ರಾಜ್ಯ ಸರಕಾರ ಕೇವಲ ಶೇ.1ರಷ್ಟು ಮೀಸಲಾತಿ ಕೊಟ್ಟು, ಅದನ್ನೂ ಜಾರಿ ಮಾಡದೆ ಲಿಂಗ ಅಲ್ಪಸಂಖ್ಯಾತರನ್ನು ನಿರ್ಲಕ್ಷ್ಯ ಮಾಡುತ್ತಿದೆ. ತಕ್ಷಣ ಲೈಂಗಿಕ ಅಲ್ಪಸಂಖ್ಯಾತರ ಹಿತರಕ್ಷಣೆಗೆ ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂದು ಜೀವ ಮತ್ತು ನಿಸರ್ಗ ಸೊಸೈಟಿಯ ಪಿ.ಉಮಾ ಆಗ್ರಹಿಸಿದರು.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರಂತೆ ಸಮಾಜದಲ್ಲಿ ಸಮಾನವಾಗಿ ಬದುಕುವ ಹಕ್ಕು ಲಿಂಗತ್ವ ಅಲ್ಪಸಂಖ್ಯಾತರಿಗೂ ಇದೆ. ಆದ್ದರಿಂದ ಮೂಲಸೌಕರ್ಯ ಕಲ್ಪಿಸಲು ಸರಕಾರಗಳು ಮುಂದಾಗಬೇಕು. ಲೈಂಗಿಕ ಅಲ್ಪಸಂಖ್ಯಾತರು, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಕಳಂಕ, ತಾರತಮ್ಯ, ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗಿದೆ ಎಂದು ನೋವು ತೋಡಿಕೊಂಡರು.
ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಲಿಂಗತ್ವ ಅಲ್ಪಸಂಖ್ಯಾತರರಿದ್ದು, ಇವರಿಗೆ ರಾಜ್ಯ ಸರಕಾರದಿಂದ ಸಂವಿಧಾನಿಕವಾಗಿ ಸಿಗಬೇಕಾದ
ಯಾವುದೇ ಸೌಲಭ್ಯ ಸಿಗುತ್ತಿಲ್ಲ, ಬೇರೆ ರಾಜ್ಯಗಳಲ್ಲಿ ಕಲ್ಯಾಣ ಮಂಡಳಿಗಳನ್ನು ಸ್ಥಾಪಿಸಿ ಹಣ ಮೀಸಲಿಟ್ಟಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಆಗಿಲ್ಲ ಎಂದು ಹೇಳಿದರು.
ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣ ಹೋರಾಟಗಾರ ಕಿರಣ್ ನಾಯಕ್ ಮಾತನಾಡಿ, ರಾಜ್ಯ ಸರಕಾರ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವನ್ನು ಗುರುತಿಸುವ ಜತೆಗೆ ಲಿಂಗತ್ವ ಅಲ್ಪಸಂಖ್ಯಾತರ ರಾಜ್ಯ ಕಲ್ಯಾಣ ನಿಗಮ ಸ್ಥಾಪಿಸಿ ಅಭಿವೃದ್ಧಿಗೆ ಹಣ ಮೀಸಲಿಡಬೇಕು ಎಂದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಧಿವೇಶನ ಎಂದಾಕ್ಷಣ ಹೆದರಿ ಓಡುವ ಪ್ರಧಾನಿ ಮೋದಿ
ಸರಕಾರಿ ಕೆಲಸದಲ್ಲಿ ಶೇ.1 ಮೀಸಲು ನೀಡಲಾಗಿದೆ ಎಂದು ಹೇಳುತ್ತಿದೆ. ಆದರೆ ಜಾರಿ ಮಾಡುತ್ತಿಲ್ಲ.ವಸತಿ ಯೋಜನೆಗಳಲ್ಲಿ ನಮ್ಮನ್ನು
ಪರಿಗಣಿಸುತ್ತಿಲ್ಲ. ಕೇವಲ ವಸತಿ ರಹಿತರ ಪಟ್ಟಿ ಪಡೆದು ಮೂಲೆಗೆ ಎಸೆಯುತ್ತಿದೆ. ಕೆಲವರಿಗೆ ಜಾಗ ಕೊಟ್ಟಿದೆ ಎಂದು ಹೇಳುತ್ತಿದ್ದಾರೆ ಯಾದರೂ ಜಾಗ ಎಲ್ಲಿದೆ ಎಂದು ತೋರಿಸುವವರೇ ಇಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಒದಗಿಸಬೇಕು. ವಸತಿ ನಿವೇಶನಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ವೆಂಕಟರೆಡ್ಡಿ, ಸುಷ್ಮಾ, ಶಮೀರಾ, ವೇಣು, ಮೌಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
