ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಂಭಂದ ಬಲಗೈ ಹಾಗೂ ಎಡಗೈ ಸಮುದಾಯಗಳಿಗೆ ಶೇ.6 ರಷ್ಟು ಹಾಗೂ ಭೋವಿ, ಲಮಾಣಿ, ಕೊರಮ,ಕೊರಚ,ಸೇರಿದಂತೆ ಇತರ ಸೂಕ್ಷ್ಮ ಅಲೆಮಾರಿ ಸಮುದಾಯಗಳಿಗೆ ಶೇ.5 ರಷ್ಟು ಮೀಸಲಾತಿ ವರ್ಗೀಕರಣಕ್ಕೆ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದ್ದು ಸ್ವಾಗತಾರ್ಹ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಸಮುದಾಯದ ಮುಖಂಡ ಪಟ್ರೇನಹಳ್ಳಿ ಕೃಷ್ಣ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 35 ವರ್ಷಗಳ ಒಳ ಮೀಸಲಾತಿ ಸಂಬಂಧದ ಸುದೀರ್ಘ ಹೋರಾಟಕ್ಕೆ ಸಂದ ಜಯವಾಗಿದ್ದು ಬಹಳಷ್ಟು ಸಂತೋಷ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇಡೀ ಸಚಿವ ಸಂಪುಟಕ್ಕೆ ಅಭಿನಂದನೆ ತಿಳಿಸುತ್ತೇನೆ. ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಮೂರು ದಶಕಗಳ ನಿರಂತರವಾಗಿ ನಡೆದ ಅನೇಕ ಹೋರಾಟದಲ್ಲಿ ಅನೇಕ ಪ್ರಮುಖರು,ಸಮುದಾಯದವರು ಅನೇಕ ರೀತಿಯ ಪ್ರತಿಭಟನೆ, ಚಳುವಳಿ, ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಮೀಸಲಾತಿಗಾಗಿ ಹೋರಾಟ ನಡೆಸಿದ್ದರು ಎಂದರು.
ಒಳ ಮೀಸಲಾತಿಗೆ ಸಂಬಂಧಿಸಿದಂತೆ ಅನೇಕ ವರದಿಗಳು ಹಿಂದಿನ ಎಲ್ಲ ಸರ್ಕಾರಗಳಿಗೆ ಸಲ್ಲಿಸಲಾಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ನ್ಯಾ. ನಾಗಮೋಹನ್ದಾಸ್ ಸಲ್ಲಿಸಿದ ವರದಿಯಂತೆ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯನ್ನು ಶೇಕಡವಾರು 6:6:5 ಎಂದು ಹಂಚಿಕೆ ಮಾಡಲಾಗಿದ್ಧು 35 ವರ್ಷಗಳ ಸುದೀರ್ಘ ಹೋರಾಟಕ್ಕೆ ಜಯ ಎಂದರು.
ಚುನಾವಣೆ ಪೂರ್ವದಲ್ಲಿ ಒಳಮೀಸಲಾತಿ ಜಾರಿ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಮಾದಿಗ ಸಮಾಜ ಅವರ ಬೆಂಬಲಕ್ಕೆ ನಿಂತು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿತ್ತು. ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಿ ನುಡಿದಂತೆ ನಡೆದಿರುವ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಾದ ಕೆ.ಹೆಚ್.ಮುನಿಯಪ್ಪ,ಮಾಜಿ ಸಚಿವ ಆಂಜನೇಯ ಅವರಿಗೆ ಅಭಿನಂದನೆಗಳು ತಿಳಿಸುತ್ತೇನೆಂದರು.
ಸಮುದಾಯದ ಹಿರಿಯ ಮುಖಂಡರಾದ ಶಿಡ್ಲಘಟ್ಟ ನಾರಾಯಣಸ್ವಾಮಿ ಮಾತನಾಡಿ, ಒಳ ಮೀಸಲಾತಿ ಜಾರಿಗೆ ತರಲು ಸಚಿವರಾದ ಕೆ.ಹೆಚ್.ಮುನಿಯಪ್ಪ ಬಹಳಷ್ಟು ಕಾಳಜಿಯಿಂದ ಪ್ರತಿ ಹಂತದಲ್ಲೂ ಮುಂಚೂಣಿಯಲ್ಲಿದ್ದರು. ಹಾಗೆ ಎಡಗೈ ಸಮುದಾಯದವರು ಪ್ರತಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸುದೀರ್ಘ 30 ವರ್ಷಗಳ ಹೋರಾಟದ ಫಲವಾಗಿ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯನ್ನು ಶೇಕಡಾವಾರು ಹಂಚಿಕೆ ಮಾಡಿದ್ದು ನಮ್ಮ ಮುಂದಿನ ಪೀಳಿಗೆಗೆ ವಿವಿಧ ಕ್ಷೇತ್ರಗಳಲ್ಲಿ ಬಹಳ ಅನುಕೂಲವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ನಾರಾಯಣಮ್ಮ, ನಗರಸಭೆ ನಾಮ ನಿರ್ದೇಶನ ಸದಸ್ಯೆ ಅಣ್ಣಮ್ಮ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ಮಂಚನಬೆಲೆ ಪ್ರಕಾಶ್ ಇದ್ದರು.
