ಕೇಂದ್ರ ಸರಕಾರವು ರಾಜ್ಯಗಳಿಗೆ ತೆರಿಗೆ ವಂಚನೆಯ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯತ್ನ ಮಾಡುತ್ತಿದೆ. ಒಕ್ಕೂಟ ವ್ಯವಸ್ಥೆ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ಸಾಮಾಜಿಕ ಹೋರಟಗಾರ ಡಾ.ಎಚ್.ವಿ.ವಾಸು ಅಭಿಪ್ರಾಯಪಟ್ಟರು.
ನಗರದ ಸ್ಕೌಟ್ಸ್ ಭವನದಲ್ಲಿ ಲೋಕನಾಯಕ ಜೆ.ಪಿ ವಿಚಾರ ವೇದಿಕೆ ಗುರುವಾರ ಆಯೋಜಿಸಿದ್ದ ಪ್ರಜಾಪ್ರಭುತ್ವದಲ್ಲಿ ರಾಜ್ಯ ಮತ್ತು ಒಕ್ಕೂಟ ವ್ಯವಸ್ಥೆ ಉಳಿಸಲು ಸರ್ಕಾರಗಳ ಸಂಬಂಧ ಮತ್ತು ಜನಾಭಿಪ್ರಾಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಕಳೆದ ಎರಡು ಮೂರು ತಿಂಗಳಿಂದ ರಾಜ್ಯಕ್ಕೆ ಹಣಕಾಸು ಆಯೋಗದ ಸಮಿತಿ ಬಂದು ಹೋದಾಗಿನಿಂದ ರಾಜ್ಯದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಹಣಕಾಸು ಆಯೋಗದ ಸಮಿತಿ ಶಿಫಾರಸ್ಸು ಸಹ ಕೇಂದ್ರ ಸರ್ಕಾರ ಪಾಲಿಸುತ್ತಿಲ್ಲ. ಕೇಂದ್ರ ಸರ್ಕಾರ ಕರ್ನಾಟಕವೂ ಸೇರಿದಂತೆ ಈ ದೇಶದ ಬೇರೆ ಬೇರೆ ರಾಜ್ಯಗಳ ಮೇಲೆ ಸಂವಿಧಾನಾತ್ಮಕವಾಗಿ, ರಾಜಕೀಯಾತ್ಮಕವಾಗಿ, ಶಾಸನಾತ್ಮಕವಾಗಿ, ಸಾಂಸ್ಕೃತಿಕವಾಗಿ ಮತ್ತು ವಿತ್ತೀಯವಾಗಿ ಬಹಳ ದೊಡ್ಡ ದಾಳಿ ನಡೆಸುತ್ತಿದೆ. ನಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಜನಾಂದೋಲನ ಮಾಡುವ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು.
ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರಕ್ಕೆ ಅಧಿಕಾರವಿಲ್ಲ. ಕೇಂದ್ರ ಹಣಕಾಸು ಆಯೋಗದ ನಿರ್ಧಾರದಂತೆ ತೆರಿಗೆ ಹಂಚಿಕೆ ಮಾಡಲಾಗುತ್ತದೆ. ಸೆಸ್ ಮೂಲಕ ಜನರಿಂದ ತೆರಿಗೆ ವಸೂಲಿ ಮಾಡಿ ರಾಜ್ಯಗಳಿಗೆ ವಂಚನೆ ಮಾಡುವ ಮೂಲಕ ರಾಜ್ಯಗಳನ್ನು ಬಡ ರಾಜ್ಯಗಳಾಗಿ ಮಾಡಲು ಸಂಚು ಮಾಡಿದೆ ಎಂದು ಎಚ್ ವಿ ವಾಸು ಆರೋಪಿಸಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ, ದೇಶದ ಭವಿಷ್ಯ ನಿರ್ಮಾಣ ಮಾಡಬೇಕಾದ ಹೊಣೆಗಾರಿಕೆ ಇವತ್ತಿನ ಯುವ ಸಮುದಾಯದ ಜವಾಬ್ದಾರಿಯಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಲು ಜನಾಂದೋಲನಗಳ ಮೂಲಕ ಜಾಗೃತಿ ಸಭೆಗಳು ನಿರಂತರವಾಗಿ ನಡೆಯುತ್ತಲೇ ಇರಬೇಕು. ದೇಶವು ಸದೃಢವಾಗಲು ರಾಜ್ಯಗಳೂ ಸಹ ಸದೃಢಗೊಳ್ಳಬೇಕಾಗಿದೆ. ಇಲ್ಲವಾದರೆ ದೇಶ ಸದೃಢ ಆಗಲು ಸಾಧ್ಯವಾಗುವುದಿಲ್ಲ ಎಂಬುದನ್ನು ಆಳುವ ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ದಕ್ಷಿಣ ಭಾರತ ರಾಜ್ಯಗಳಲ್ಲಿ ಜನಾಂದೋಲನ ನಡೆಸುವ ನಿಟ್ಟಿನಲ್ಲಿ ಚರ್ಚೆಗಳು ಹೆಚ್ಚಾಗಬೇಕು. ಹಕ್ಕು ಮತ್ತು ಜವಾಬ್ದಾರಿ ನಿರ್ವಹಣೆಗಾಗಿ ಪ್ರತಿರೋಧ ಕಾರ್ಯಕ್ರಮಗಳನ್ನು ನಡೆಸಬೇಕು. ಕೇಂದ್ರದಲ್ಲಿ ಬಿಜೆಪಿಯ ದ್ವೇಷದ ರಾಜಕಾರಣ ಹೆಚ್ಚಾಗಿದೆ. ಜನಸಂಖ್ಯಾ ಗಣತಿಯ ಆಧಾರದ ಮೇಲೆ ತೀರ್ಮಾನಗಳು ನಡೆದಿವೆ. ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಬೇಕು. ಅಧಿವೇಶನದಲ್ಲಿ ಆಗಬೇಕಾದ ನೈಜ ಚರ್ಚೆಗಳು ಆಗುತ್ತಿಲ್ಲ. ಈ ಎಲ್ಲಾ ವಿಚಾರಗಳಲ್ಲಿ ಸುಧಾರಣೆ ತರಲು ಒಕ್ಕೂಟ ವ್ಯವಸ್ಥೆ ವಿರೋಧಿಗಳ ವಿರುದ್ದ ಜನಾಂದೋಲನ ಅಗತ್ಯವಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಕೆ.ವಿ ಗೌತಮ್ ಮಾತನಾಡಿ, ದೇಶದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ದ ಗಾಂಧೀಜಿಯವರು ಬಂದ ನಂತರದಿಂದ ಹೋರಾಟದ ಚಳುವಳಿಗಳು ಹೆಚ್ಚಾದವು. ರಾಜ್ಯಗಳಲ್ಲಿನ ಅಧಿಕಾರವನ್ನು ಕಿತ್ತುಕೊಳ್ಳಲು ಕೇಂದ್ರ ಸರಕಾರದಿಂದ ಹುನ್ನಾರ ನಡೆದಿದೆ. ಧರ್ಮದ ರಾಜಕೀಯ ಹೆಚ್ಚಾಗಿ ಅಭಿವೃದ್ಧಿ ಶೂನ್ಯವಾಗಿದೆ. ಸಂವಿಧಾನ ಕೇವಲ ಹೆಸರಿಗೆ ಅಷ್ಟೇ ಸೀಮಿತಗೊಳಿಸಲು ಹೊರಟಿದ್ದಾರೆ. ರಾಷ್ಟ್ರದ ಭವಿಷ್ಯದ ಜೊತೆಗೆ ರಾಜ್ಯಗಳ ಭವಿಷ್ಯ ಉಳಿವಿಗಾಗಿ ಒಕ್ಕೂಟ ವ್ಯವಸ್ಥೆ ಬಲಗೊಳ್ಳಬೇಕಾಗಿದೆ ಎಂದರು.
ಜೆಪಿ ವಿಚಾರ ವೇದಿಕೆ ಮುಖಂಡ ಗದ್ದೆಕಣ್ಣೂರು ದಯಾನಂದ್ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ಕಛೇರಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡುವುದೇ ಬಿಜೆಪಿ ಅಜೆಂಡ ಆಗಿದೆ. ಇದಕ್ಕೆ ಪ್ರತಿರೋಧ ಶಕ್ತಿಗಳು ಒಗ್ಗಟ್ಟಾಗಬೇಕಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ನಗರಸಭೆ ಚುನಾವಣೆ: ಧನದಾಹಕ್ಕೆ ಸೋತ ಕಾಂಗ್ರೆಸ್ ಸದಸ್ಯರು; ಬಿಜೆಪಿಗೆ ಗರಿಷ್ಠ ಮತ
ವೇದಿಕೆಯಲ್ಲಿ ಹಿರಿಯ ದಲಿತ ಮುಖಂಡರಾದ ಟಿ.ವಿಜಿಕುಮಾರ್, ಶ್ರೀಕೃಷ್ಣ, ಮೌಲ್ವಿ ಅತೀಖ್ ಉರ್ ರೆಹಮಾನ್, ಸಂಘಟಕರಾದ ಉಮಾಶಂಕರ್, ಅನ್ವರ್ ಪಾಷ, ದೊಡ್ಡಹಸಾಳ ರಘುಕುಮಾರ್, ಕೋಡಿರಾಮಸಂದ್ರ ಚಂದ್ರಶೇಖರ್, ಸಂದೀಪ್ ಶ್ರೀಕೃಷ್ಣ, ಬೀರಮಾನಹಳ್ಳಿ ಚೌಡರೆಡ್ಡಿ, ಜೈದೀಪ್ ಮುಂತಾದವರು ಇದ್ದರು.