ಚಳ್ಳಕೆರೆ ಖಾಸಗಿ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ, ಅನೈರ್ಮಲ್ಯ ತಾಂಡವವಾಡುತ್ತಿದ್ದು, ಈ ಸಮಸ್ಯೆಯನ್ನು ಯಾರು ಪರಿಹರಿಸುತ್ತಾರೆ ಎನ್ನುವುದೇ ಪ್ರಶ್ನೆಯಾಗಿ ಉಳಿದಿದೆ. ಗಮನಹರಿಸಬೇಕಾಗಿದ್ದ ಸಂಬಧಿತ ಅಧಿಕಾರಿಗಳೂ ಕೂಡ ಕಣ್ಮುಚ್ಚಿ ಕುಳಿತಿರುವುದು ಚಿತ್ರದುರ್ಗ ಜಿಲ್ಲೆಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಚಳ್ಳಕೆರೆ ಖಾಸಗಿ ಬಸ್ ನಿಲ್ದಾಣದ ಗೋಳು ಒಂದೆರಡಲ್ಲ. ಇದನ್ನು ಪರಿಹರಿಸುವವರೇ ಇಲ್ಲದಂತಾಗಿದೆ. ಹಳೇ ಶೌಚಾಲಯ ಇದ್ದರೂ ಕೂಡ ಅದರ ಎದುರಿಗೆ ಹೊಸದಾಗಿ ಶೌಚಾಲಯ ನಿರ್ಮಾಣ ಮಾಡುವ ಕಾರ್ಯಕ್ಕೆ ಇತ್ತೀಚೆಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಇರುವ ಹಳೆಯ ಶೌಚಾಲಯ ನೈರ್ಮಲ್ಯ ಕಾಪಾಡಿದರೆ ಸಾಕು ಎಂದು ಸಲಹೆ ನೀಡಿದ್ದರು.

ಸದ್ಯ ಕಾರ್ಯ ನಿರ್ವಹಿಸುತ್ತಿರುವ ಹಳೆಯ ಶೌಚಾಲಯವು ಆಗಾಗ ಸುದ್ದಿಗೆ ಮತ್ತು ಟೀಕೆಗೆ ಒಳಗಾಗುತ್ತಿದ್ದು, ಅಲ್ಲಿನ ಅನೈರ್ಮಲ್ಯ ಸಾರ್ವಜನಿಕರಿಗೆ ಪ್ರಶ್ನೆಯಾಗಿ ಉಳಿದಿದೆ. ಬಹಳ ದಿನಗಳಿಂದಲೂ ಅಲ್ಲಿನ ನಿರ್ವಹಣೆ ಮಾಡುವವರಿಗೆ ಸಾರ್ವಜನಿಕರು ಎಚ್ಚರಿಸುತ್ತ ಬಂದಿದ್ದರೂ, ಅವರು ಶೌಚಾಲಯದ ಅನೈರ್ಮಲ್ಯತೆ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಇದರಿಂದ ಶಾಂತಿನಗರ ಸೇರಿದಂತೆ ಅಕ್ಕಪಕ್ಕದ ಬಡಾವಣೆಯ ಮನೆಯ ನಿವಾಸಿಗಳು ತೊಂದರೆಗೊಳಗಾಗಿದ್ದು, ಬಸ್ ನಿಲ್ದಾಣದಲ್ಲಿ ಸಂಚರಿಸುವ ಪ್ರಯಾಣಿಕರೂ ಕೂಡ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ.
ಖಾಸಗಿ ಬಸ್ ನಿಲ್ದಾಣದ ಶೌಚಾಲಯವನ್ನು ನಿರ್ವಹಣೆ ಮಾಡುವ ಗುತ್ತಿಗೆದಾರರು ಶೌಚಾಲಯದ ತ್ಯಾಜ್ಯ ನೀರನ್ನು ಹೊರಚರಂಡಿ ಮತ್ತು ರಸ್ತೆಯ ಮೇಲೆ ಹರಿಬಿಡುತ್ತಿದ್ದು ಇದರ ದುರ್ವಾಸನೆಗೆ ಸ್ಥಳೀಯರು, ಪ್ರಯಾಣಿಕರು ಮತ್ತು ಅಕ್ಕಪಕ್ಕದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ದುರ್ವಾಸನೆಯಿಂದ ಕೂಡಿದ ತ್ಯಾಜ್ಯ ಚರಂಡಿ ಸೇರುತ್ತಿದ್ದು, ಇದು ಶಾಂತಿನಗರ ಸೇರಿದಂತೆ ಮುಂದಿನ ಬಡಾವಣೆಯ ಚರಂಡಿಗಳಲ್ಲಿ ಸೇರುತ್ತದೆ. ಅಲ್ಲಿಂದ ಮುಂದಿನ ಬಡಾವಣೆಗಳಿಗೆ ತ್ಯಾಜ್ಯ ನೀರು ಹರಿಯುತ್ತಿದ್ದು, ದುರ್ವಾಸನೆಯಿಂದ ಸಾಂಕ್ರಾಮಿಕ ರೋಗಗಳು ಉಂಟಾಗುವ ಭೀತಿ ಎದುರಿಸುತ್ತಿದ್ದಾರೆ. ಈ ಬಗ್ಗೆ ಅಲ್ಲಿ ನಿರ್ವಹಣೆ ಮಾಡುವವರಿಗೆ ಎಚ್ಚರಿಸಿ, ತಿಳುವಳಿಕೆ ನೀಡಿದರೂ, ಅವರು ಪದೇ ಪದೆ ಇದನ್ನೇ ಮುಂದುವರಿಸಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶಗಳ ನೈರ್ಮಲ್ಯ ಹಾಳಾಗುತ್ತಿದೆ” ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಚಳ್ಳಕೆರೆ ಕರವೇ ಪ್ರವೀಣ್ ಶೆಟ್ಟಿ ಬಣ ಗೌರವಾಧ್ಯಕ್ಷ ಸಿ ಬೋಜರಾಜ ಈದಿನ ಡಾಟ್ ಕಾಮ್‌ನೊಂದಿಗೆ ಮಾತನಾಡಿ, “ಚಳ್ಳಕೆರೆಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ನೀರನ್ನು ಎರಡು ದಿನಕ್ಕೊಮ್ಮೆ ಚರಂಡಿಗೆ ಬಿಡುತ್ತಿದ್ದಾರೆ. ಇದರ ಬಗ್ಗೆ ನಗರಸಭೆಯವರ ಗಮನಕ್ಕೆ ತಂದರೂ, ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಅಲ್ಲಿ ಹೋಗಿ ವಿಚಾರಿಸಿದಾಗ ಅವನು ಶೌಚಾಲಯಕ್ಕೆ ಬೀಗವನ್ನು ಹಾಕಿಕೊಂಡು ಅಲ್ಲಿಂದ ಪರಾರಿಯಾಗುತ್ತಾನೆ. ಮರುದಿನ ಮತ್ತೆ ಅದೇ ಪುನಾರಾವರ್ತನೆಯಾಗುತ್ತಿದೆ. ಇಲ್ಲಿನ ಜನ ದುರ್ವಾಸನೆಗೆ ಬೇಸತ್ತಿದ್ದಾರೆ. ಮೇಲಿನ ಅಧಿಕಾರಿಗಳು ಸಮಸ್ಯೆ ಬಗ್ಗೆ ಗಮನಹರಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಸ್ಥಳೀಯ ಮುಖಂಡ ತಿಮ್ಮರಾಜು ಮಾತನಾಡಿ, “ಶೌಚಾಲಯದ ಗಲೀಜನ್ನು ಚರಂಡಿಗೆ ಬಿಡುತ್ತಾರೆ. ಸಾಕಷ್ಟು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಗಮನಕ್ಕೆ ತಂದರೂ ಕೂಡಾ ಇದು ಮುಂದುವರೆದಿದೆ. ಅಂದರೆ ನಗರಸಭೆ ಸಾರ್ವಜನಿಕರ ಮೇಲೆ ಎಷ್ಟು ಕಾಳಜಿ ವಹಿಸುತ್ತದೆಂದು ತಿಳಿಯುತ್ತದೆ. ಇದರ ಬಗ್ಗೆ ಯಾಕಿಷ್ಟು ಬೇಜವಾಬ್ದಾರಿತನ ತೋರುತ್ತಿದ್ದಾರೆಂದು ತಿಳಿಯುತ್ತಿಲ್ಲ. ಶೌಚಾಲಯದ ಹೊಲಸನ್ನು ಈ ರೀತಿ ನಮ್ಮ ಶಾಸಕರ, ಸಂಸದರ, ನಮ್ಮ ಜನಪ್ರತಿನಿಧಿಗಳ ಮನೆಯ ಹತ್ತಿರ ಸುರಿದರೆ ಅವರಿಗೂ ಅರ್ಥವಾಗುತ್ತದೆ. ಈ ರೀತಿಯಾಗಿ ತ್ಯಾಜ್ಯ ನೀರು ಬಿಡುವುದರಿಂದ ಸಾರ್ವಜನಿಕರಿಗೆ ಇಲ್ಲಿ ವಾಸಿಸುವುದು ಎಷ್ಟು ಕಷ್ಟವಾಗುತ್ತದೆಂದು ಅವರಿಗೂ ತಿಳಿಯಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ರಾಜಕೀಯ ಮುಖಂಡ ಪ್ರಸನ್ನ ಮಾತನಾಡಿ, “ಚಳ್ಳಕೆರೆ ನಗರಸಭೆಯ ಪೌರಾಯುಕ್ತರು,
ಇದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳು ಗಮನಿಸಿ ಸಾರ್ವಜನಿಕರಿಗೆ ಒಳ್ಳೆಯ ಭಾಂದವ್ಯದೊಂದಿಗೆ ಕೆಲಸವನ್ನು ನಿರ್ವಹಿಸಬೇಕಾಗಿದೆ. ಸುಮಾರು ವರ್ಷಗಳಿಂದ ಇದು ದೊಡ್ಡ ಸಮಸ್ಯೆಯಾಗಿ ಉಳಿದಿದೆ. ಇಂಥಹ ಸಮಸ್ಯೆಗಳನ್ನು ಬಗೆಹರಿಸಲಾಗಲಿಲ್ಲ ಅಂದರೆ ಅಧಿಕಾರಿಗಳು ಇರುವುದಾದರು ಏಕೆ? ಪಾಲಿಕೆಯ ಸಭೆಯಲ್ಲಿ ಇದನ್ನು ಗಮನಕ್ಕೆ ತರುತ್ತೇವೆ” ಎಂದು ಕಿಡಿಕಾರಿದರು.

“ಈ ಶೌಚಾಲಯ ಬಸ್ ನಿಲ್ದಾಣದ ಒಂದು ಭಾಗದಲ್ಲಿದ್ದು, ಈ ಪರಿಸ್ಥಿತಿಯಿದೆ. ಇನ್ನೊಂದು ಬದಿಯಲ್ಲಿ ಹೊಸ ಶೌಚಾಲಯವನ್ನು ನಡುರಸ್ತೆಯಲ್ಲಿ ನಿರ್ಮಾಣ ಮಾಡುತ್ತಿರುವುದು ವಿವಾದ ಸೃಷ್ಟಿಸಿದೆ. ಸರಿಯಾದ ನಿರ್ವಹಣೆ ಇಲ್ಲದೆ, ಇಲ್ಲಿಯೂ ಅದೇ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗಾಗಲೇ ಬಸ್‌ನಿಲ್ದಾಣದ ಹಿಂಭಾಗ ಮೂತ್ರ ವಿಸರ್ಜನೆ ಮಾಡಿ ಹೋಗುತ್ತಿದ್ದಾರೆ, ಇನ್ನು ಇಲ್ಲಿ ಹೊಸ ಶೌಚಾಲಯ ನಿರ್ಮಾಣ ಮಾಡಿದರೆ ಅದೇ ಪರಿಸ್ಥಿತಿ ಉಂಟಾಗುತ್ತದೆ. ಅಲ್ಲಿರುವ ವ್ಯಾಪಾರಸ್ಥರು ಮಳಿಗೆಗಳನ್ನು ಖಾಲಿ ಮಾಡಿಕೊಂಡು ಬೀದಿಗೆ ಬರುವ ಪರಿಸ್ಥಿತಿ ಉಂಟಾಗುತ್ತದೆ” ಎಂದು ಅಲ್ಲಿನ ವ್ಯಾಪಾರಿಗಳು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆಗ್ರಹ.
“ಬಸ್ ನಿಲ್ದಾಣದಲ್ಲಿ ಹಗಲು, ಸಂಜೆ ವೇಳೆ ಮದ್ಯ ಕುಡಿದುಬಂದು ನಿಲ್ದಾಣದ ಆಸನಗಳ ಮೇಲೆ ಮಲಗಿಕೊಳ್ಳುವುದರಿಂದ ಮಹಿಳೆಯರು, ಪುರುಷರು ಹಾಗೂ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಇರಿಸುಮುರಿಸು ಉಂಟಾಗುತ್ತಿದೆ” ಎಂದು ಚಿತ್ರದುರ್ಗದಿಂದ ನಿತ್ಯ ಸಂಚರಿಸುವ ಮಹಿಳೆಯೊಬ್ಬರು ಅಳಲು ತೋಡಿಕೊಂಡರು.
ಅಧಿಕಾರಿಗಳು ಗಮನ ವಹಿಸಿ ಶೌಚಾಲಯದ ತ್ಯಾಜ್ಯ ವಿಲೇವಾರಿಗೆ ಸಮರ್ಪಕ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕಿದೆ. ಇದು ಸುತ್ತ ಮುತ್ತಲಿನ ಪ್ರದೇಶಗಳ ನೈರ್ಮಲ್ಯ ಮತ್ತು ಪ್ರಯಾಣಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಉತ್ತಮ ಕೆಲಸವಾಗಿದೆ. ಅಧಿಕಾರಿಗಳು ತಕ್ಷಣವೇ ತ್ಯಾಜ್ಯ ವಿಲೇವಾರಿಗೆ ಪರಿಹಾರ ನೀಡಲಿ ಎನ್ನುವುದೇ ಚಳ್ಳಕೆರೆ ನಾಗರೀಕರ ಒತ್ತಾಯವಾಗಿದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು