ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಕೇಂದ್ರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆ ನಡೆಯುತ್ತಿದ್ದು, ತಾಲೂಕು ಆಡಳಿತ ಯಂತ್ರಾಂಗವನ್ನು ಸ್ಥಗಿತಗೊಳಿಸಿ ಕಚೇರಿ ಪ್ರವೇಶ ದ್ವಾರಕ್ಕೆ ಪೊಲೀಸ್ ಬಂದೋಬಸ್ತ್ ಮಾಡಿ ಸಾರ್ವಜನಿಕ ಕೆಲಸಗಳಿಗೆ ಅಡ್ಡಪಡಿಸಿರುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಾರ್ವಜನಿಕರ ಕೆಲಸಕ್ಕೆ ಅಡ್ಡಿಪಡಿಸಿದ್ದು, ಪ್ರಶ್ನಿಸಿದವರಿಗೆ ಅಧಿಕಾರಿಗಳು, ʼಜಿಲ್ಲಾಧಿಕಾರಿ ಆದೇಶ ಇದೆ. ಏನಾದರೂ ತುರ್ತು ಇದ್ದರೆ ನಮಗೆ ತಿಳಿಸಿʼ ಎನ್ನುತ್ತಿರುವುದಾಗಿ ತಿಳಿದುಬಂದಿದೆ.
ದಸಂಸ ಮುಖಂಡ ಜಿ ವಿ ಗಂಗಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಗುಡಿಬಂಡೆ ಕ್ಷೇತ್ರದಲ್ಲಿ ಎಂಎಲ್‌ಸಿ ಚುನಾವಣೆ ನಡೆಯುತ್ತಿದೆ. ತಾಲೂಕು ಕಚೇರಿಯಲ್ಲೇ ಬೂತ್ ಅಳವಡಿಸಿದ್ದಾರೆ. ಈ ನೆಪವನ್ನೇ ಇಟ್ಟುಕೊಂಡು ತಾಲೂಕು ಆಡಳಿತ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿದೆ. ಕೇಳಲು ಹೋದರೆ ಚುನಾವಣೆ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆ. ಇಲ್ಲಿಂದ ಹೋಗಿ, ಇಲ್ಲದಿದ್ದಲ್ಲಿ ಕಾನೂನು ಕ್ರಮ ಜರುಗಿಸುತ್ತೇವೆಂದು ಉಪ ತಹಶೀಲ್ದಾರ್ ಶೋಭಾ ಅವರು ಬೆದರಿಕೆಯೊಡ್ಡುತ್ತಿದ್ದಾರೆ” ಎಂದು ಆರೋಪಿಸಿದರು.

“ಕಚೇರಿ ಕೆಲಸಕ್ಕಾಗಿ ಬಂದ ಸಾರ್ವಜನಿಕರನ್ನು ನಾಳೆ ಬನ್ನಿ ಎಂದು ವಾಪಸ್ ಕಳುಹಿಸಿದ್ದಾರೆ. ಆದರೆ ನುಲಿಗುಂಬ ಗ್ರಾಮದ ರೈತರು ಕೇಳಿದ ಪಹಣಿಗಳನ್ನು ಅವರಿಗೆ ಕಾನೂನು ಬಾಹಿರವಾಗಿ ತರಿಸಿ ಕೊಡಿಸಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಮುಟ್ಟಿನ ಅಂಧತ್ವ ಕಳೆದುಕೊಳ್ಳದ ಗೊಲ್ಲರಹಟ್ಟಿಗಳು; ಚಿಕ್ಕನಾಯಕನಹಳ್ಳಿಯಲ್ಲಿ ಮಗು, ಬಾಣಂತಿ ರಕ್ಷಣೆ
ಕಾನೂನು ಬಾಹಿರ ಸಾರ್ವಜನಿಕ ನಿರ್ಬಂಧತೆಯನ್ನು ಖಂಡಿಸಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಜಿ ವಿ ಗಂಗಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಆದ್ಯತೆಯ ಮೇರೆಗೆ ಸಾರ್ವಜನಿಕ ಸೇವೆಗೆ ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.
