ವಾಲ್ಮೀಕಿ ಜಯಂತಿ, ಗ್ರಾಮೀಣ ದಸರಾ ಹಾಗೂ ಜನತಾದರ್ಶನ ನಡೆಸಲು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ತಾಲೂಕು ಸಭಾ ಭವನದಲ್ಲಿ ಶಾಸಕ ಗಣೇಶ್ ಪ್ರಸಾದ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು “ವಾಲ್ಮೀಕಿ ಜಯಂತಿ ವಿಚಾರವಾಗಿ ನಾಯಕ ಸಮಾಜದ ಯಜಮಾನರುಗಳ ತೀರ್ಮಾನದಂತೆ ಅಕ್ಟೋಬರ್ 28ರಂದು ಗುಂಡ್ಲುಪೇಟೆ ತಾಲೂಕು ಕಚೇರಿಯಲ್ಲಿ ಸರಳವಾಗಿ ಆಚರಣೆ ಮಾಡಲಾಗುತ್ತದೆ. ಹಾಗೂ ಸಮಾಜದ ಹಿರಿಯರ ಮತ್ತು ಮುಖಂಡರ ಅಪೇಕ್ಷೆಯಂತೆ ನಾಯಕ ಸಮುದಾಯದ ಸ್ವಾಮೀಜಿ ಮತ್ತು ಸಚಿವರುಗಳು ಸೇರಿದಂತೆ ದಿನಾಂಕ ನಿಗದಿ ಪಡಿಸಿ ತಾಲೂಕಿನಲ್ಲಿ ಬಹಳ ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುತ್ತದೆ” ಎಂದು ತಿಳಿಸಿದರು.
ವಾಲ್ಮೀಕಿ ಭವನದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕರು “ವಾಲ್ಮೀಕಿ ಭವನ ಕಾಮಗಾರಿ ಅಪೂರ್ಣಗೊಂಡಿದ್ದು, ಮುಂದಿನ ಎರಡು ಮೂರು ತಿಂಗಳಲ್ಲಿ ಸಚಿವರ ಜೊತೆಗೆ ಚರ್ಚೆ ಮಾಡಿ ಅನುದಾನ ಮಂಜೂರು ಮಾಡಲಾಗುವುದು” ಎಂದು ಹೇಳಿದ ಅವರು ವಾಲ್ಮೀಕಿ ಜಯಂತಿ ಆಚರಣೆ ದಿನ ಊಟ ಮತ್ತು ಶಾಮಿಯಾನದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು
ಗ್ರಾಮೀಣ ದಸರಾ ಅಕ್ಟೋಬರ್ 20ಕ್ಕೆ ದಿನಾಂಕ ನಿಗದಿಪಡಿಸಿದ ಬಳಿಕ ಸಾರ್ವಜನಿಕರು, ʼರಸ್ತೆಯಲ್ಲಿ ವಿದ್ಯುತ್ ಅಲಂಕಾರ ಮಾಡುವ ಬಗ್ಗೆ ತಿಳಿಸಿದರು. ಗುಂಡ್ಲುಪೇಟೆ ಗಡಿ ತಾಲೂಕು ಆಗಿರುವ ಕಾರಣ ಸ್ವಾಗತ ಕಮಾನು ಅಳವಡಿಸುವಂತೆ ಹಾಗೂ ಕಲಾತಂಡಗಳನ್ನು ಒಳಗೊಂಡಂತೆ ಕವಿಗೋಷ್ಠಿ, ರೈತರ ದಸರಾ ಹಬ್ಬದ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಬೇಕುʼ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, “ಸರ್ಕಾರದಿಂದ ಗ್ರಾಮೀಣ ದಸರಾ ಆಚರಣೆಗೆ ಸಣ್ಣ ಪ್ರಮಾಣದ ಅನುದಾನ ಸಿಗಲಿದ್ದು, ಅದರ ಚೌಕಟ್ಟಿನಲ್ಲಿ ನಡೆಸಬೇಕು. ಅಲ್ಲದೇ ಗ್ರಾಮೀಣ ದಸರಾ ಸೇರಿದಂತೆ ಇತರ ಕಾರ್ಯಕ್ರಮಗಳು ಸಂಜೆ 4ರಿಂದ ರಾತ್ರಿ 10ರವರೆಗೆ ಜರುಗುವುದರಿಂದ 6 ಗಂಟೆಯೊಳಗೆ ಸಮಿತಿ ಕಾರ್ಯಕ್ರಮ ನಡೆಸುವ ಬಗ್ಗೆ ಪೂರ್ವ ತಯಾರಿ ಮಾಡಿಕೊಳ್ಳಬೇಕು” ಎಂದು ತಾಲೂಕು ದಂಡಾಧಿಕಾರಿಗಳಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಪೊಲೀಸ್ ಇಲಾಖೆ; ಮಹಿಷ ದಸರಾಗೆ ಸಮ್ಮತಿ
ಗ್ರಾಮೀಣ ಭಾಗದ ಪ್ರತಿಭೆಗಳನ್ನು ಬಳಸಿಕೊಂಡು ವೇದಿಕೆಯಲ್ಲಿ ಕಂಸಾಳೆ, ಡೊಳ್ಳು ಕುಣಿತ, ಗಾಯನ ಸೇರಿದಂತೆ ಇತರ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ತಾಲೂಕು ದಂಡಾಧಿಕಾರಿ ಟಿ ರಮೇಶ್ ಬಾಬು, ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡೇಗೌಡ, ಪುರಸಭೆ ಮುಖ್ಯ ಅಧಿಕಾರಿ ವಸಂತ್ ಕುಮಾರಿ, ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ, ಪುರಸಭೆ ಮಾಜಿ ಅಧ್ಯಕ್ಷರುಗಳಾದ ಪಿ ಗಿರೀಶ್ ಮತ್ತು ಮಲ್ಲೇಶ್, ಪುರಸಭೆ ಸದಸ್ಯ ಕುಮಾರ್ ಪಟ್ಟಬಿ, ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ್, ಸಂಘ ಸಂಸ್ಥೆಯ ಅಧ್ಯಕ್ಷರುಗಳು ಸೇರಿದಂತೆ ಇತರರು ಇದ್ದರು.