ರಾಜ್ಯದಲ್ಲಿ ಆಸ್ತಿಗಳ ನೋಂದಣಿ ಪ್ರಕ್ರಿಯೆ ಸುಲಭವಾಗಲೆಂದು ಮಾಡಲಾಗಿರುವ ‘ಕಾವೇರಿ ವೆಬ್‌ಸೈಟ್’ನ ಸರ್ವರ್ ಕಳೆದ ಕೆಲವು ದಿನಗಳಿಂದ ಮತ್ತೆ ಡೌನ್ ಆಗಿದ್ದು, ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಆಸ್ತಿಗಳ ನೋಂದಣಿ ಕಾರ್ಯ ನಡೆಸಲು ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಕರ್ನಾಟಕದಾದ್ಯಂತ ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸುವುದಕ್ಕಾಗಿ ಕಾವೇರಿ 2.0 ಪೋರ್ಟಲ್ ಅನ್ನು ಸ್ಥಾಪಿಸಲಾಗಿದೆ. ಈ ವೆಬ್‌ಸೈಟ್‌ನ ಸರ್ವರ್ ಡೌನ್ ಆಗಿದ್ದು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯುಂಟಾಗಿದೆ.
ರಾಜ್ಯದಲ್ಲಿ ಆಸ್ತಿಗಳ ನೋಂದಣಿ ಆನ್‌ಲೈನ್‌ನಲ್ಲಿ ಮಾತ್ರ ಮಾಡಲಾಗುತ್ತದೆ. ಕಾವೇರಿ 2.0 ಪೋರ್ಟಲ್‌ಗೆ ಸರ್ವರ್ ಡೌನ್ ಆಗಿದ್ದು, 256 ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಣಿಯ ಮೇಲೆ ಪರಿಣಾಮ ಬೀರಿರುವುದಾಗಿ ವರದಿಯಾಗಿದೆ. ನೋಂದಣಿಗಾಗಿ ಕಳೆದ ಶನಿವಾರದಂದು ದಾಖಲೆಗಳನ್ನು ಅಪ್ಲೋಡ್ ಮಾಡಲು ಬಯಸಿದ್ದವರಿಗೆ ಸಾಧ್ಯವಾಗಿರಲಿಲ್ಲ. ಈ ಸಮಸ್ಯೆ ಸೋಮವಾರ, ಮಂಗಳವಾರವೂ ಮುಂದುವರಿದಿರುವುದಾಗಿ ಸಾರ್ವಜನಿಕರು ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿದ್ದಾರೆ.
ಉಪ ನೋಂದಣಿ ಕಚೇರಿಯಲ್ಲಿನ ಕಾವೇರಿ 2.0 ಅಪ್ ಗ್ರೇಡ್ ಮಾಡಿದ ಬಳಿಕ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಬಹುತೇಕ ಸೇವೆಗಳನ್ನು ಆನ್‌ಲೈನ್ ಮಾಡಿದೆ. ಇದರಿಂದಾಗಿ ಕಾವೇರಿ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರು ಲಾಗಿನ್ ಆಗಿ ದಸ್ತಾವೇಜುಗಳ ನೋಂದಣಿ ಸೇವೆ ಪಡೆಯಬಹುದಾಗಿತ್ತು. ಹಲವು ದಿನಗಳಿಂದ ಸರ್ವರ್ ಸಮಸ್ಯೆ ಎದುರಾಗಿದ್ದು, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜನರು ಪರದಾಡುವಂತಾಗಿದೆ.
“ಕಾವೇರಿ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಲು ಒಟಿಪಿ ಬರುತ್ತಿಲ್ಲ. ಒಟಿಪಿ ಬಂದರೂ ದಾಖಲೆಗಳನ್ನು ಅಪ್ಲೋಡ್ ಮಾಡಲು ಭಾರೀ ಸಮಯ ತೆಗೆದುಕೊಳ್ಳುತ್ತಿದೆ. ಆಸ್ತಿಯ ಮಾರ್ಗಸೂಚಿ ದರ ತೋರಿಸದ ಪರಿಣಾಮ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸುವುದು ಕೂಡ ವಿಳಂಬವಾಗುತ್ತಿದೆ. ಇದಾದ ನಂತರ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಲು ಸರ್ವರ್ ಸಮಸ್ಯೆ ಎದುರಾಗಿದೆ. ಒಂದು ಸಲ ಶುಲ್ಕ ಪಾವತಿಸುವಲ್ಲಿ ತೊಂದರೆಯಾದರೆ ಮರು ಪ್ರಯತ್ನಕ್ಕೆ ಎರಡು ಗಂಟೆ ಸಮಯ ಕೇಳುತ್ತದೆ” ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಸರ್ವರ್ ಕೈಕೊಡುತ್ತಿರುವ ಕಾರಣ ಅರ್ಧ ಗಂಟೆಯಲ್ಲಿ ಮುಗಿಯುತ್ತಿದ್ದ ಕೆಲಸಗಳಿಗೆ ದಿನಗಟ್ಟಲೇ ಕಾಯುವಂತಾಗಿದೆ. ರಿಜಿಸ್ಟ್ರೇಷನ್ ಸಲುವಾಗಿ ಕೆಲಸ ಕಾರ್ಯಗಳಿಗೆ ರಜೆ ಇಡೀ ದಿನ ಕಾದು ಕಾದು ಹೈರಾಣಾಗಿದ್ದೇವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಜನಸಾಮಾನ್ಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಹೈದರ್ ನೀರ್ಕಜೆ, “ಕಳೆದ ಒಂದು ವಾರದಿಂದ ಸಬ್-ರಿಜಿಸ್ಟ್ರಾರ್ ಕಚೇರಿಗೆ ಬಂದು ಹೋಗೋದೇ ಆಗಿದೆ. ಸರ್ಕಾರಕ್ಕೆ ಆದಾಯ ತರುವಂತಹ ಪ್ರಮುಖ ಮೂಲ ಇದು. ದಿನ ನಿತ್ಯ ಕೋಟಿಗಟ್ಟಲೆ ವ್ಯವಹಾರ ಆಗುವಂತಹ ವಿಭಾಗವಿದು. ಆದರೆ, ಇದಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಸಾರ್ವಜನಿಕರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಕೂಡ ಸಿಬ್ಬಂದಿ ನೀಡುತ್ತಿಲ್ಲ” ಎಂದು ಆಕ್ರೋಶ ಹೊರಹಾಕಿದರು.
ಇದನ್ನು ಓದಿದ್ದೀರಾ? ಗೋಕಳ್ಳರನ್ನು ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸುತ್ತೇವೆ: ಸಚಿವ ಮಂಕಾಳ್ ವೈದ್ಯ ವಿವಾದಾತ್ಮಕ ಹೇಳಿಕೆ
“ಕೇಳಿದ್ರೆ ಸರ್ವರ್ ಡೌನ್ ಅಂತ ಹೇಳ್ತಾರೆ. ನಾನು ತೆರಳಿದ್ದ ವಿಟ್ಲ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಲ್ಲ ಕೆಲಸ ಬಿಟ್ಟು ಬಂದಿರುವ ಸಾರ್ವಜನಿಕರು ಪರದಾಡುತ್ತಿದ್ದಾರೆ. ಸರ್ವರ್ ಕೈಕೊಟ್ಟ ಕಾರಣ ಇವತ್ತು ನೋಂದಣಿಗೆ ಅಪಾಯಿಂಟ್‌ಮೆಂಟ್ ಪಡೆದುಕೊಂಡು ಬೆಳ್ಳಂಬೆಳಗ್ಗೆ ಕಚೇರಿಗೆ ಆಗಮಿಸಿದ್ದ ಜನರು ಕಾದು ಕಾದು ಬಳಲಿ, ಮರಳಿ ಹೋಗುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲು ಕೂಡ ಜೋರಾಗಿದೆ. ಕಚೇರಿಯಲ್ಲಿ ಸರಿಯಾದ ಮೂಲಭೂತ ಸೌಕರ್ಯವೂ ಇಲ್ಲ. ಇದೇ ಸಂದರ್ಭದಲ್ಲಿ ಈ ರೀತಿಯ ಸರ್ವರ್ ಸಮಸ್ಯೆಯಾಗಿದೆ. ಸಂಬಂಧಪಟ್ಟವರು ಕೂಡಲೇ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಪ್ರತಿದಿನ ಸರಾಸರಿ 7ರಿಂದ 8 ಸಾವಿರ ದಸ್ತಾವೇಜುಗಳು ನೋಂದಣಿ ಆಗುತ್ತಿತ್ತು. ಅದೇ ರೀತಿ ನಿತ್ಯ ಕನಿಷ್ಠ 40 ಕೋಟಿ ರೂ.ನಿಂದ ಗರಿಷ್ಠ 90 ಕೋಟಿ ರೂ. ವರೆಗೂ ರಾಜಸ್ವ ಸಂಗ್ರಹ ಆಗಿರುವುದು ಇಲಾಖೆಯ ಅಂಕಿ-ಅಂಶದಿಂದ ನೋಡಬಹುದಾಗಿದೆ. ಆದರೀಗ ಕಾವೇರಿ 2.0 ತಾಂತ್ರಿಕ ದೋಷದಿಂದ ಸಂಪೂರ್ಣ ಇಳಿಕೆಯಾಗಿದೆ. ಶನಿವಾರ ಬೆಳಗ್ಗೆಯಿಂದ ಸಂಜೆವರೆಗೂ 252 ಸಬ್ ರಿಜಿಸ್ಟ್ರಾರ್‌ಗಳಲ್ಲಿ ಕೇವಲ 556 ದಸ್ತಾವೇಜುಗಳು ಮಾತ್ರ ನೋಂದಣಿಯಾಗಿದ್ದು, 15 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಇದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿಯೇ ಅತ್ಯಂತ ಕಡಿಮೆ ವ್ಯವಹಾರ ಎಂಬುದು ಕಂದಾಯ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ರಾಜ್ಯದಲ್ಲಿ ಪ್ರತಿದಿನ ಸರಾಸರಿ 7ರಿಂದ 8 ಸಾವಿರ ದಸ್ತಾವೇಜುಗಳು ನೋಂದಣಿ ಆಗುತ್ತಿತ್ತು. ಅದೇ ರೀತಿ ನಿತ್ಯ ಕನಿಷ್ಠ 40 ಕೋಟಿ ರೂ.ನಿಂದ ಗರಿಷ್ಠ 90 ಕೋಟಿ ರೂ. ವರೆಗೂ ರಾಜಸ್ವ ಸಂಗ್ರಹ ಆಗುತ್ತಿತ್ತು. ಆದರೀಗ ಕಾವೇರಿ 2.0 ತಾಂತ್ರಿಕ ದೋಷದಿಂದ ಸಂಪೂರ್ಣ ಇಳಿಕೆಯಾಗಿದೆ. ಕಳೆದ ಶನಿವಾರದಿಂದ ಈವರೆಗೆ ಬೆರಳೆಣಿಕೆಯಷ್ಟು ಮಾತ್ರ ಅರ್ಜಿಗಳು ಪೂರ್ಣಗೊಂಡಿರುವುದಾಗಿ ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್ ಸಚಿವ ಮಂಕಾಳ್ ವೈದ್ಯ ಕೋಮುವಾದಿ ಹೇಳಿಕೆ; ವ್ಯಾಪಕ ಆಕ್ರೋಶ
ಸರ್ವರ್ ಸಮಸ್ಯೆಯನ್ನು ಸರಿಪಡಿಸಲು ಎಂಜಿನಿಯರ್‌ಗಳು ಸೋಮವಾರ ತಡರಾತ್ರಿಯವರೆಗೆ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಆದರೂ ಈ ಸಮಸ್ಯೆ ಬಗೆಹರಿದಿಲ್ಲ. ಯಾವಾಗ ಸರಿ ಹೋಗುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ವರ್ಷವಿಡೀ ಕಾವೇರಿ 2.0 ಸಾಫ್ಟ್‌ವೇರ್‌ನಲ್ಲಿ ಹಲವಾರು ಬಾರಿ ದೋಷಗಳು ಕಂಡುಬಂದಿದ್ದವು. ಆ ಬಳಿಕ ಆನ್‌ಲೈನ್‌ನಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದರಿಂದ ಹೀಗೆ ಆಗಿದೆ ಎಂದು ಆರಂಭದಲ್ಲಿ ಸಮಜಾಯಿಷಿ ನೀಡಲಾಗುತ್ತಿತ್ತು. ಆದರೆ ಸಮಸ್ಯೆ ಇನ್ನೂ ಕೂಡ ಮುಂದುವರಿದಿರುವುದು ಸಾರ್ವಜನಿಕರು ಮಾತ್ರವಲ್ಲದೇ, ಉಪ ನೋಂದಣಿ ಕಚೇರಿಯಲ್ಲಿನ ಸಿಬ್ಬಂದಿಗಳಿಗೂ ಕೂಡ ತಲೆನೋವಾಗಿ ಪರಿಣಮಿಸಿದೆ.
ರಿಜಿಸ್ಟ್ರೇಷನ್ ಸಲುವಾಗಿ ತಮ್ಮ ಕೆಲಸ ಕಾರ್ಯಗಳಿಗೆ ರಜೆ ಹಾಕಿ ಕಾಯುತ್ತಿರುವ ಜನಸಾಮಾನ್ಯರು ಇಡೀ ದಿನ ಕಾದು ಕಾದು ಹೈರಾಣಾಗಿರುವುದರಿಂದ ಉನ್ನತಮಟ್ಟದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದಕ್ಕೆ ಯಾವಾಗ ಪರಿಹಾರ ಸಿಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.
