‘ನನ್ನ ಮಣ್ಣು-ನನ್ನ ದೇಶ’ ಅಭಿಯಾನದ ಮೂಲಕ ಕ್ಷೇತ್ರದಲ್ಲಿ ಇರುವ ಗ್ರಾಮ ಪಂಚಾಯತಿಗಳಲ್ಲಿ ಮಣ್ಣನ್ನು ಸಂಗ್ರಹಿಸಿ ನಮ್ಮ ದೇಶದ ಹಿತಕ್ಕಾಗಿ ಮಣ್ಣನ್ನು ನೀಡುವ ಮೂಲಕ ಏಕತೆ ಸಾರಲಾಗುತ್ತದೆ. ಪ್ರತಿಯೊಂದು ಗ್ರಾಮಗಳ ಪವಿತ್ರ ಮಣ್ಣಿನಿಂದ ಹುತಾತ್ಮರ ಸ್ಮಾರಕ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮಣ್ಣು ಕೊಡುವ ಮೂಲಕ ಹುತಾತ್ಮರನ್ನು ನೆನೆಯುವ ಕೆಲಸ ಮಾಡಬೇಕು ಎಂದು ಶಾಸಕ ಎಚ್.ಎಂ ಗಣೇಶ್ ಪ್ರಸಾದ್ ಹೇಳಿದ್ದಾರೆ.
ಗುಂಡ್ಲುಪೇಟೆ ತಾಲೂಕು ಪಂಚಾಯತಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯಿತಿ, ನೆಹರು ಯುವ ಕೇಂದ್ರ ಯುವಜನ ಹಾಗೂ ಕ್ರೀಡೆ ಇಲಾಖೆ ಹಾಗೂ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸಹಯೋಗದಲ್ಲಿ ಅಭಿಯಾನದ ಅಮೃತ ಕಳಸ ಯಾತ್ರೆಗೆ ಚಾಲನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಾತ್ರೆಗೆ ಶಾಸಕ ಗಣೇಶ್ ಪ್ರಸಾದ್ ಚಾಲನೆ ನೀಡಿದರು.
ಜಿಲ್ಲಾ ಯೋಜನೆ ನಿರ್ದೇಶಕ ಕಿರಣ್ ಪಣಿಕರ್ ಮಾತನಾಡಿ, “ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮವು ತಾಲೂಕಿನ ಪ್ರತಿ ಗ್ರಾಮದಿಂದ ಮಣ್ಣು ಶೇಖರಣೆ ಮಾಡಿ, ಜಿಲ್ಲೆಯಿಂದ ರಾಜ್ಯ ಹಾಗೂ ದೆಹಲಿಗೆ ಕಳುಹಿಸುವ ವಿಶಿಷ್ಟ ಕಾರ್ಯಕ್ರಮವಾಗಿದೆ. ಇದು ದೇಶಪ್ರೇಮವು ಪ್ರಜ್ವಲಿಸುವಂತೆ ಮಾಡುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ರಾಮಲಿಂಗಯ್ಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಶಿಧರ್ ವಿವಿಧ ಗ್ರಾಮ ಪಂಚಾಯಿತಿ ಪಿಡಿಓಗಳು ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಇದ್ದರು.