ಚಾಮರಾಜನಗರ ಜಿಲ್ಲೆಯಲ್ಲಿ ಆರು ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ ಕ್ರಮವಹಿಸಲಾಗಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದರು.
ಚಾಮರಾಜನಗರದ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
“ಜಿಲ್ಲೆಯಲ್ಲಿ 400 ಕೆವಿ ವಿದ್ಯುತ್ ಉಪಕೇಂದ್ರ ಸೇರಿದಂತೆ ಒಟ್ಟು ಆರು ಹೊಸ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲಾಧಿಕಾರಿ ಹಾಗೂ ಚೂಡಾ ಅಧ್ಯಕ್ಷರು ಸಭೆಯಲ್ಲಿ ಮನವಿ ಮಾಡಿದ ಮೇರೆಗೆ ಜಿಲ್ಲಾ ಕೇಂದ್ರದ ಬಿ ರಾಚಯ್ಯ ಜೋಡಿ ರಸ್ತೆಗೆ ಎಲ್ಇಡಿ ಬಲ್ಬ್‌ಗಳನ್ನು ಕೆಪಿಟಿಸಿಎಲ್‌ನ ಸಿಎಸ್ಆರ್ ಫಂಡ್‍ನಿಂದ ಅಳವಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದರು.
“ಅಕ್ರಮ ಸಕ್ರಮ ಯೋಜನೆಯಡಿ ಇರುವ ಅರ್ಜಿಗಳ ವಿಲೇವಾರಿಗೆ ಕ್ರಮವಹಿಸಲಾಗಿದೆ. ಮೊದಲ ಆದ್ಯತೆ ಮೇರೆಗೆ 1,500 ಅರ್ಜಿಗಳನ್ನು ತೆಗೆದುಕೊಳ್ಳಲಿದ್ದೇವೆ. ಇನ್ನೂ ಎರಡು ವರ್ಷದೊಳಗೆ ಬಾಕಿಯಿರುವ ಎಲ್ಲ ಅರ್ಜಿಗಳನ್ನು ಪೂರ್ಣಗೊಳಿಸಲಿದ್ದೇವೆ” ಎಂದು ಹೇಳಿದರು.
“ಕುಸುಮ್ ಬಿ(ಪ್ರಧಾನ ಮಂತ್ರಿ-ಕಿಸಾನ್ ಉರ್ಜಾ ಸುರಕ್ಷಾ ಎವಮ್ ಉತ್ಥಾನ್ ಮಹಾಭಿಯಾನ್) ಯೋಜನೆಯಡಿ ಸೋಲಾರ್ ಪಂಪ್‍ಸೆಟ್‍ಗಳಿಗೆ ಶೇ.80ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 350 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಸೋಲಾರ್ ಮೂಲಕ ವಿದ್ಯುತ್ ಉತ್ಪಾದನೆಗೆ ಕ್ರಮ ತೆಗೆದುಕೊಳ್ಳಲಾಗಿದ್ದು, ಕುಸುಮ್ ಬಿ, ಕುಸುಮ್ ಸಿ ಯೋಜನೆಯಡಿ ಸೋಲಾರ್ ಮೂಲಕ 3000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ಪಂಪ್‍ಸೆಟ್‍ಗಳಿಗೆ ಪೂರೈಕೆ ಮಾಡಲಾಗುತ್ತದೆ. ನಿರ್ವಹಣೆ ಕೆಲಸಗಳಿಗಾಗಿ ಸಾಕಷ್ಟು ಹಣ ಇಡಲಾಗಿದೆ” ಎಂದರು.
“ರಾಜ್ಯದಲ್ಲಿ 2500 ಲೈನ್‍ಮ್ಯಾನ್‍ಗಳನ್ನು ನೇಮಕ ಮಾಡಿಕೊಳ್ಳುವ ನಿಟ್ಟಿನಲ್ಲಿ ಒಂದೇ ದಿನದಲ್ಲಿ ಸಂದರ್ಶನ ಮಾಡಲಾಗುತ್ತದೆ. ಈ ಹಿಂದೆ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು. ಹುದ್ದೆಗಳು ಖಾಲಿ ಉಳಿಯದಂತೆ ಏಕಕಾಲದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳುವ ಮಹತ್ವದ ತೀರ್ಮಾನ ಮಾಡಲಾಗಿದೆ” ಎಂದು ಸಚಿವ ಕೆ ಜೆ ಜಾರ್ಜ್ ತಿಳಿಸಿದರು.
ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, “ಕಳೆದ ವರ್ಷ ಸಿವಿಲ್ ಎಲೆಕ್ಟ್ರಿಕಲ್ ಎಂಜಿನಿಯರ್‌ಗಳನ್ನು ಪಾರದರ್ಶಕ ಪ್ರಕ್ರಿಯೆ ಅನುಸರಿಸಿ ನೇಮಕ ಮಾಡಿಕೊಂಡಿದ್ದೇವೆ. ಈ ಬಾರಿಯು ಹುದ್ದೆಗಳ ನೇಮಕಕ್ಕೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪಿಡಿಓ ಪ್ರಶ್ನೆಪತ್ರಿಕೆ ಸೋರಿಕೆ: ಪ್ರತಿಭಟಿಸಿದ ಅಭ್ಯರ್ಥಿಗಳ ವಿರುದ್ಧದ ಕೇಸು ವಾಪಸ್‌ಗೆ ಆಗ್ರಹ
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, “₹42 ಕೋಟಿ ವೆಚ್ಚದಲ್ಲಿ ಚಾಮರಾಜನಗರ ಹನೂರು ತಾಲೂಕಿನ ಹಾಡಿ, ಪೋಡುಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಯೋಜನೆಗೆ ಇದೇ ನವೆಂಬರ್ 26ರಂದು ಚಾಲನೆ ನೀಡಲಾಗುತ್ತದೆ” ಎಂದರು.
ಸಭೆಯಲ್ಲಿ ಶಾಸಕ ಸಿ ಪುಟ್ಟರಂಗಶೆಟ್ಟಿ, ಎ ಆರ್ ಕೃಷ್ಣಮೂರ್ತಿ, ಹೆಚ್ ಎಂ ಗಣೇಶ್ ಪ್ರಸಾದ್, ಎಂ ಆರ್ ಮಂಜುನಾಥ್, ಡಾ ಡಿ ತಿಮ್ಮಯ್ಯ, ಕೆ ವಿವೇಕಾನಂದ, ಕಾಡಾ ಅಧ್ಯಕ್ಷ ಪಿ ಮರಿಸ್ವಾಮಿ, ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ , ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶೀಲ, ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಬಿ ಟಿ ಕವಿತಾ, ಸೆಸ್ಕ್‌ನ ತಾಂತ್ರಿಕ ನಿರ್ದೇಶಕ ಮುನಿ ಗೋಪಾಲ್‍ರಾಜ್, ಮುಖ್ಯ ಎಂಜಿನಿಯರ್ ದಿವಾಕರ್, ಅಧೀಕ್ಷಕ ಎಂಜಿನಿಯರ್ ತಾರ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.