ಯಾವ ಪಕ್ಷ ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ನೀಡುತ್ತದೆಯೋ, ಅಂತಹ ಪಕ್ಷಕ್ಕೆ ನಮ್ಮ ಸಮುದಾಯ ಬೆಂಬಲ ನೀಡಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಕೋನಪ್ಪ ರೆಡ್ಡಿ ಕರೆ ನೀಡಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ಪ್ರಸ್ತುತ ಬಿಜೆಪಿಯು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಕ್ರಿಯಾಶೀಲ ನಾಯಕ ಪ್ರತಾಪ್ ಸಿಂಹ ಸೇರಿದಂತೆ ಮುಂತಾದವರಿಗೆ ಟಿಕೆಟ್ ಕೊಡದೆ ಸಮುದಾಯವನ್ನು ಕಡೆಗಣಿಸಿದೆ. ಸ್ಥಳೀಯ ಒಕ್ಕಲಿಗ ನಾಯಕರಿಗೆ ಆದ್ಯತೆ ಕೊಟ್ಟಿಲ್ಲ. ಹಾಗಾಗಿ ನಮಗೆ ಎಲ್ಲಿ, ಯಾವ ಪಕ್ಷ, ಯಾವ ಸರ್ಕಾರ ಆದ್ಯತೆ ನೀಡುತ್ತದೆಯೋ ಅಂತಹ ಪಕ್ಷಕ್ಕೆ ನಾವು ಬೆಂಬಲ ಕೊಡುತ್ತೇವೆ” ಎಂದು ಪುನರುಚ್ಛರಿಸಿದರು.
“ಸಮುದಾಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ನಮ್ಮ ಸಮುದಾಯವನ್ನು ನಿರ್ಲಕ್ಷಿಸುವ ಪಕ್ಷವನ್ನು ನಮ್ಮ ಸಮುದಾಯ ನಿರ್ಲಕ್ಷ್ಯ ಮಾಡುತ್ತದೆ” ಎಂದು ಹೇಳಿದರು.
“ರಾಜ್ಯದಲ್ಲಿ ಶೇ.16ರಷ್ಟು ಮಂದಿ ಒಕ್ಕಲಿಗ ಸಮುದಾಯದವರಿದ್ದಾರೆ. ನಮಗೆ ಪ್ರಾತಿನಿಧ್ಯ ಕೊಡಬೇಕು. ಕೊಡದಿದ್ದಲ್ಲಿ ನಮಗೆ ಆಧ್ಯತೆ ನೀಡುವ ಕಡೆ ಸಮುದಾಯ ಹೋಗಬೇಕು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 7.45 ಲಕ್ಷ ಒಕ್ಕಲಿಗ ಮತದಾರರಿದ್ದಾರೆ. ಬಿಜೆಪಿಯಲ್ಲಿ ಉಳಿದಿರುವುದು ಚಿಕ್ಕಬಳ್ಳಾಪುರ ಕ್ಷೇತ್ರ ಒಂದೇ. ಆದ್ದರಿಂದ ಈ ಬಾರಿ ಒಕ್ಕಲಿಗ ಸಮುದಾಯದ ಸ್ಥಳೀಯರಿಗೆ ಟಿಕೆಟ್ ನೀಡಬೇಕು” ಎಂದು ಒತ್ತಾಯಿಸಿದರು.
“ಸರ್ಕಾರದ ಜಾತಿಗಣತಿ ನಿರ್ಧಾರ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ. ಇದರಿಂದ ನಮ್ಮ ಸಮುದಾಯಕ್ಕೆ ಸರ್ಕಾರಿ ಕೆಲಸ ಗಗನಕುಸುಮ ಆಗುತ್ತದೆ. ಇಷ್ಟು ದಿನ ಸ್ವತಃ ಡಿಸಿಎಂ ಡಿಕೆಶಿ ಅವರೇ ಜಾತಿಗಣತಿಯನ್ನು ಮಾಡದಂತೆ ತಡೆದಿದ್ದಾರೆ. ಜಾತಿ ಗಣತಿಗೆ ನಮ್ಮ ಸಮುದಾಯದ ಸಂಪೂರ್ಣ ವಿರೋಧವಿದೆ” ಎಂದು ಸರ್ಕಾರದ ನಡೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ದೇಸು ಗೇಮು ಚವ್ಹಾಣ ಕಾಂಗ್ರೆಸ್‌ಗೆ ಮರು ಸೇರ್ಪಡೆ
ಸುದ್ದಿಗೋಷ್ಟಿಯಲ್ಲಿ ಶಿವಾರೆಡ್ಡಿ, ನಾಗರಾಜ ರೆಡ್ಡಿ, ಕೃಷ್ಣ ರಾಜ ರೆಡ್ಡಿ, ಒಕ್ಕಲಿಗ ಸಂಘದ ಮತ್ತೊಬ್ಬ ನಿರ್ದೇಶಕ, ಒಕ್ಕಲಿಗ ಸಮುದಾಯ ಭವನದ ಕಾರ್ಯದರ್ಶಿ ಬೈರಾರೆಡ್ಡಿ ಇದ್ದರು.