ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಜ್ಯೂವೆಲರಿ ಮಾಲೀಕರು ಮತ್ತು ಗಿರವಿ ದಲ್ಲಾಳಿಗಳು ರಸೀದಿ ಇಲ್ಲದೆ ಯಾವುದೇ ಆಭರಣಗಳನ್ನು ಮಾರಾಟ ಮತ್ತು ಸಾಗಾಟ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ (ಮಾ.14) ಜ್ಯೂವೆಲರಿ ಮಾಲೀಕರು ಮತ್ತು ಗಿರವಿ ದಲ್ಲಾಳಿಗಳೊಂದಿಗೆ ನಡೆದ ಚುನಾವಣಾ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಜ್ಯೂವೆಲರಿ ಮಾಲೀಕರು ಮತ್ತು ಗಿರವಿ ದಲ್ಲಾಳಿಗಳು ತಮ್ಮ ದೈನಂದಿನ ವಹಿವಾಟುಗಳಲ್ಲಿ ಅನಧಿಕೃತ ರಾಜಕೀಯ ಸಂಬಂಧಿತ ಯಾವುದೇ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂದು ತಿಳಿಸಿದರು.
ಲೋಕಸಭೆ ಸಾರ್ವತ್ರಿಕ ಚುನಾವಣೆ -2024 ಕ್ಕೆ ಸಂಬಂಧಿಸಿದಂತೆ ಚುನಾವಣೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಜಿಲ್ಲೆಯಲ್ಲಿ ಚುನಾವಣೆಯನ್ನು ನ್ಯಾಯಸಮ್ಮತವಾಗಿ ಚುನಾವಣೆ ನಡೆಸಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಜ್ಯೂವೆಲರಿ ಮಾಲೀಕರು ಮತ್ತು ಗಿರವಿ ದಲ್ಲಾಳಿಗಳು (ಪಾನ್ ಬ್ರೋಕರ್ಸ್) ತಮ್ಮ ವ್ಯಾಪ್ತಿಯಲ್ಲಿ ಆಭರಣಗಳ ದೈನಂದಿನ ವಹಿವಾಟಿಗೆ ಸಂಬಂಧಿಸಿ ಯಾವುದೇ ಅನಧಿಕೃತ ರಾಜಕೀಯ ಸಂಬಂಧಿತ ಕೆಲಸಗಳಲ್ಲಿ ಭಾಗಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಸದ್ಯದಲ್ಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದರಿಂದ ಜಿಲ್ಲೆಯ ಎಲ್ಲಾ ಜ್ಯೂವೆಲರಿ ಮಾಲೀಕರು ಮತ್ತು ಗಿರವಿ ದಲ್ಲಾಳಿಗಳು ಯಾವುದೇ ರೀತಿಯ ಭಾರಿ ಮೊತ್ತದ ಅನಧಿಕೃತ ವಸ್ತುಗಳ ಅಕ್ರಮ ಸಂಗ್ರಹಣೆ, ಸಾಗಾಟ, ಮಾರಾಟ ಮಾಡುವಂತಿಲ್ಲ. ಅಕ್ರಮ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಲ್ಲಿ ಸಂಬಂಧಿಸಿದವರ ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅತಿ ಹೆಚ್ಚು ಹಣವನ್ನು ಪಡೆದುಕೊಂಡಲ್ಲಿ, ಅನಧಿಕೃತ ವ್ಯವಹಾರಗಳಿಗೆ ಯಾರಾದರೂ ಪ್ರೆರೇಪಿಸಲಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳಿಗೆ ಮಾಹಿತಿ ತಿಳಿಸಬೇಕು. ಒಟ್ಟಾರೆ, ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯನ್ನು ನ್ಯಾಯಸಮ್ಮತವಾಗಿ, ಪಾರದರ್ಶಕವಾಗಿ ನಡೆಸಲು ತಾವೆಲ್ಲರೂ ಮುಂದೆ ಬರುವ ʼಚುನಾವಣಾ ನೀತಿ ಸಂಹಿತೆʼಯನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ, ಚುನಾವಣಾ ತಹಸೀಲ್ದಾರ್ ಮುನಿಸ್ವಾಮಿರೆಡ್ಡಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲೆಯ ಜ್ಯೂವೆಲರಿ ಮಾಲೀಕರು ಮತ್ತು ಗಿರವಿ ದಲ್ಲಾಳಿಗಳು ಇದ್ದರು.
