ಉದ್ಯೋಗದ ಆಮಿಷವೊಡ್ಡಿ ಎಂಜಿನಿಯರ್ ಒಬ್ಬರಿಗೆ ₹23 ಲಕ್ಷ ಆನ್‌ಲೈನ್ ವಂಚನೆಯಾಗಿದ್ದು, ಈ ಕುರಿತು ಚಿಕ್ಕಬಳ್ಳಾಪುರ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ನಿವಾಸಿ ಶ್ರೀಕಾಂತ್ ಹಣ ಕಳೆದುಕೊಂಡವರು. ಶ್ರೀಕಾಂತ್‌ಗೆ ಟೆಲಿಗ್ರಾಂನಲ್ಲಿ ಜಾಬ್ ಆಫರ್ ಎಂಬ ಸಂದೇಶ ಬಂದಿತ್ತು. ಸಂದೇಶದಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ ನಂತರ CARS 24 ಎಂಬ ಗ್ರೂಪ್‌ಗೆ ಸೇರಿಸಿದ್ದರು. ಆನಂತರ ಉದ್ಯೋಗ ಆರಂಭ ಮಾಡಲು ಮೊದಲಿಗೆ ₹10,000 ಡೆಪಾಸಿಟ್ ಮಾಡುವಂತೆ ವಂಚಕರು ತಿಳಿಸಿದ್ದರು ಎನ್ನಲಾಗಿದೆ.
ಡೆಪಾಸಿಟ್ ಮಾಡಿದ ಬಳಿಕ ಕೆಲ ಟಾಸ್ಕ್ ಕೊಡಲಾಗಿತ್ತು. ಟಾಸ್ಕ್ ಮುಗಿಸಿದ ಬಳಿಕ ಶ್ರೀಕಾಂತ್ ಖಾತೆಗೆ ₹16,500 ಹಣ ಬಂದಿತ್ತು. ಇದನ್ನು ನಂಬಿದ್ದ ಶ್ರೀಕಾಂತ್ ಹಂತ ಹಂತವಾಗಿ ಸುಮಾರು ₹23 ಲಕ್ಷ ಹಣವನ್ನು ಜಮೆ ಮಾಡಿದ್ದರೆಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ರೈತ ಹೋರಾಟಕ್ಕೆ ಯಾವುದೇ ಪಕ್ಷ ತಲೆಬಾಗಲೇಬೇಕು: ಶಾಸಕ ಎಂ ಆರ್ ಪಾಟೀಲ್
ಬಳಿಕ ಮತ್ತೆ ₹13 ಲಕ್ಷ ಹಣವನ್ನು ಡೆಪಾಸಿಟ್ ಮಾಡಿದರೆ ಮಾತ್ರ ನಿಮಗೆ ಹಣವನ್ನು ಹಾಕಲಾಗುತ್ತದೆ ಎಂದು ತಿಳಿಸಿದ್ದರು. ಇದರಿಂದ ಎಚ್ಚೆತ್ತ ಶ್ರೀಕಾಂತ್ ತಾವು ಮೋಸ ಹೋಗಿರುವುದನ್ನು ಮನಗಂಡು ಸೆನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.