ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೂರ್ಯನ ಶಾಖದ ಪ್ರಖರತೆಯಿದ ಡಿ ಹೈಡ್ರೇಷನ್, ಸನ್‌ಸ್ಟ್ರೋಕ್, ವಿಷರೀತ ತಲೆನೋವು ಸೇರಿದಂತೆ ಅನೇಕ ಕಾಯಿಲೆಗಳು ಬರುವ ಸಾಧ್ಯತೆಯಿರುವುದರಿಂದ ನಿಮ್ಮ ಸಮೀಪವಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಸಲಹೆಯನ್ನು ಪಡೆಯಿರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಮಹೇಶ್ ಕುಮಾರ್ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಪತ್ರಿಕೆ ಹೇಳಿಕೆ ನೀಡಿದ್ದು, “ಬಿಸಿಲಿನಿಂದ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿ ಹೆಚ್ಚು ನೀರು, ಮಜ್ಜಿಗೆ, ಎಳನೀರು, ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಬಹುದು. ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು, ಹಣ್ಣುಗಳನ್ನು ಸೇವಿಸುವುದು ಉತ್ತಮ” ಎಂದು ತಿಳಿಸಿದ್ದಾರೆ.
“ಹೊರಗೆ ತೆರಳುವ ವೇಳೆ ತಂಪು ಕನ್ನಡಕ, ಛತ್ರಿ, ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮಗಳನ್ನು ಪಾಲಿಸಬೇಕು. ರೇಡಿಯೋ, ದೂರದರ್ಶನ ಹಾಗೂ ದಿನಪತ್ರಿಕೆಗಳ ಮೂಲಕ ಸ್ಥಳೀಯ ಹವಮಾನದ ಮಾಹಿತಿಯನ್ನು ಪಡೆದು ಅದರಂತೆ ದೈನಂದಿನ ಚಟುವಟಿಕೆಗಳನ್ನು ಯೋಜಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ.
“ಮಧ್ಯಾಹ್ನ 12ರಿಂದ 3ರವರೆಗೆ ಬಿಸಿಲಿನಲ್ಲಿ ಅನಾವಶ್ಯಕವಾಗಿ ಓಡಾಡಬೇಡಿ. ಈ ಅವಧಿಯಲ್ಲಿ ಶ್ರಮಾದಾಯಕ ಕೆಲಸಗಳಿಂದ ವಿಶ್ರಾಂತಿ ಪಡೆಯಿರಿ. ಬಿಸಿಲಿನಲ್ಲಿ ನಡೆಯುವಾಗ ಕಡ್ಡಾಯವಾಗಿ ಚಪ್ಪಲಿ ಧರಿಸಿ” ಎಂದು ಸಲಹೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಸಂಸದ ಅನಂತ್ ಕುಮಾರ್ ಹೆಗಡೆ ಮಿನಿ ನಾಗರ: ಪ್ರೊ ಫಣಿರಾಜ್
“ಟೀ, ಕಾಫಿ ತ್ಯಜಿಸಿ, ಟೀ, ಕಾಫಿ, ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುವ ಕಾರ್ಮೋನೇಟೆಡ್ ಪಾನೀಯ ಹಾಗೂ ಮದ್ಯಪಾನದಿಂದ ದೂರವಿರುವುದು ಆರೋಗ್ಯಕ್ಕೆ ಉತ್ತಮ” ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ 104 ಸಂಪರ್ಕಿಸಿ ಎಂದು ಡಿಎಚ್‌ಒ ಡಾ ಮಹೇಶ್ ಕುಮಾರ್ ತಿಳಿಸಿದ್ದಾರೆ.