ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆ ಹಣವಂತರು ಮತ್ತು ಪಕ್ಷಕ್ಕೆ ನಿಷ್ಠರಾಗಿರುವ ನಿಷ್ಠಾವಂತರ ನಡುವೆ ಆಂತರಿಕ ತಂತ್ರಗಾರಿಕೆ ಶುರುವಾಗಿದ್ದು, ಗದ್ದುಗೆ ಗುದ್ದಾಟದಲ್ಲಿ ಗದ್ದುಗೆ ಏರುವವರಾರು ಎಂಬುದರ ಕುರಿತು ನಗರವಾಸಿಗಳಲ್ಲಿ ಕುತೂಹಲ ಕೆರಳಿಸಿದೆ. ನಾಳೆ ಚಿಕ್ಕಬಳ್ಳಾಪುರ ನಗರಸಭೆ ಹೈಡ್ರಾಮಗಳಿಗೆ ಸಾಕ್ಷಿಯಾಗಲಿದೆ.
ಈ ಬಾರಿ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಒಲಿದಿದ್ದು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟರಿಗೆ ಮೀಸಲಾಗಿದೆ. ನಾಳೆಯೇ(ಸೆ.12ರಂದು) ನಗರಸಭೆ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳ ಮುಖಂಡರಲ್ಲಿ ಟೆನ್ಷನ್ ಶುರುವಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಸಂಖ್ಯಾಬಲ ಕುರಿತು ಎಲ್ಲೆಡೆ ಚರ್ಚೆ ಜೋರಾಗಿದೆ. ಕುದುರೆ ವ್ಯಾಪಾರ, ರೆಸಾರ್ಟ್ ರಾಜಕೀಯಕ್ಕೆ ನಾಳೆ ಅಂತ್ಯ ಬೀಳಲಿದೆ. ಹಣಬಲ, ನಿಷ್ಠಾವಂತರ ಬಲಗಳ ಕುರಿತು ದೊಡ್ಡಮಟ್ಟದ ಚರ್ಚೆಗಳಾಗುತ್ತಿವೆ.
ಮೊದಲಿಗೆ ಕಾಂಗ್ರೆಸ್‌ನಲ್ಲಿ 16 ಮಂದಿ ಸದಸ್ಯರ ಸಂಖ್ಯಾಬಲವಿತ್ತು. ಕಾಂಗ್ರೆಸ್‌ಗೆ ಬಹುಮತವಿದ್ದು, ಬಹುತೇಕ ಗೆಲುವಿನ ಕನಸನ್ನು ಸಹ ಕಂಡಿದ್ದರು. ಆದರೆ, ಕುದುರೆ ವ್ಯಾಪಾರದ ನಂತರ ನಡೆದ ಬೆಳವಣಿಗೆಗಳಲ್ಲಿ ಕಾಂಗ್ರೆಸ್‌ನ 6 ಮಂದಿ ಸದಸ್ಯರು ಬಿಜೆಪಿಯತ್ತ ಜಿಗಿದಿದ್ದು, ಕಾಂಗ್ರೆಸ್ ಪರ್ಯಾಯವಾಗಿ ಗೆಲುವಿನ ತಂತ್ರಕ್ಕೆ ಮುಂದಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಮೊದಲಿಗೆ 9(ಬಿಜೆಪಿ)+2(ಜೆಡಿಎಸ್) ಸೇರಿ 11 ಜನರ ಸಂಖ್ಯಾಬಲವಿತ್ತು. ಆನಂತರ ಬೆಳವಣಿಗೆಗಳಲ್ಲಿ ಜೆಡಿಎಸ್‌ನ ಇಬ್ಬರೂ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದು, ಬಿಜೆಪಿಯು ಸದಸ್ಯರನ್ನು ದಾರ್ಜಿಲಿಂಗ್ ಪ್ರವಾಸಕ್ಕೆ ಕಳಿಸುವ ಮೂಲಕ ರೆಸಾರ್ಟ್ ರಾಜಕೀಯಕ್ಕೆ ಮುಂದಾಗಿದೆ.
ಇನ್ನು 4 ಜನ ಪಕ್ಷೇತರ ಸದಸ್ಯರ ಪೈಕಿ ಮೂವರು ಬಿಜೆಪಿಗೆ ಬೆಂಬಲ ಸೂಚಿಸಿದ್ದು, ಒಬ್ಬರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.
ಒಟ್ಟು ಸಂಖ್ಯಾಬಲದಲ್ಲಿ ಬಿಜೆಪಿಗೆ ಮೇಲುಗೈ?
ಬಿಜೆಪಿಯ 9 ಸದಸ್ಯರು, ಕಾಂಗ್ರೆಸ್‌ನ 6 ಮಂದಿ, 3 ಜನ ಪಕ್ಷೇತರರು ಹಾಗೂ ಸಂಸದರ ಮತ ಸೇರಿ ಬಿಜೆಪಿಗೆ ಒಟ್ಟು 19 ಜನರ ಸಂಖ್ಯಾಬಲವಿದ್ದು, ಬಿಜೆಪಿ ಮೇಲುಗೈ ಸಾಧಿಸುವ ಸಾಧ್ಯತೆಗಳಿವೆ.
ಬಿಜೆಪಿ ಸಂಖ್ಯಾಬಲ ಕೈಕೊಟ್ಟರೆ ʼಕೈʼಗೆ ಜಯ
ಇದೀಗ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ಪಾಳಯದಲ್ಲಿ ಕಾಂಗ್ರೆಸ್‌ನ 10 ಜನ ಸದಸ್ಯರು, ಜೆಡಿಎಸ್‌ನ ಇಬ್ಬರು ಸದಸ್ಯರು, ಒಬ್ಬ ಪಕ್ಷೇತರ ಸದಸ್ಯ, ಇಬ್ಬರು ಎಂಎಲ್‌ಸಿಗಳು ಮತ್ತು ನಗರ ಶಾಸಕರ ಮತ ಸೇರಿ ಒಟ್ಟು 16 ಜನರ ಸಂಖ್ಯಾಬಲವಿದ್ದು, ಬಿಜೆಪಿ ಪಾಳಯದಲ್ಲಿರುವ ಯಾರಾದರೂ ಬಿಜೆಪಿಗೆ ಕೈಕೊಟ್ಟರೆ ʼಕೈʼ ಗೆಲುವು ನಿಶ್ಚಿತ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನೂ ಘೋಷಣೆಯಾಗದ ಅಭ್ಯರ್ಥಿಗಳ ಹೆಸರು
ಈ ಹಿಂದಿನ ಚುನಾವಣೆಗಳಲ್ಲಿ ಮೊದಲಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ನಂತರ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಎರಡೂ ಪಕ್ಷಗಳೂ ಇದುವರೆಗೆ ಅಭ್ಯರ್ಥಿ ಯಾರೆಂಬುದನ್ನು ಘೋಷಣೆ ಮಾಡಿಲ್ಲ. ಅಭ್ಯರ್ಥಿ ಘೋಷಣೆಯಾದರೆ ಸಂಖ್ಯಾಬಲದಲ್ಲಿ ಏರುಪೇರಾಗುವ ಸಾಧ್ಯತೆಗಳಿರುವುದರಿಂದ ಎರಡೂ ಪಕ್ಷಗಳು ಅಧಿಕೃತವಾಗಿ ಅಭ್ಯರ್ಥಿ ಘೋಷಣೆ ಮಾಡಿಲ್ಲ. ನಾಳೆಯೇ ಚುನಾವಣೆ ನಡೆಯಲಿದ್ದು, ಅಭ್ಯರ್ಥಿ ಯಾರೆಂಬುದು ಗೊತ್ತಾಗಲಿದೆ. ಆನಂತರವೂ ಸಾಕಷ್ಟು ಹೈಡ್ರಾಮಗಳು ನಡೆದರೂ ಅಚ್ಚರಿಯೇನಿಲ್ಲ.
ಸಚಿವ, ಶಾಸಕರಲ್ಲಿ ಕಾಂಗ್ರೆಸ್ ಅಧಿಕಾರದ ವಿಶ್ವಾಸ
ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಚಿವ ಎಂ.ಸಿ.ಸುಧಾಕರ್ ಮಾತನಾಡಿ, ನಾವೇನು ಸನ್ಯಾಸಿಗಳಲ್ಲ. ನಾವು ನಮ್ಮದೇ ಆದ ಶೈಲಿಯಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ವಿಪ್ ಉಲ್ಲಂಘಿಸುವ ಸದಸ್ಯರ ವಿರುದ್ಧ ಕಠಿಣ ಕ್ರಮ ನಿಶ್ಚಿತ. ಸಂಸದ ಕೆ.ಸುಧಾಕರ್ ವ್ಯವಸ್ಥೆಯನ್ನ ಹಾಳು ಮಾಡಿದ್ದಾರೆ. ದಾವಣಗೆರೆ, ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭಗಳಲ್ಲಿ ಬಿಜೆಪಿಯು ವಿಧಾನ ಪರಿಷತ್ ಸದಸ್ಯರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿದೆ. ಕಾಂಗ್ರೆಸ್‌ನ ಎಲ್ಲ ಸದಸ್ಯರು ನಗರದಲ್ಲೇ ಇದ್ದಾರೆ ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯಿಸಿ, ನಮ್ಮ ಸದಸ್ಯರನ್ನು ನಾವು ಪ್ರವಾಸ ಕಳಿಸಿಲ್ಲ. ಆದರೆ, ಬಿಜೆಪಿಯವರು ದಾರ್ಜಿಲಿಂಗ್ ಪ್ರವಾಸ ಕಳಿಸಿದ್ದಾರೆ. ಬಿಜೆಪಿಯವರು ಒಂದು ಮತಕ್ಕೆ ಲಕ್ಷಾಂತರ ರೂಪಾಯಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನಾವು ಯಾರಿಗೂ ಹಣ ಕೊಡುವುದಿಲ್ಲ. ಪಕ್ಷದ ವಿರುದ್ಧ ನಡೆದುಕೊಳ್ಳುವ ಸದಸ್ಯರನ್ನು ಪಕ್ಷದಿಂದ 6 ವರ್ಷಗಳ ಕಾಲ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ ನಗರಸಭೆ ಅಧ್ಯಕ್ಷಗಾದಿಗೆ ಐವರ ಬಿಗ್ ಫೈಟ್; ಜೆಡಿಎಸ್‌ನಲ್ಲಿ ಸಂಚಲನ
ಒಟ್ಟಾರೆಯಾಗಿ, ಚಿಕ್ಕಬಳ್ಳಾಪುರ ನಗರವಾಸಿಗಳಲ್ಲಿ ಹಣವಂತರ ಬಲ, ನಿಷ್ಠಾವಂತರ ಬಲದ ನಡುವೆ ಯಾವುದಕ್ಕೆ ಜಯ ಸಿಗಲಿದೆ ಎಂಬುದರ ಕುರಿತು ಸಾಕಷ್ಟು ಕೌತುಕವಿದ್ದು, ಗದ್ದುಗೆ ಗುದ್ದಾಟದಲ್ಲಿ ಗದ್ದುಗೆ ಏರುವವರ್ಯಾರು ಎಂಬುದನ್ನು ಕಾದುನೋಡಬೇಕಿದೆ.

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.