ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹೀನಾಯವಾಗಿ ಸೋತಿದ್ದಾರೆ. ಸತತ ಮೂರು ಪ್ರಯತ್ನಗಳಲ್ಲಿಯೂ ನಿಖಿಲ್ ಗೆಲ್ಲುವಲ್ಲಿ ವಿಫಲರಾಗಿದ್ದಾರೆ ನಿಖಿಲ್ ಸೋತಿದ್ದಕ್ಕೆ ಜೆಡಿಎಸ್‌ನ ಕಾರ್ಯಕರ್ತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಚನ್ನಪಟ್ಟಿಣ ತಾಲೂಕಿನ ಶ್ರೀರಾಂಪುರ ಗ್ರಾಮದ ಮಂಜುನಾಥ್ ಎಂಬವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ. ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ‘ಡೆತ್ ನೋಟ್’ ಬರೆದಿಟ್ಟಿದ್ದ ಮಂಜುನಾಥ್, “ನಾನು ನಿಖಿಲ್ ಅಭಿಮಾನಿ. ನನ್ನ ಸಾವಿಗೆ ನಾನೇ ಕಾರಣ. ಜೈ ಜೆಡಿಎಸ್” ಎಂದು ಬರೆದಿದ್ದಾರೆ. ಆ ಪತ್ರವನ್ನು ಪೊಲೀಸರು ವಶಕ್ಕ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿದ್ದ ಸುಮಲತಾ ವಿರುದ್ಧ ಸೋಲುಂಡಿದ್ದರು. ಬಳಿಕ, 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ, ಸೋತಿದ್ದರು. ಇದೀಗ, 2024ರ ಉಪಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ವಿರುದ್ಧ ಸ್ಪರ್ಧಿಸಿ, ಮೂರನೇ ಬಾರಿಗೆ ಸೋಲುಂಡಿದ್ದಾರೆ.
ಚನ್ನಪಟ್ಟಣ ಉಪಚುನಾವಣಾ ಫಲಿತಾಂಶ ಶನಿವಾರ ಪ್ರಕಟವಾಗಿದೆ. ನಿಖಿಲ್ ವಿರುದ್ಧ ಸಿ.ಪಿ ಯೋಗೇಶ್ವರ್ 25,515 ಮತಗಳ ಅಂತರದಿಂದ ಗೆದಿದ್ದಾರೆ. ಯೋಗೇಶ್ವರ್ 1,12,642 ಮತಗಳನ್ನು ಪಡೆದರೆ, ನಿಖಿಲ್ 87,229 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ.
