ಮೋ-ಶಾ ಭಾರತದಲ್ಲಿ ತಲೆಯೆತ್ತಿ ಮೆರೆದಿದೆ ‘ಮೆಕಾರ್ಥಿಯಿಸಂʼ

Date:

ಇತಿಹಾಸ ಪುನರಾವರ್ತನೆ ಆಗುತ್ತದೆ ಎಂಬ ಮಾತಿದೆ. ಅಂತಹ ಪುನರಾವರ್ತನೆ ಭಾರತದಲ್ಲಿ ಆಗಬಾರದು ಎಂಬ ನಿಯಮವೇನೂ ಇಲ್ಲ. ‘ನ್ಯೂಸ್ ಕ್ಲಿಕ್’ ಎಂಬ ಗುಬ್ಬಿಯ ಮೇಲೆ ಯುಎಪಿಯ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿರುವ ಪ್ರಕರಣದ ಹಿನ್ನೆಲೆಯಲ್ಲಿ ಮೆಕಾರ್ಥಿಯಿಸಂ ಮತ್ತು ಹೂವರಿಸಂಗಳನ್ನು ನೆನಪು ಮಾಡಿಕೊಳ್ಳಬೇಕಾಯಿತು.

ಅಮೆರಿಕೆಯಲ್ಲಿ 1950ರ ದಶಕದ ಆರಂಭ ದಿನಗಳು. ಜೋಸೆಫ್ ಮೆಕಾರ್ಥಿ (Joseph McCarthy) ಎಂಬ ಸೆನೆಟರ್ ಇದ್ದ. ಅಮೆರಿಕೆಯ ಜನತಂತ್ರವನ್ನು ಬುಡಮೇಲು ಮಾಡಲು ಪಿತೂರಿ ನಡೆಸಿದ್ದಾರೆಂಬ ಮಿಥ್ಯ ಪ್ರಚಾರವೊಂದು ಆ ಹೊತ್ತಿಗೆ ಭುಗಿಲೆದ್ದಿತ್ತು. ಅಮೆರಿಕ ಸರ್ಕಾರ, ಸಿ ಐ ಎ, ಸರ್ಕಾರಿ ಆಕಾಶವಾಣಿ ‘ವಾಯ್ಸ್ ಅಫ್ ಅಮೆರಿಕಾ’ ಇತರೆ ಸಂಸ್ಥೆಗಳಿಗೆ ಸೋವಿಯತ್ ಒಕ್ಕೂಟಕ್ಕೆ ನಿಷ್ಠೆಯಿರುವ ಕಮ್ಯೂನಿಸ್ಟರು ನುಸುಳಿದ್ದಾರೆಂದು ಗುಲ್ಲೆದ್ದಿತ್ತು. ಈ ಮಹಾಮಿಥ್ಯಾಪ್ರಚಾರದ ತಲೆಯಾಳು ಇದೇ ಈ ಜೋಸೆಫ್‌ ಮೆಕಾರ್ಥಿ.

ಇವನ ಸುಳ್ಳುಪ್ರಚಾರಕ್ಕೆ ಅಂದಿನ ಅಮೆರಿಕೆಯ ಬಹುಪಾಲು ಮೀಡಿಯಾ ಧ್ವನಿವರ್ಧಕ ಹಿಡಿಯಿತು. ಹೀಗಾಗಿ ಮೆಕಾರ್ಥಿಯಿಸಂ ʼಜನಪ್ರಿಯ’ವಾಯಿತು. ಕಮ್ಯೂನಿಸ್ಟರು ಎಂಬ ಹಣೆಪಟ್ಟಿ ಹಚ್ಚಿಸಿಕೊಂಡು ಸಾವಿರಾರು ಮಂದಿ ಮೆಕಾರ್ಥಿಯ ‘ಕಪ್ಪುಪಟ್ಟಿ’ ಸೇರಿ ಉದ್ಯೋಗಗಳನ್ನು ಕಳೆದುಕೊಂಡರು. ಅಂದಿನ ಕಾಲದ ಅನೇಕ ಪ್ರಸಿದ್ಧ ನಟರು, ನಿರ್ದೇಶಕರು, ಹಾಡುಗಾರರು, ಕಲಾವಿದರು, ಸಂಪಾದಕರು, ರಂಗಕರ್ಮಿಗಳು ಈ ಪಟ್ಟಿಯಲ್ಲಿರುತ್ತಾರೆ. ಆದರೆ ಅಸಲು ಸಂಗತಿಯೆಂದರೆ ಹೀಗೆ ಬಲಿಪಶುಗಳಾದವರ ಪೈಕಿ ಯಾರೂ ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿರಲಿಲ್ಲ. ಆದರೆ ಮೆಕಾರ್ಥಿಯ ಬಣ್ಣದ ಮಾತುಗಳು ಮತ್ತು ಚತುರೋಕ್ತಿಗಳಿಗೆ ಅಮಾಯಕರು ಬಲಿಯಾಗಿ ಜನಾಕ್ರೋಶಕ್ಕೆ ತುತ್ತಾದದ್ದು ವಾಸ್ತವ ಮತ್ತು ಕ್ರೂರ ವಿಡಂಬನೆ.

‘ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ’ ಎಂದು ಅಮೆರಿಕೆಯ ಜನಸಾಮಾನ್ಯರು ಗಣನೀಯ ಪ್ರಮಾಣದಲ್ಲಿ ಮೆಕಾರ್ಥಿಯಿಸಂನ್ನು ಬೆಂಬಲಿಸುತ್ತಾರೆ. 1954ರಲ್ಲಿ ನಡೆದ ಗ್ಯಾಲಪ್ ಸಮೀಕ್ಷೆಯಲ್ಲಿ ಶೇ.50ರಷ್ಟು ಅಮೆರಿಕನ್ನರು ಮೆಕಾರ್ಥಿಯನ್ನು ಬೆಂಬಲಿಸುವರೆಂಬ ಮಾಹಿತಿ ಹೊರಬೀಳುತ್ತದೆ. ಬಲಪಂಥೀಯ ರಿಪಬ್ಲಿಕನ್ ಪಕ್ಷದವರು ಮೆಕಾರ್ಥಿಯನ್ನು ಇಷ್ಟಪಡುತ್ತಾರೆ. ಅಧ್ಯಕ್ಷ ಐಸೆನ್ ಹಾವರ್ ಕೂಡ ಈ ಪ್ರಚಾರದ ಬಿರುಗಾಳಿಯ ಮುಂದೆ ಅಸಹಾಯಕನಾಗಿರುತ್ತಾನೆ. ಸದನ ಸಮಿತಿಯೊಂದರ (House of Un-American Activities Committees) ಅಧ್ಯಕ್ಷನಾಗಿ ಮೆಕಾರ್ಥಿ ‘ಶಂಕಿತ’ ಕಮ್ಯೂನಿಸ್ಟರ ವಿಚಾರಣೆಗಳ ಸರಣಿಯನ್ನೇ ನಡೆಸಿ ತೀರ್ಪು ನೀಡಿರುತ್ತಾನೆ. ಕಮ್ಯೂನಿಸ್ಟ್ ವಿಚಾರದ ಪ್ರಭಾವವಿರುವ ಪುಸ್ತಕಗಳಿಗಾಗಿ ಅಮೆರಿಕೆಯ ಗ್ರಂಥಾಲಯಗಳನ್ನು ಶೋಧಿಸಲಾಗುತ್ತದೆ. ಶಂಕಿತ ಪುಸ್ತಕಗಳನ್ನು ಸುಟ್ಟು ಹಾಕಲಾಗುತ್ತದೆ. ಶಂಕಿತ ಹಾಲಿವುಡ್ ನಟರು, ವಿಶ್ವವಿದ್ಯಾಲಯಗಳು, ಶಾಲೆಗಳ ಉದ್ಯೋಗಿಗಳ ಕಪ್ಪುಪಟ್ಟಿಗಳು ತಯಾರಾಗುತ್ತವೆ. ಈ ಪಟ್ಟಿಯನ್ನು ಆಧರಿಸಿ ಸಿನೆಮಾ ಉದ್ಯಮ ಸಾವಿರಾರು ಮಂದಿಗೆ ಉದ್ಯೋಗ ನಿರಾಕರಿಸುತ್ತದೆ. ಆದರೆ ಕಪ್ಪುಪಟ್ಟಿ ಎಂಬುದೊಂದು ಇದೆಯೆಂದು ಯಾರೂ ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

The Communist Control Act of 1954 ಎಂಬ ಕಾಯಿದೆಯು ಸೆನೆಟ್‌ನಲ್ಲಿ ಹೆಚ್ಚು ಚರ್ಚೆಯೇ ಇಲ್ಲದೆ ಅಂಗೀಕಾರವಾಗುತ್ತದೆ. ಕಮ್ಯೂನಿಸ್ಟರು ಮತ್ತು ತತ್ಸಂಬಂಧಿ ಸಂಘಟನೆಗಳಿಗೆ ಯಾವುದೇ ಬಗೆಯ ಹಕ್ಕುಗಳನ್ನು ನಿರಾಕರಿಸಲಾಗುತ್ತದೆ. ದೇಶನಿಷ್ಠೆಯನ್ನು ಪರಿಶೀಲಿಸುವ ಸಮಿತಿಗಳನ್ನು ರಚಿಸಲಾಗುತ್ತದೆ. ಪುರಾವೆಗಳು ಪ್ರಶ್ನಾರ್ಹವಾಗಿದ್ದರೂ, ಸಂಶಯಕ್ಕೆ ಬಲಿಯಾದ ವ್ಯಕ್ತಿ ಅಥವಾ ಸಂಸ್ಥೆಗಳು ಅಪಾಯಕಾರಿ ಎಂಬ ಆಪಾದನೆಗಳು ಅತಿ ಉತ್ಪ್ರೇಕ್ಷೆಯಿಂದ ಕೂಡಿದ್ದರೂ ಅವರ ಮೇಲೆ ಸರ್ಕಾರಿ ದಾಳಿಗಳು ಎಗ್ಗಿಲ್ಲದೆ ನಡೆಯುತ್ತವೆ. ಅವರನ್ನು ಜೈಲಿಗೆ ತಳ್ಳಲಾಯಿತು. ವಾಷಿಂಗ್ಟನ್ ಬುಕ್ ಶಾಪ್ ಅಸೋಸಿಯೇಶನ್ ಎಂಬ ಸಂಸ್ಥೆಯೊಂದರ ಸದಸ್ಯರನ್ನು ತೀವ್ರ ಶಂಕೆಗೆ ಗುರಿ ಮಾಡಲಾಗುತ್ತದೆ. ವಾಸ್ತವದಲ್ಲಿ ಸಾಹಿತ್ಯ, ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ನಡೆಸುತ್ತಿದ್ದ ಈ ಸಂಸ್ಥೆ ರಿಯಾಯಿತಿ ದರಗಳಲ್ಲಿ ಪುಸ್ತಕ ಮಾರಾಟದಲ್ಲಿ ತೊಡಗಿರುತ್ತದೆ. ಈ ದಮನ ದಬ್ಬಾಳಿಕೆಗಳನ್ನು ನ್ಯಾಯಾಲಯಗಳ ವಿಚಾರಣೆ ಮತ್ತು ತೀರ್ಪುಗಳು ಕೊನೆಗೊಳಿಸುತ್ತವೆ. ಸಂಬಂಧಪಟ್ಟ ಕಾನೂನುಗಳನ್ನು ಸಂವಿಧಾನಬಾಹಿರ ಎಂದು ಹೊಡೆದು ಹಾಕಲಾಗುತ್ತದೆ. ಅನಧಿಕೃತ ಕಪ್ಪುಪಟ್ಟಿಗಳನ್ನು ಅಕ್ರಮವೆಂದು ಸಾರಲಾಗುತ್ತದೆ. ಆದರೆ ಆ ಹೊತ್ತಿಗಾಗಲೇ ಅಮಾಯಕ ಬದುಕುಗಳು ನಾಶವಾಗಿದ್ದವು.

ಅಮೆರಿಕನ್ ಸಮಾಜದ ಇತರೆ ಅನೇಕ ಪ್ರತಿಗಾಮಿ, ಬಲಪಂಥೀಯ ಶಕ್ತಿಗಳು, ಮಧ್ಯಮವರ್ಗಿ ಮಹಿಳಾ ಸಂಘಟನೆಗಳು ಮೆಕಾರ್ಥಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸುತ್ತವೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮತ್ತು ಮಹಿಳೆಯರಿಗೆ ಮತದಾನದ ಹಕ್ಕು ನೀಡಿಕೆಯಂತಹ ಪ್ರಗತಿಪರ ಮತ್ತು ಮಾನವೀಯ ಸುಧಾರಣೆಗಳನ್ನು ವಿರೋಧಿಸಿದ ಶಕ್ತಿಗಳಿವು. ಈ ಸುಧಾರಣೆಗಳಿಗೆ ಕೆಂಪು ಕಾರಸ್ಥಾನಗಳು (Red Plots) ಮತ್ತು ಕಮ್ಯೂನಿಸ್ಟ್ ಎಂದು ಹೆಸರಿಡುತ್ತವೆ. ಸಲಿಂಗಕಾಮವನ್ನು ಮಾನಸಿಕ ಕಾಯಿಲೆ ಎಂದು ಬಣ್ಣಿಸುತ್ತವೆ. ಸಲಿಂಗ ಕಾಮಿಗಳನ್ನು ವಿಕೃತ ಕಾಮಿಗಳು ಎಂದು ಖಂಡಿಸುತ್ತವೆ. ಸಲಿಂಗಕಾಮಿ ಸರ್ಕಾರಿ ಉದ್ಯೋಗಿಗಳನ್ನು ಬೇಟೆಯಾಡಲಾಗುತ್ತದೆ. ಮೆಕಾರ್ಥಿಯ ಮಿಥ್ಯಾಪ್ರಚಾರ ಬಹುಕಾಲ ಬಾಳಲಿಲ್ಲ. ಅವನ ಆಪಾದನೆಗಳು ಸುಳ್ಳುಗಳ ಕಂತೆಯಲ್ಲದೆ ಬೇರೇನೂ ಅಲ್ಲ ಎಂದು ಜನಸಮೂಹ ಅರಿತುಕೊಳ್ಳುತ್ತದೆ. ತರುವಾಯ ಎಡ್ವರ್ಡ್ ಆರ್.ಮರ್ರೋ ಎಂಬ ಪತ್ರಕರ್ತನೊಬ್ಬ ಮೆಕಾರ್ಥಿಯ ಮುಖವಾಡವನ್ನು ಯಶಸ್ವಿಯಾಗಿ ಕಳಚುತ್ತಾನೆ.

ದುರುಳ ಮೆಕಾರ್ಥಿಯನ್ನು ನಗ್ನಗೊಳಿಸುವ ತನ್ನ See it Now ಎಂಬ ಜನಪ್ರಿಯ ಟೀವಿ ಶೋನಲ್ಲಿ ಮರ್ರೋ ಹೀಗೆ ಹೇಳುತ್ತಾನೆ- “ಭಿನ್ನಮತ ಅಥವಾ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ದೇಶವಿರೋಧಿ ಅಥವಾ ದೇಶದ್ರೋಹಿ ಎಂದು ನಾವು ಭಾವಿಸಕೂಡದು. ಕೇವಲ ಆಪಾದನೆಯೇ ಪುರಾವೆಯಾಗಿ ಬಿಡುವುದಿಲ್ಲ ಮತ್ತು ಶಿಕ್ಷೆಯಾಗುವುದಕ್ಕೆ ಪುರಾವೆ ಮತ್ತು ಕಾನೂನು ಪ್ರಕ್ರಿಯೆಯೇ ಮುಖ್ಯ ಆಧಾರ. ಈ ಬಹುಮುಖ್ಯ ಸಂಗತಿಗಳನ್ನು ನಾವು ಮರೆಯಬಾರದು. ನಾವು ಭಯಕ್ಕೆ ಬಲಿಯಾಗಿ ಅನ್ಯಾಯ ಮತ್ತು ಕುತರ್ಕವನ್ನು ಬೆಂಬಲಿಸಕೂಡದು. ನಮ್ಮ ಇತಿಹಾಸ ಮತ್ತು ಸಿದ್ಧಾಂತಗಳನ್ನು ಆಳವಾಗಿ ಅಗೆದು ಬಗೆದು ನೋಡಿದರೆ ನಮ್ಮದು ಭಯಪೀಡಿತ ಸಮಾಜ ಅಲ್ಲ ಎಂದು ಅರ್ಥವಾಗುತ್ತದೆ”.

ಅಮೆರಿಕನ್ ಸೆನೆಟ್ ಮೆಕಾರ್ಥಿಗೆ ವಾಗ್ದಂಡನೆ ವಿಧಿಸಿತು. 1957ರಲ್ಲಿ ಮರಣ ಹೊಂದಿದರೂ ಅವನ ಹೆಸರು ಕುಖ್ಯಾತವಾಗಿ ಉಳಿಯುತ್ತದೆ. ‘ಮೆಕಾರ್ಥಿಯಿಸಮ್’ (McCarthyism) ಎಂಬ ಹೊಸ ಪದ ಇಂಗ್ಲಿಷ್ ನಿಘಂಟುಗಳನ್ನು ಸೇರುತ್ತದೆ. ರಾಜಕೀಯ ಎದುರಾಳಿಗಳ ಮೇಲೆ ಆಧಾರವೇ ಇಲ್ಲದ ಆಪಾದನೆಗಳನ್ನು ಹೊರಿಸಿ ಅವುಗಳಿಗೆ ವ್ಯಾಪಕ ಪ್ರಚಾರ ನೀಡಿ ಹೆಸರು ಕೆಡಿಸಿ ಚಾರಿತ್ರ್ಯವಧೆ ಮಾಡುವ ಕೃತ್ಯವೇ ಮೆಕಾರ್ಥಿಯಿಸಂ ಎಂದು ಈ ಪದವನ್ನು ನಿಘಂಟುಗಳು ಅರ್ಥೈಸಿವೆ.

ಕಾಲ ಉರುಳಿದಂತೆ ಮೆಕಾರ್ಥಿಯಿಸಂ ಪದವನ್ನು ಹೂವರಿಸಂ ಎಂಬುದಾಗಿ ಬದಲಾಯಿಸಬೇಕೆಂಬ ವಾದ ಎದ್ದಿತ್ತು. ಅಮೆರಿಕೆಯ ಅಧ್ಯಕ್ಷ ಹ್ಯಾರಿ ಟ್ರೂಮನ್ ಕಾಲದ ಎಫ್ ಬಿ ಐ ನಿರ್ದೇಶಕ ಎಡ್ಗರ್ ಹೂವರ್. ಮೆಕಾರ್ಥಿಯಿಸಂನ್ನು ಎಡ್ಗರ್ ಹೂವರ್ ಇನ್ನೂ ದೊಡ್ಡ ಪ್ರಮಾಣದಲ್ಲಿ ಮುಂದುವರೆಸುತ್ತಾನೆ. ಇವನ ಸಂಶಯಕ್ಕೆ ಬಲಿಯಾಗಿ ಸಾವಿರಾರು ಸರ್ಕಾರಿ ನೌಕರರು ಉದ್ಯೋಗ ಕಳೆದುಕೊಳ್ಳುತ್ತಾರೆ. ಕಮ್ಯೂನಿಸ್ಟರ ಕುರಿತು ಮಾಹಿತಿ ಶೋಧನೆಗೆ ಮನೆ ಬೀಗ ಒಡೆದು ಒಳನುಗ್ಗಿ ತನಿಖೆ ಮಾಡುವ, ಅಂಚೆಯನ್ನು ತೆರೆದು ಓದುವ ಹಾಗೂ ಅಕ್ರಮವಾಗಿ ಟೆಲಿಪೋನ್ ಕದ್ದಾಲಿಸುವ ಕೃತ್ಯಗಳಲ್ಲಿ ಎಫ್ ಬಿ ಐ ತೊಡಗುತ್ತದೆ. ಆದರೆ ಅಮೆರಿಕೆಯ ಸುಪ್ರೀಮ್ ಕೋರ್ಟ್ ತೀರ್ಪುಗಳು, ನಿರ್ದೇಶನಗಳು ಹೂವರ್‌ನ ಕೈಗಳನ್ನು ಕಟ್ಟಿ ಹಾಕುತ್ತದೆ. ಹತಾಶನಾಗುವ ಹೂವರ್ ದಾಖಲೆ ದಸ್ತಾವೇಜುಗಳ ಫೋರ್ಜರಿ, ಅನಾಮಧೇಯ ಪತ್ರಗಳನ್ನು ಬರೆಯಿಸಿ ವದಂತಿಗಳನ್ನು ಹುಟ್ಟು ಹಾಕುವುದು, ಆಯ್ದ ಮಾಹಿತಿಯನ್ನು ಮೀಡಿಯಾಕ್ಕೆ ತಲುಪಿಸುವ ಹೊಲಸು ತಂತ್ರಗಳ (‘Dirty Tricks’) ಯೋಜನೆಯನ್ನು ಜಾರಿಗೊಳಿಸುತ್ತಾನೆ. ಇದಕ್ಕೆ COINTELPRO ಎಂಬ ಹೆಸರಿಡುತ್ತಾನೆ. 1971ರ ತನಕ ಈ ಯೋಜನೆ ಜಾರಿಯಲ್ಲಿರುತ್ತದೆ. ಹೀಗಾಗಿ ಇತಿಹಾಸಕಾರರು ‘ಮೆಕಾರ್ಥಿಯಿಸಂ’ ಪದಕ್ಕೆ ಪರ್ಯಾಯವಾಗಿ ‘ಹೂವರಿಸಂ’ ಬಳಸುವಂತೆ ಸೂಚಿಸಿದ್ದಾರೆ.

ಇತಿಹಾಸ ಪುನರಾವರ್ತನೆ ಆಗುತ್ತದೆ ಎಂಬ ಮಾತಿದೆ. ಅಂತಹ ಪುನರಾವರ್ತನೆ ಭಾರತದಲ್ಲಿ ಆಗಬಾರದು ಎಂಬ ನಿಯಮವೇನೂ ಇಲ್ಲ. ‘ನ್ಯೂಸ್ ಕ್ಲಿಕ್’ ಎಂಬ ಗುಬ್ಬಿಯ ಮೇಲೆ ಯುಎಪಿಯ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿರುವ ಪ್ರಕರಣದ ಹಿನ್ನೆಲೆಯಲ್ಲಿ ಮೆಕ್ಕಾರ್ಥಿಯಿಸಂ ಮತ್ತು ಹೂವರಿಸಂ ಗಳನ್ನು ನೆನಪು ಮಾಡಿಕೊಳ್ಳಬೇಕಾಯಿತು. ಮೋಶಾ ಸರ್ಕಾರ ತನ್ನ ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳಿಗೆ ದೇಶದ್ರೋಹಿಗಳು, ಎಡಪಂಥೀಯರು, ಅರ್ಬನ್ ನಕ್ಸಲರು, ಕಮ್ಯೂನಿಸ್ಟರು ಎಂಬ ಹಣೆಪಟ್ಟಿ ಹಚ್ಚಿ ವರ್ಷಗಳಿಂದ ಬೇಟೆಯಾಡುತ್ತ ಬಂದಿದೆ. ಈ ಪಟ್ಟಿಗೆ ನ್ಯೂಸ್ ಕ್ಲಿಕ್ ಇತ್ತೀಚಿನ ಸೇರ್ಪಡೆ. ಇದೇ ಕಡೆಯದೇನೂ ಅಲ್ಲ.

ತನ್ನ ತಾಳಕ್ಕೆ ತಕ್ಕಂತೆ ಕುಣಿಯದ ಸಮೂಹ ಮಾಧ್ಯಮಗಳ ದಮನಕ್ಕೆ ಮೋಶಾ ಸರ್ಕಾರ ನಡೆಸಿರುವ ತನಿಖಾ ಏಜೆನ್ಸಿಗಳ ಸ್ವಚ್ಛಂದ ದುರ್ಬಳಕೆಯನ್ನು ಇಂಡಿಯಾ ದೇಶ ಹಿಂದೆಂದೂ ಕಂಡಿರಲಿಲ್ಲ. ತುರ್ತುಪರಿಸ್ಥಿತಿಯ ಹೆಸರನ್ನು ಉಲ್ಲೇಖಿಸುವವರಿದ್ದಾರೆ. ಆದರೆ 2014ರಿಂದ ಈ ದೇಶದಲ್ಲಿ ನೆಲೆಸಿರುವ ಜನತಂತ್ರದ ಅಪಹರಣ, ಪ್ರತಿಪಕ್ಷಗಳು ಮತ್ತು ರಾಜಕೀಯ ವಿರೋಧಿಗಳ ದಮನ, ವ್ಯಕ್ತಿಪೂಜೆ, ಬಹುಸಂಖ್ಯಾತವಾದ, ಅಲ್ಪಸಂಖ್ಯಾತರ ಬೇಟೆಯ ಮುಂದೆ ಇಂದಿರಾಗಾಂಧಿ ಅವರು ಜಾರಿಗೊಳಿಸಿದ್ದ ತುರ್ತುಪರಿಸ್ಥಿತಿ ಒಂದು ವನವಿಹಾರ (Excursion) ಅಷ್ಟೇ ಎಂದು ಮಹಾತ್ಮಾ ಗಾಂಧೀಜಿಯವರ ಮೊಮ್ಮಗ ರಾಜಮೋಹನ ಗಾಂಧಿ ಕೆಲವು ವರ್ಷಗಳ ಹಿಂದೆ ಮೈಸೂರಿನ ವಿಚಾರಸಂಕಿರಣದ ಉದ್ಘಾಟನಾ ಭಾಷಣದಲ್ಲಿ ಬಣ್ಣಿಸಿದ್ದುಂಟು.

ವಿಶ್ವ ಜನತಂತ್ರದ ಜನನಿ ಎಂದು ವಿದೇಶೀ ವೇದಿಕೆಗಳಲ್ಲಿ ಎದೆತಟ್ಟಿಕೊಳ್ಳುವ ಪ್ರಭುತ್ವ ದೇಶದ ಹೊರಗೆ ಬುದ್ಧ ಮತ್ತು ಗಾಂಧಿಯನ್ನು ಬಹಿರಂಗವಾಗಿ ವಂದಿಸುವ ಮತ್ತು ದೇಶದ ಒಳಗೆ ಗೋಡ್ಸೆಯನ್ನು ಅಂತರಂಗದಲ್ಲಿ ಆರಾಧಿಸುತ್ತಿದೆ. ಇಂತಹ ಅಪ್ಪಟ ವಂಚನೆ ಮತ್ತು ಸಮಯಸಾಧಕತನದ ಮುಖವಾಡಗಳು ತಡವಾಗಿಯಾದರೂ ಕಳಚಿ ಬೀಳುವುದು ನಿಶ್ಚಿತ.

ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...