ಚಾಮರಾಜನಗರ ಜಿಲ್ಲೆಗೆ ಈ ವರ್ಷದ ಮೊದಲ ಮಳೆಯ ಸಿಂಚನವಾಗಿದೆ. ಕೊಳ್ಳೇಗಾಲ, ಯಳಂದೂರು ತಾಲೂಕು ವ್ಯಾಪ್ತಿಯಲ್ಲಿ ಬಿಟ್ಟು ಉಳಿದ ತಾಲೂಕುಗಳಲ್ಲಿ ಅಲ್ಲಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದೆ. ಗಾಳಿಯಿಂದಾಗಿ ಬಾಳೆ, ಟೊಮೆಟೊ ಬೆಳೆಗಳಿಗೆ ಹಾನಿಯೂ ಆಗಿದೆ.
ಚಾಮರಾಜನಗರ, ಗುಂಡ್ಲುಪೇಟೆ ತಾಲೂಕುಗಳಿಗೆ ಹೋಲಿಸಿದರೆ ಹನೂರು ತಾಲೂಕಿನಲ್ಲಿ ಚೆನ್ನಾಗಿ ಮಳೆಯಾಗಿದೆ. ಚಾಮರಾಜನಗರ ತಾಲೂಕು ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಬಿದ್ದರೆ, ಗುಂಡ್ಲುಪೇಟೆಯ ಅರಣ್ಯದ ಅಂಚುಗಳಲ್ಲಿ ತುಂತುರು ಮಳೆಯಾಗಿದೆ.
ಹನೂರು ತಾಲೂಕಿನ ಕೌದಳ್ಳಿ, ನಾಗಣ್ಣನಗರ, ಜಿ ಆರ್ ನಗರ, ಕಾಮಗೆರೆ, ಮಂಗಲ, ಕಣ್ಣೂರು ಸೇರಿದಂತೆ ಹಲವೆಡೆ ಗುರುವಾರ ಮಧ್ಯಾಹ್ನ ಗುಡುಗು, ಗಾಳಿ ಸಹಿತ ಮಳೆಯಾಗಿದೆ. ಬರದ ಛಾಯೆಯಿಂದ ಬಾಡಿ ಬಸವಳಿದಿದ್ದ ಇಳೆಗೆ ಮಳೆ ತಂಪೆರೆದಿದೆ.
ಬೆಳಿಗ್ಗೆಯಿಂದ ಮಳೆ ಬರುವ ಕುರುಹುಗಳು ಇರಲಿಲ್ಲ. ಮಧ್ಯಾಹ್ನ ಮೋಡ ಕಪ್ಪಿಟ್ಟು, ಗಾಳಿ, ಗುಡುಗಿನ ಸಹಿತ ಮಳೆಯಾಗಿದೆ.
ಮಳೆಗೆ ತಾಲೂಕಿನ ನಾಗಣ್ಣ ನಗರ, ಅಜ್ಜೀಪುರ ಸಮೀಪದ ಜಿ ಆರ್ ನಗರದಲ್ಲಿ ಬಾಳೆ ಮತ್ತು ಟೊಮೆಟೊ ಬೆಲೆ ನೆಲಕ್ಕಚಿವೆ. ನಾಗಣ್ಣ ನಗರದ ರೈತ ಮುರುಗೇಶ್ ಅವರ 800 ಬಾಳೆ ಮರಗಳ ಪೈಕಿ 650 ಮರಗಳು ಮುರಿದು ಬಿದ್ದಿವೆ. ಅಜ್ಜೀಪುರ ಸಮೀಪದ ಜಿ ಆರ್ ನಗರದ ರೈತ ಶ್ರೀರಂಗ ಅವರಿಗೆ ಸೇರಿದ ಟೊಮೊಟೊ ಬೆಳೆ ಉದುರಿವೆ.
‘ಬಿರು ಬೇಸಿಗೆಯ ನಡುವೆ ಸಾಲ ಮಾಡಿ ಬೆಳೆಯಲಾಗಿದ್ದ ಬಾಳೆ ಬೆಳೆ ಕಟಾವು ಹಂತಕ್ಕೆ ತಲುಪಿತ್ತು. ಇಂತಹ ಸಂದರ್ಭದಲ್ಲಿ ಬೆಳೆ ಮಳೆಗೆ ಸಿಲುಕಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಜಿಲ್ಲಾಡಳಿತ ಪರಿಶೀಲನೆ ನಡೆಸಿ ಪರಿಹಾರ ನೀಡಬೇಕು’ ಎಂದು ರೈತರು ಒತ್ತಾಯಿಸಿದ್ದಾರೆ.
ಚಾಮರಾಜನಗರ ತಾಲ್ಲೂಕಿನ ಆಲೂರು, ಕೆಂಪನಪುರ, ಗೂಳಿಪುರ, ಕನ್ನೇಗಾಲ, ಮಂಗಲ ಗ್ರಾಮಗಳಲ್ಲೂ ಗಾಳಿ ಸಹಿತ ಮಳೆಯಾಗಿದೆ.
ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಗೆ ಬರುವ ಕೆಂಪನಪುರ ಸೇರಿದಂತೆ ಹಲವು ಊರುಗಳಲ್ಲಿ ಗಾಳಿಯ ಆರ್ಭಟಕ್ಕೆ ಸಿಲುಕಿ ಬಾಳೆ ತೋಟಗಳು ನೆಲಕ್ಕುರುಳಿವೆ. ಕೆಂಪನಪುರ ಗ್ರಾಮದ ಕೆ ಎಂ ಗುರುಸಿದ್ದಪ್ಪ ಸುಶೀಲಮ್ಮ ಹಾಗೂ ಸಿದ್ದಲಿಂಗಸ್ವಾಮಿ ಎಂಬುವವರಿಗೆ ಸೇರಿದ ತಲಾ ಎರಡು ಎಕರೆ ಬಾಳೆ ಫಸಲು ನಾಶವಾಗಿರುವುದಾಗಿ ವರದಿಯಾಗಿದೆ.
“ಕಟಾವು ಹಂತಕ್ಕೆ ಬಂದಿರುವ ಬಾಳೆ ತೋಟ ಗಾಳಿ ಮಳೆಗೆ ನೆಲ ಕಚ್ಚಿರುವುದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡಲು ಮುಂದಾಗಬೇಕು” ಎಂದು ಕೆಂಪನಪುರ ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಭಾರೀ ಗಾಳಿ ಮಳೆ; ಸಿಡಿಲ ಹೊಡೆತಕ್ಕೆ 25 ಮೇಕೆಗಳು ಬಲಿ
ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದ ತಪ್ಪಲು ಹಾಗೂ ಕಾಡಂಚಿನ ಗ್ರಾಮಗಳಲ್ಲಿ ನಾಲ್ಕೈದು ನಿಮಿಷಗಳ ಕಾಲ ತುಂತುರು ಮಳೆಯಾಗಿದೆ. ಬಂಡೀಪುರ, ಮೇಲುಕಾಮನಹಳ್ಳಿ, ಹಂಗಳ, ದೇವರಹಳ್ಳಿ, ಗೋಪಾಲಪುರ ಭಾಗದಲ್ಲೂ ತುಂತುರು ಹನಿ ಬಿದ್ದಿದೆ.
ಸಂಜೆ ಐದರ ಸಮಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಬಳಿಕ ಜೋರು ಹನಿ ಬಿದ್ದು ನಿಂತಿತು. ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ.
