ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಶಾಲೆಯೊಂದರಲ್ಲಿ ಓದಿನಲ್ಲಿ ಹಿಂದುಳಿದಿದ್ದಾಳೆ ಎಂಬ ಕಾರಣಕ್ಕೆ ವಿದ್ಯಾರ್ಥಿನಿಗೆ ಶಿಕ್ಷಕಿಯೊಬ್ಬರು ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಿಕ್ಷಕಿಯ ವಿರುದ್ಧ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀತಿ ಪಬ್ಲಿಕ್ ಸ್ಕೂಲ್‌ನಲ್ಲಿ ಇಂಜಿನಿಯರಿಂಗ್ ಪದವೀಧರೆ ಸಿಂಧುಶ್ರೀ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅವರು ವಿದ್ಯಾರ್ಥಿನಿಗೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
“ಇತ್ತೀಚೆಗೆ ನಡೆಸಿದ ಪರಿಸರ ಅಧ್ಯಯನ ಪರೀಕ್ಷೆಯಲ್ಲಿ 4ನೇ ತರಗತಿ ವಿದ್ಯಾರ್ಥಿನಿ ಕಡಿಮೆ ಅಂಕಗಳನ್ನು ಗಳಿಸಿದ್ದರು. ವಿದ್ಯಾರ್ಥಿಯನ್ನು ಶಿಕ್ಷಕಿ ಪ್ರಶ್ನಿಸಿದ್ದಾರೆ. ಆಕೆ ಸರಿಯಾಗಿ ಉತ್ತರ ನೀಡದಿದ್ದಾಗ ಕೋಪಗೊಂಡ ಶಿಕ್ಷಕಿ, ಆಕೆಗೆ ತಳಿಸಿದ್ದಾರೆ” ಎಂದು ಚಿಂತಾಮಣಿ ಬ್ಲಾಕ್ ಶಿಕ್ಷಣಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.
ಬಾಲಕಿಗೆ ಗಾಯಗಳು ಮತ್ತು ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಬಾಲಕಿ ಮನೆಗೆ ತಲುಪಿದಾಗ ತೀವ್ರ ನೋವಿನಿಂದ ಬಳಲುತ್ತಿದ್ದಳು. ಪೋಷಕರು ಏನಾಯಿತು ಎಂದು ಕೇಳಿದಾಗ, ಬಾಲಕಿ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ, ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಆಕೆಯ ಪೋಷಕರೊಂದಿಗೆ ಮಾತನಾಡಿದ್ದು, ಬಾಲಕಿಗೆ ಕೆಲವು ದಿನಗಳ ವಿಶ್ರಾಂತಿ ಸೂಚಿಸಲಾಗಿದೆ. ಆರೋಪಿ ಶಿಕ್ಷಕಿಯನ್ನು ಆಕೆಯ ಆಡಳಿತ ವಜಾಗೊಳಿಸಿದೆ ಎಂದು ಬಿಇಒ ವೆಂಕಟೇಶ್ ತಿಳಿಸಿದ್ದಾರೆ.