ವಿಶ್ವ ವಿಖ್ಯಾತ ಮೈಸೂರಿನ ದಸರಾ ಅಕ್ಟೋಬರ್ 15ರಿಂದ ಆರಂಭವಾಗುತ್ತಿದ್ದು, ಬಂಡಿಪುರ ಹುಲಿ ಸಂರಕ್ಷಣಾ ವ್ಯಾಪ್ತಿಯ ಮದ್ದೂರು ವಲಯದ ರೋಹಿತ್ ಮತ್ತು ಹಿರಣ್ಯ ಎಂಬ ಹೆಸರಿನ ಆನೆಗಳನ್ನು ಮೈಸೂರಿಗೆ ಕಳುಹಿಸಿಕೊಡಲಾಗುತ್ತಿದೆ. ಈ ಆನೆಗಳು ಒಂದು ತಿಂಗಳ ಕಾಲ ಮೈಸೂರಿನ ಅರಮನೆಯಲ್ಲಿದ್ದು ದಸರಾ ಜಂಬೂಸವಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ ಎಂದು ಗುಂಡ್ಲುಪೇಟೆ ಶಾಸಕ ಎಚ್ ಎಂ ಗಣೇಶ್ ಪ್ರಸಾದ್ ತಿಳಿಸಿದರು.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದಿಂದ ನಾಡಹಬ್ಬ ದಸರಾಕ್ಕೆ ಹೊರಟ ಗಜ ಪಯಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಂಡೀಪುರ ಹುಲಿ ಯೋಜನೆಯ ಸಂರಕ್ಷಣೆಯ ಪ್ರಭಾರ ನಿರ್ದೇಶಕ ಪ್ರಭಾಕರನ್ ಮಾತನಾಡಿ, “ಮದ್ದೂರು ವಲಯದಿಂದ ಎರಡು ಆನೆಗಳನ್ನು ಮೈಸೂರಿನ ದಸರಾ ಕಾರ್ಯಕ್ರಮಕ್ಕೆ ಕಳುಹಿಸಿಕೊಡಲಾಗುತ್ತಿದ್ದು, ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲಿರುವ ಸಾಕಾನೆಗಳಿಗೆ ಎಲ್ಲ ರೀತಿಯ ತರಬೇತಿ ನೀಡಲಾಗಿದೆ. ರಾಂಪುರ ಆನೆ ಶಿಬಿರದ ಸೌಮ್ಯ ಸ್ವಭಾವದ ಆನೆಗಳು ಯಶಸ್ವಿಯಾಗಿ ದಸರಾದಲ್ಲಿ ಭಾಗವಹಿಸಿ ವಾಪಸ್ಸಾಗಲಿ ಶುಭವಾಗಲಿ” ಎಂದು ಹಾರೈಸಿದರು.
ಈ ಸುದ್ದಿ ಓದಿದ್ದೀರಾ? ಕುಳುವ ಸಮುದಾಯವನ್ನು ಎಸ್.ಸಿ ಪಟ್ಟಿಯಿಂದ ತೆಗೆಯಲು ಸಾಧ್ಯವೇ ಇಲ್ಲ: ಸಿಎಂ ಸಿದ್ದರಾಮಯ್ಯ
ಗಜ ಪಯಣಕ್ಕೆ ವಿಜೃಂಭಣೆಯಿಂದ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ದಂಡಾಧಿಕಾರಿಗಳಾದ ಟಿ ರಮೇಶ್ ಬಾಬು ಮತ್ತು ಎಸಿಎಫ್ ಪರಮೇಶ್ವರ್ ಮತ್ತು ನವೀನ್ ರವೀಂದ್ರ ವಲಯ ಅರಣ್ಯ ಅಧಿಕಾರಿ ನವೀನ್ ಸೇರಿದಂತೆ ಇತರರು ಇದ್ದರು.