ಕಾವೇರಿ ಹೋರಾಟ ತಾರಕಕ್ಕೇರಿದ್ದು, ಕರ್ನಾಟಕ ರಾಜ್ಯ ರೈತ ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಕೆಂಪೂಗೌಡ ನೇತೃತ್ವದಲ್ಲಿ ದಸಂಸ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಕಾವೇರಿ ಸ್ನಾನ ಘಟ್ಟಕ್ಕಿಳಿದು ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಆಗ್ರಹಿಸಿದರು.
“ಈ ದೇಶದ ಸುಪ್ರೀಂ ಕೋರ್ಟ್ ಆಗಲಿ, ಕಾವೇರಿ ನಿರ್ವಹಣಾ ಪ್ರಾಧಿಕಾರವಾಗಲಿ ವಸ್ತುಸ್ಥಿತಿ ಅರಿಯದೆ, ಕಾವೇರಿ ಕೊಳ್ಳದಲ್ಲಿ ಕಾವೇರಿ ನೀರಿನ ಮಟ್ಟ ಅರಿಯದೆ ಕುರುಡತ್ವದಂತೆ ವರ್ತಿಸಬಾರದು. ಸ್ಥಳಕ್ಕೆ ಖುದ್ದು ಭೇಟಿ ಕೊಟ್ಟು ನೀರಿನ ಪ್ರಮಾಣ ಎಷ್ಟಿದೆ, ನೀರು ಬಿಟ್ಟರಾಗುವ ಸಾಧಕ ಬಾಧಕ ಅವಲೋಕನ ಮಾಡಿ ಕ್ರಮ ಕೈಗೊಳ್ಳಬೇಕು. ದೆಹಲಿಯಲ್ಲಿ ಕುಳಿತು ನಿರ್ಧಾರ ಮಾಡುವುದು ಖಂಡನೀಯ. ಕೂಡಲೇ ಸಂಬಂಧಪಟ್ಟವರು ಕಾವೇರಿ ನೀರು ಹರಿಯುವುದನ್ನು ನಿಲ್ಲಿಸಬೇಕು” ಎಂದು ಮಂಡ್ಯ ಜಿಲ್ಲಾಧ್ಯಕ್ಷ ಕೆಂಪೂಗೌಡ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಕೆಂಪೂಗೌಡ ಈ ದಿನ.ಕಾಮ್ ಜೊತೆ ಮಾತನಾಡಿ, “ದೆಹಲಿಯಲ್ಲಿ ಕುಳಿತ ನ್ಯಾಯಾಧೀಶರಿಗೆ ನೀರು ಇದೆಯಾ ಇಲ್ಲವಾ ಎನ್ನುವ ಅರಿವು ಇರುವುದಿಲ್ಲ. ಇದನ್ನು ಸರ್ಕಾರ ಸಮರ್ಪಕವಾಗಿ ಅಧ್ಯಯನ ನಡೆಸಿ ಸಮಗ್ರ ಮಾಹಿತಿ ಸಲ್ಲಿಸಬೇಕು. ಕೂಡಲೇ ಸರ್ಕಾರ ಕಾವೇರಿ ನೀರನ್ನು ಬಿಡುವುದಿಲ್ಲ ಎನ್ನುವ ನಿಲುವಿಗೆ ಬದ್ಧರಾಗಬೇಕು. ಇದು ನಾಡಿನ ರೈತರ ಬದುಕಿನ ಪ್ರಶ್ನೆ” ಎಂದು ಆಗ್ರಹಿಸಿದರು.
ಸರ್ವೋದಯ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್ ಗೌಡ ಮಾತನಾಡಿ, “ಈ ಭಾರಿ ಮಳೆಯ ಅಭಾವದಿಂದ ಈಗಾಗಲೇ ರಾಜ್ಯದ ಜನತೆ ತತ್ತರಿಸಿದ್ದಾರೆ. ರೈತ ವರ್ಗ ಸಂಕಷ್ಟಕ್ಕೆ ಈಡಾಗಿದೆ. ಹೀಗಿರುವಾಗ ಇರುವ ನೀರನ್ನು ತಮಿಳುನಾಡಿಗೆ ಬಿಟ್ಟರೆ ಪಟ್ಟಣ ಪ್ರದೇಶದ ಜನರಿಗೆ ಕುಡಿಯುವ ನೀರಿನ ಹಾಹಾಕಾರ ಎದುರಾಗುತ್ತದೆ. ಇದರಿಂದ ಜಾನುವಾರುಗಳು, ಕೃಷಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ವಾಸ್ತವ ಸ್ಥಿತಿ ಅರಿಯದೆ ನೀರು ಹರಿಸುವುದು ಸೂಕ್ತವಲ್ಲ. ಹಾಗಾಗಿ ಕೂಡಲೇ ನೀರಿನ ಹರಿವನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಕಾವೇರಿ ವಿವಾದ | ಬಿಜೆಪಿಯ ಯಾವ ಸಂಸದನಿಗೂ ನೈಜ ಕಾಳಜಿ ಇಲ್ಲ: ವಿ ಎಸ್ ಉಗ್ರಪ್ಪ ಕಿಡಿ
ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅದ್ಯಕ್ಷ ಎಎಲ್ ಕೆಂಪೂಗೌಡ, ಸರ್ವೋದಯ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್ ಗೌಡ, ಕರವೆ ತಾಲೂಕು ಘಟಕದ ಅಧ್ಯಕ್ಷ ಚಂದಗಾಲು ಶಂಕರ್, ಕರುನಾಡ ರಕ್ಷಣಾ ಪಡೆ ಅದ್ಯಕ್ಷೆ ಪ್ರಿಯಾ ರಮೇಶ್, ಅಮ್ರೀನ್ ತಾಜ್, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಬಿ ಶಂಕರ್ ಬಾಬು, ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ, ಪಾಂಡವಪುರ ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜ್, ಗೌರವಾಧ್ಯಕ್ಷ ಬಿ ಎಸ್ ರಮೇಶ್, ಕಾರ್ಯದರ್ಶಿ ಶಂಕರೇಗೌಡ, ಪಿ ಎಸ್ ಕೆ ಮಾಜಿ ನಿರ್ದೇಶಕ ಪಾಂಡು, ಕೃಷಿಕ ಸಮಾಜದ ನಿರ್ದೇಶಕ ಕಡತನಾಳು ಬಾಲಕೃಷ್ಣ, ಮರಳಗಾಲ ಮಂಜುನಾಥ್, ಮರುವನಹಳ್ಳಿ ಶಂಕರ್, ಎಂ ಚಂದ್ರಶೇಖರ್, ಜಯರಾಮೇಗೌಡ, ಶಿವರಾಜ್, ತೇಜಸ್ ಹಾಗೂ ಜಗದೀಶ್ ಇದ್ದರು.