ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆ ಗ್ರಾಮ ಪಂಚಾಯಿತಿಗೆ 15ನೇ ಹಣಕಾಸು ಯೋಜನೆಯ ಅನುದಾನ ಬಿಡುಗಡೆಯಾಗಿದ್ದು, ಪಿಡಿಒ ಪ್ರತಿ ಸದಸ್ಯರ ಬಳಿ ಶೇ.10ರಷ್ಟು ಲಂಚ ಕೇಳಿರುವುದಾಗಿ ತಿಳಿದುಬಂದಿದೆ.
15ನೇ ಹಣಕಾಸು ಯೋಜನೆಯ ಹಣ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಆನೆಕೆರೆ ಗ್ರಾಮ ಪಂಚಾಯಿತಿ ಪಿಡಿಒ ಸದಸ್ಯರ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಬಹಿರಂಗವಾಗಿ ಪಿಡಿಒ ಅನುರಾಧಾ ಅವರು ಸದಸ್ಯರ ಬಳಿ ಕಮೀಷನ್ ಕೇಳುತ್ತಿರುವುದು ಕಂಡುಬಂದಿದೆ. ಪ್ರತಿ ಸದಸ್ಯರೂ ಕೂಡ ಶೇ.10ರಷ್ಟು ಲಂಚ ಕೊಡಬೇಕೆಂದು ಕೇಳಿದ್ದಾರೆ.
ಹೆಸರೇಳಲಿಚ್ಚಿಸದ ಗ್ರಾ.ಪಂ ಸದಸ್ಯರೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಆನೆಕೆರೆ ಗ್ರಾಮ ಪಂಚಾಯಿತಿಯ ಪಿಡಿಒ ಅನುರಾಧಾ ಅವರು ತುಂಬಾ ಟಾರ್ಚರ್ ನೀಡುತ್ತಿದ್ದಾರೆ. ಸದಸ್ಯರ ಎಲ್ಲ ಅನುದಾನದಲ್ಲಿಯೂ ಕಮೀಷನ್ ಕೊಡಬೇಕೆಂದು ಪಟ್ಟು ಹಿಡಿಯುತ್ತಾರೆ. ಇದೀಗ 15ನೇ ಹಣಕಾಸಿನ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ಶೇ.10ರಷ್ಟು ಕಮೀಷನ್ ಕೊಡಲೇಬೇಕೆಂದು ಬಹಿರಂಗವಾಗಿ ಸಭೆಯಲ್ಲೇ ಕೇಳುತ್ತಾರೆ” ಎಂದು ಹೇಳಿದರು.
“ಈ ಮೊದಲು ಎಲ್ಲರ ಬಳಿ ಶೇ.4ರಷ್ಟು ಲಂಚ ಪಡೆಯುತ್ತಿದ್ದರು. ಇದೀಗ ಶೇ.10ಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇ-ಸ್ವತ್ತು ಮಾಡಿಕೊಡಲು ₹10,000 ಲಂಚ ಕೊಡಬೇಕು ಅಂತ ಕೇಳುತ್ತಾರೆ. ಸರ್ಕಾರಿ ಸಂಬಳ ತೆಗೆದುಕೊಳ್ಳುವ ಅವರು ಸದಸ್ಯರ ಬಳಿಯೇ ಲಂಚಬಾಕರಂತೆ ವರ್ತಿಸುತ್ತಿದ್ದರೆ ಜನಸಾಮಾನ್ಯರ ಕೆಲಸಗಳನ್ನು ಹೇಗೆ ಮಾಡಿಕೊಡುತ್ತಾರೆ” ಎಂದು ಪ್ರಶ್ನಿಸಿದ್ದಾರೆ.
ಇನ್ನೋರ್ವ ಸದಸ್ಯರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “15ನೇ ಹಣಕಾಸು ಯೋಜನೆಯ ಹಣ ಮತ್ತು ಮನರೇಗಾ ಹಣ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಬಿಡುಗಡೆಯಾಗುವ ಪ್ರತಿ ಅನುದಾನದಲ್ಲಿ ಶೇ.10ರಷ್ಟು ಲಂಚ ಕೊಡುವಂತೆ ಪಿಡಿಒ ಅನುರಾಧಾ ಮತ್ತು ಅಧ್ಯಕ್ಷೆ ಭವ್ಯಾ ಸೇರಿಕೊಂಡು ಪೀಡಿಸುತ್ತಿದ್ದಾರೆ. ನಾವು ಮುಂದೆ ನಿಂತು ಊರಿನ ಸ್ವಚ್ಛತೆ ಕಾರ್ಯಗಳನ್ನು ಮಾಡಿಸಿದರೂ ಕೂಡ ಬಿಲ್ ತೆಗೆದುಕೊಳ್ಳುವಷ್ಟರಲ್ಲಿ ಹೈರಾಣುಗುತ್ತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ? ಅಂಗನವಾಡಿ ಸಹಾಯಕಿಯಿಂದ ಸಾಮಾಜಿಕ ನಾಯಕಿವರೆಗೆ; ಚಂದಮ್ಮರ ಸ್ಫೂರ್ತಿಯ ಪಯಣ
“ಅನುದಾನದ ಹಣವನ್ನು ಸದಸ್ಯರುಗಳಿಗೆ ನೀಡಬೇಡಿ, ಅವರು ನನಗೇ ಕೊಡಬೇಕು. ಅದನ್ನು ಕಟ್ ಮಾಡಿಕೊಂಡು ಕೊಡಿ, ಇಲ್ಲದಿದ್ದರೆ ನನಗೆ ಕೊಡಿ ಎಂದು ಎಂಜಿನಿಯರ್‌ಗೆ ಹೇಳುತ್ತಾರೆ. ಬಿಡುಗಡೆಯಾಗಿರುವ ಅನುದಾನವನ್ನು ಮತ್ತೆ ಪಿಡಿಒ ಅನುರಾಧ ಅವರೇ ವಾಪಸ್ ತೆಗೆದುಕೊಂಡಿದ್ದಾರೆ. ನಮ್ಮ ಊರುಗಳಲ್ಲಿ ₹370 ಕೂಲಿಗೆ ಯಾರೂ ಬರುವುದಿಲ್ಲ. ಜನ ಸಿಗುವುದಿಲ್ಲ, ಜಾಬ್ ಕಾರ್ಡ್ ಇರುವವರನ್ನು ಹುಡುಕಿಕೊಂಡು ಕೆಲಸ ಮಾಡಿಸಿಕೊಳ್ಳುವಷ್ಟರಲ್ಲೇ ಸಾಕಾಗಿರುತ್ತದೆ. ಅಲ್ಲದೇ ಅನುದಾನ ಪಡೆಯುವಾಗ ಇನ್ನೊಂದು ರೀತಿಯ ಸಮಸ್ಯೆ ಎದುರಿಸುವಂತಾಗಿದೆ” ಎಂದು ಆರೋಪಿಸಿದರು.