೂರು ಗ್ರಾಮದ ನಿವಾಸಿ, ದಲಿತ ಯುವಕ ಸುಮಿತ್ ಕುಮಾರ್ (18) ಅವರನ್ನು ಪ್ರಬಲ ಜಾತಿಯವರು ಕೊಲೆ ಮಾಡಿದ್ದಾರೆ. ಯುವಕ ಕಮಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್‌ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ, ತನ್ನದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ.
ಯುವಕ-ಯುವತಿಯ ಪ್ರೀತಿಯ ಬಗ್ಗೆ ತಿಳಿದ ಯುವತಿಯ ತಂದೆ ಮತ್ತು ಸಹೋದರ ಸುಮಿತ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಮಹಾರಾಷ್ಟ್ರದ ಲಾತೂರ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ಕುಶನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯ ತಂದೆ, ಆರೋಪಿ ಕಿಶನ್ ಗಾವ್ಲಿ (55) ಮತ್ತು ಸಹೋದರ ರಾಹುಲ್ ಗಾವ್ಲಿ (24) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.