ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಕಾರಣ ಕ್ಷೇತ್ರದ ಮತದಾರರಲ್ಲದವರು ನ.11ರ ಸೋಮವಾರ ಸಂಜೆ 5.30ರ ನಂತರ ಕ್ಷೇತ್ರ ಬಿಟ್ಟು ಹೊರಹೋಗಬೇಕು. ಇದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಮಾತ್ರ ಅನ್ವಯ. ಚುನಾವಣಾ ನಿಯಮ ಉಲ್ಲಂಘನೆಯ 14 ಪ್ರಕರಣಗಳನ್ನು ದಾಖಲಾಗಿದ್ದು, ಇವುಗಳಲ್ಲಿ 9 ಅಬಕಾರಿ ಪ್ರಕರಣಗಳು ಪತ್ತೆಯಾಗಿವೆ ಎಂದು ರಾಮನಗರ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ತಿಳಿಸಿದರು.
ಅವರು ನ. 8ರ ಶುಕ್ರವಾರ ತಮ್ಮ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 676 ಸೀರೆ, ವಸ್ತ್ರಗಳನ್ನು ಜಪ್ತಿ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾನೇಜರ್ ಹಾಗೂ ಮತ್ತೊಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮತದಾರರಿಗೆ ಹಣ ಅಥವಾ ಇತರ ಆಮಿಷ ನೀಡಿದರೆ 1950ಗೆ ಕರೆ ಮಾಡಬಹುದು ಅಥವಾ ಸಿ-ವಿಜಿಲ್ ಆಪ್ ಮೂಲಕ ದೂರು ನೀಡಬಹುದು ಎಂದು ತಿಳಿಸಿದರು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ನ ಪ್ರಕಾರ, ರಾಮನಗರ ಜಿಲ್ಲೆಯ 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನ.12ರ ಮಂಗಳವಾರ ಸಂಜೆ 6 ಗಂಟೆಯಿಂದ ನ.14ರ ಗುರುವಾರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಂಡಿದೆ. ಈ ಸಮಯದಲ್ಲಿ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಅದರಂತೆ, ನ.11ರ ಸೋಮವಾರ ಸಂಜೆ 6 ಗಂಟೆಯಿಂದ ನ.14ರ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ, ಹಂಚಿಕೆ ಮತ್ತು ಸಾಗಾಣಿಕೆ ನಿಷೇಧಿತವಾಗಿದೆ ಮತ್ತು ಎಲ್ಲಾ ಮದ್ಯದ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ಇದನ್ನು ಡ್ರೈ ಡೇ ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು.
ಚುನಾವಣೆ ಕಾರ್ಯಾಚರಣೆಗೆ ಪಿಆರ್ಒ, ಎಪಿಆರ್ಒ, ಮತ್ತು ಪಿಒಎಸ್ ಸೇರಿದಂತೆ 1,252 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅ.26 ಮತ್ತು ನ.5ರಂದು ಇವರಿಗೆ ಪ್ರಾಥಮಿಕ ತರಬೇತಿ ನೀಡಲಾಗಿದೆ. ಜೊತೆಗೆ, 119 ಮೈಕ್ರೋ ವೀಕ್ಷಕರಿಗೆ ನ.5 ಮತ್ತು ನ.8ರಂದು ವಿಶೇಷ ತರಬೇತಿ ನೀಡಿ ಪ್ರಾರಂಭಿಕ ಕಾರ್ಯತಂತ್ರಗಳನ್ನು ವಿವರಿಸಲಾಗಿದೆ.
ಇದನ್ನು ಓದಿದ್ದೀರಾ? ಮಂಡ್ಯ | ಲಾಟರಿ ಹಾವಳಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ: ಜಿಲ್ಲಾಧಿಕಾರಿ ಕುಮಾರ್
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್ ಮತ್ತು ರಾಮಚಂದ್ರ ಉಪಸ್ಥಿತರಿದ್ದರು.
