ಬೆಳೆ ವಿಮೆ ಅಡಿಯಲ್ಲಿ ಕೊಡುವ ಅತ್ಯಲ್ಪ ಪರಿಹಾರದಲ್ಲಿ ಕೂಡ ಅಧಿಕಾರಿಗಳು ಅಕ್ರಮ ಎಸಗಿ, ರೈತರಿಗೆ ಮೋಸ ಮಾಡುತ್ತಿದ್ದಾರೆ. ವಿಮಾ ಕಂತು ಕಟ್ಟಿರುವ 1200 ರೈತರಿಗೆ ಈವರೆಗೆ ನಯಾಪೈಸೆ ಹಣ ವಿತರಣೆ ಆಗಿಲ್ಲ. ರೈತರಿಗೆ ಕೂಡಲೇ ಸೂಕ್ತ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ರೈತರು, ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಿ ನಾರಾಯಣ ರೆಡ್ಡಿ, “ಗೌರಿಬಿದನೂರು ತಾಲೂಕು ಸೊನಗಾನಹಳ್ಳಿ ಪಂಚಾಯಿತಿಯ 16 ಹಳ್ಳಿಗಳ 1200 ಮಂದಿ ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ಆದರೆ, ಈವರೆಗೆ ಪರಿಹಾರ ಬಂದಿಲ್ಲ” ಎಂದು ಆರೋಪಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಸತೀಶ್ ಮಾತನಾಡಿ, “ಜಿಲ್ಲೆಯ 6 ತಾಲೂಲುಗಳಲ್ಲಿ ಇದೇ ಪರಿಸ್ಥಿತಿ ಇದೆ. ರೈತರಿಗೆ ಮೋಸ ಮಾಡುವ ವಿಮಾ ಕಂಪನಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು. ವಿಮಾ ಮೊತ್ತ ವಿತರಣೆಯಲ್ಲಿ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ನೀಡಬೇಕು. ಗೌರಿಬಿದನೂರು ತಾಲೂಕಿನಲ್ಲಿ ಆಗಿರುವ ವಂಚನೆ ಸಂಬಂಧ ವಿಮಾ ಕಂಪನಿಗಳ ಪರವಿರುವ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಮೂರನೇ ವ್ಯಕ್ತಿಗಳ ಮೂಲಕ ಬೆಳೆ ನಷ್ಟದ ಸಮೀಕ್ಷೆ ಮಾಡಿಸಿದ್ದು ಇಂತಹ ದಲ್ಲಾಳಿಗಳ ಪರವಾಗಿರುವ ಪಿಡಿಒಗಳ ವಿರುದ್ದವೂ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
“ಬೆಳೆಯಿಟ್ಟಿರುವ ರೈತರು ತಮ್ಮ ಪಾಲಿನ ಬೆಳೆವಿಮೆ ಹಣವನ್ನು ವಿಮಾ ಕಂಪನಿಗಳಿಗೆ ಸಕಾಲಕ್ಕೆ ಪಾವತಿಸಿದ್ದಾರೆ. ಕೇಂದ್ರ ಸರ್ಕಾರ ನೀಡುವ ಪರಿಹಾರ ಹಣದಲ್ಲಿ ಕೆಲ ರೈತರಿಗೆ ಪರಿಹಾರ ಬಂದಿದೆ. ಕೆಲವರಿಗೆ ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ವಿಮಾ ಕಂಪನಿಯವರನ್ನು ವಿಚಾರಿಸಿ ಎನ್ನುತ್ತಿದ್ದಾರೆ? ಯಾವ ರೈತರಿಗೆ ವಿಮಾ ಕಂಪನಿಯವರ ಮಾಹಿತಿ ಗೊತ್ತಿರಲು ಸಾಧ್ಯ? ಅಲ್ಲದೆ ಕೆಲವು ಅಧಿಕಾರಿಗಳು ಬೆಳೆ ಕಟಾವು ಸಮೀಕ್ಷೆಯನ್ನು ಸರಿಯಾಗಿ ಮಾಡಿಲ್ಲ. ಪಿಡಿಒಗಳು ಈ ಸಂಬಂಧ ನಷ್ಟದ ಅಂದಾಜು ವರದಿಯನ್ನು ವಿಮಾ ಕಂಪನಿಗಳಿಗೆ ಸಲ್ಲಿಸಬೇಕು. ಅವರು ಸಲ್ಲಿಸಿಲ್ಲ. ಹೀಗಾಗಿ ನಿಮಗೆ ವಿಮಾ ಹಣ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ವಿಮಾ ಕಂಪನಿ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರ ಸಮಕ್ಷಮ ಸಭೆ ನಡೆಸಿ ಆಗಿರುವ ನಷ್ಟಕ್ಕೆ ಪರಿಹಾರ ನೀಡುವ ಕೆಲಸ ಮಾಡಬೇಕು” ಎಂದು ಆಗ್ರಹಿಸಿದರು.
ರೈತರ ಅಹವಾಲು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, “ಬೆಳೆ ವಿಮೆ ಸಂಬಂಧ ರೈತರಿಗೆ ಆಗಿರುವ ಮೋಸದ ಬಗ್ಗೆ ಅಧಿಕಾರಿಗಳಿಂದ ಕೂಡಲೇ ಮಾಹಿತಿ ಪಡೆಯುತ್ತೇನೆ. ವಿಚಾರ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ” ಎಂದು ಆಶ್ವಾಸನೆ ನೀಡಿದರು.
ಪ್ರತಿಭಟನೆಯಲ್ಲಿ ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಮುನೇಗೌಡ, ಕಾರ್ಯದರ್ಶಿ ನವೀನ್‌ಕುಮಾರ್, ಆಂಜಿನಪ್ಪ, ಕದಿರೇಗೌಡ, ಬಿ.ಆಂಜಿನಪ್ಪ ಇತರರಿದ್ದರು.