ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಮಂಗಳವಾರ ನಡೆದ ಬಂದ್ ವೇಳೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಭಾವಚಿತ್ರವಿಟ್ಟು ಅಣಕು ತಿಥಿ ಮಾಡಲಾಗಿದೆ. ಅಣಕು ತಿಥಿ ಮಾಡಿ ಪ್ರತಿಭಟನೆ ನಡೆಸಿದ್ದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶಗೌಡ ಹಾಗೂ ಕಾರ್ಯಕರ್ತರ ವಿರುದ್ದ ರಾಮನಗರದ ಐಜೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಂಗಳವಾರ ಬೆಂಗಳೂರು ಮತ್ತು ರಾಮನಗರ ಬಂದ್‌ಗೆ ಕರೆಕೊಡಲಾಗಿತ್ತು. ಬಂದ್ ವೇಳೆ, ರಾಮನಗರದ ಬಸ್ ನಿಲ್ದಾಣದ ಎದುರು ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆ ಸಮಯದಲ್ಲಿ, ಸ್ಟಾಲಿನ್ ಅವರ ಭಾವಚಿತ್ರವಿಟ್ಟು, ಅದಕ್ಕೆ ಹೂವಿನ ಹಾರ ಹಾಕಿ, ವಿವಿಧ ತಿನಿಸುಗಳನ್ನಿಟ್ಟು, ಹಾಲು-ತುಪ್ಪ ಹಾಕಿ ಅಣಕು ತಿಥಿ ಮಾಡಿ ಆಕ್ರೋಶ ವ್ಯಕ್ತಪಡಿದ್ದರು.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರಾಮೇಶಗೌಡ ಅವರು ಎರಡು ಭಾಷಿಕರ ನಡುವೆ ದ್ವೇಷ ಮತ್ತು ವೈಷಮ್ಯ ಸೃಷ್ಟಿಸುವ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ರಮೇಶಗೌಡ ಮತ್ತು ಹಲವು ಕಾರ್ಯಕರ್ತರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 143, 143,147, 153, 290, 341, 504, 505(2) ಹಾಗೂ 149ರಡಿ ಎಫ್‌ಐಆರ್ ದಾಖಲಾಗಿದೆ.