ಪಂಚ ಗ್ಯಾರೆಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಮೂಲಕ ಗ್ಯಾರೆಂಟಿ ಅನುಷ್ಠಾನವನ್ನು ಶೇ.100ರಷ್ಟು ಪ್ರಗತಿ ಸಾಧಿಸಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ಎನ್ ರಮೇಶ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ಅವರು ಮಂಗಳವಾರ ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿಯ ಮಿನಿ ಸಭಾಂಗಣದಲ್ಲಿ ನಡೆದ ʼಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನʼ ಕುರಿತ ಪ್ರಗತಿ ಪರಿಶೀಲನ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಪಂಚ ಗ್ಯಾರೆಂಟಿ ಯೋಜನೆಗಳಿಂದ ಯಾವುದೇ ಅರ್ಹ ಫಲಾನುಭವಿಗಳು ಈವರೆಗೆ ಅನಿವಾರ್ಯ ಕಾರಣಗಳಿಂದ ವಂಚಿತರಾಗಿದ್ದಲ್ಲಿ ಅಂತಹವರ ಮಾಹಿತಿ ಪಡೆದುಕೊಂಡು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅವರನ್ನು ಸಂಪರ್ಕಿಸಿ ಯೋಜನೆಗಳ ಸೌಲಭ್ಯವನ್ನು ತಲುಪಿಸಬೇಕು. ಪಂಚ ಗ್ಯಾರೆಂಟಿ ಯೋಜನೆಗಳ ಬಗ್ಗೆ ಗ್ರಾಮಾಂತರ ವ್ಯಾಪ್ತಿಯಲ್ಲಿ ಅಧಿಕಾರಿಗಳು ಅರಿವು ಮೂಡಿಸಲು ಕ್ರಮ ವಹಿಸಬೇಕು” ಎಂದು ತಿಳಿಸಿದರು.
“ಗೃಹಲಕ್ಷ್ಮಿ ಯೋಜನೆಯಡಿ ಜುಲೈ 2023 ರಿಂದ ಮೇ 2025ವರಗೆ 108,168,88000 ರಷ್ಟು ಮೊತ್ತವನ್ನು ಪಾವತಿಸಲಾಗಿದೆ. ಯುವನಿಧಿ ಯೋಜನೆ ಅಡಿ ಮೇ-2025ರ ಮಾಸಾಂತ್ಯಕ್ಕೆ 3569 ಫಲಾನುಭವಿಗಳಿಗೆ ರೂ. 7,69,65,000 ಮೊತ್ತವನ್ನು DBT ಮೂಲಕ ಜಮೆ ಮಾಡಲಾಗಿರುತ್ತದೆ. ಗೃಹಜ್ಯೋತಿ ಯೋಜನೆಯಡಿ ಆಗಸ್ಟ್-2023ರಿಂದ ಜೂನ್-2025 ಮಾಹೆಯವರೆಗೆ 9,47,284 ಫಲಾನುಭವಿಗಳಿಗೆ ಸೌಲಭ್ಯವನ್ನು ಒದಗಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಜುಲೈ 2023ರಿಂದ ಡಿಸೆಂಬರ್ 2024ರವರೆಗೆ ಒಟ್ಟು 47,86,578 ಪಡಿತರ ಚೀಟಿಗಳ ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗಿದೆ” ಎಂದರು.
ಶಕ್ತಿ ಯೋಜನೆಯಿಂದ ಜಿಲ್ಲೆಯಲ್ಲಿ 2023ರ ಜೂನ್ 11ರಿಂದ 2025ರ ಜುಲೈ 17ರವರೆಗೆ ₹7,35,48,898 ಉಚಿತ ಟಿಕೆಟ್‌ಗಳನ್ನು ಪಡೆದುಕೊಂಡು ಪ್ರಯಾಣಿಕರು ಸರ್ಕಾರಿ ಸಾರಿಗೆ ಮೂಲಕ ಪ್ರಯಾಣಿಸಿದ್ದಾರೆ” ಎಂದು ತಿಳಿಸಿದರು.
“ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಶೇ.100ರಷ್ಟು, ಗೃಹಲಕ್ಷ್ಮಿ ಯೋಜನೆಯಡಿ ಶೇ.98ರಷ್ಟು, ಅನ್ನಭಾಗ್ಯ ಯೋಜನೆ ಅಡಿ ಶೇ.97ರಷ್ಟು, ಗೃಹಜ್ಯೋತಿ ಯೋಜನೆಯಡಿ ಶೇ.96ರಷ್ಟು ಪ್ರಗತಿ ಸಾಧಿಸಲಾಗಿದೆ. ಯುವನಿಧಿ ಯೋಜನೆಯ ಪ್ರಗತಿ ಸಾಧನೆಯು ಜಿಲ್ಲೆಯಲ್ಲಿ ಆಶಾದಾಯಕವಾಗಿಲ್ಲ. ಆದ್ದರಿಂದ ತಾಲೂಕು ಮಟ್ಟ ಹಾಗೂ ಗ್ರಾಮಾಂತರ ಪ್ರದೇಶದ ಪದವಿ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಗಾರಗಳನ್ನು ಹಮ್ಮಿಕೊಂಡು ನಿಗದಿತ ಪ್ರಗತಿಯನ್ನು ಸಾಧಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಕನಿಷ್ಠ ಆರು ತಿಂಗಳಿಗೊಮ್ಮೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ: ಓಂಕಾರ್ ಮೂರ್ತಿ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ ನವೀನ್ ಭಟ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷಾ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ ಬಸವರಾಜು, ಜಿಲ್ಲಾ ಉದ್ಯೋಗಾಧಿಕಾರಿ ಎಂ. ಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೆಂಕಟೇಶ್ ರೆಡ್ಡಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಕೆಳಗಿನಮನಿ, ಜಿಲ್ಲಾ ಪಂಚ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ರಾಮಕೃಷ್ಣಪ್ಪ, ಜಿ ಸುಬ್ಬಾರೆಡ್ಡಿ, ಆದಿರೆಡ್ಡಿ, ಸದಸ್ಯರಾದ ಜಯರಾಮ್, ನಾರಾಯಣಸ್ವಾಮಿ, ನಿರ್ಮಲ ಗಂಗಾಧರ, ಎಂ ಕೆ ವೇಣುಗೋಪಾಲ್, ಮುನಿನಾರಾಯಣಪ್ಪ, ಟಿ ರಾಧಾಕೃಷ್ಣ, ತಾರಾನಾಥ್, ಮಧುಸೂದನ್ ರೆಡ್ಡಿ, ಪಿ ಆರ್ ಚಲಂ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.